Advertisement

ಗ್ರಾಮೀಣ ಸಮಸ್ಯೆಗಳಿಗೆ ಮೊದಲ ಆದ್ಯತೆ: ಶಾಸಕ

09:14 PM Oct 28, 2019 | Lakshmi GovindaRaju |

ದೇವನಹಳ್ಳಿ: ಗ್ರಾಮೀಣ ಪ್ರದೇಶದಲ್ಲಿ ಖಾಲಿ ಇರುವ ಸರ್ಕಾರ ಜಾಗ ಹುಡುಕಿ ದಾಖಲೆ ನೀಡಿ ಎಂದು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಎಲ್‌.ಎನ್‌ ನಾರಾಯಣಸ್ವಾಮಿ ತಾಕೀತು ಮಾಡಿದರು. ತಾಲೂಕಿನ ಗೊಬ್ಬರ ಗುಂಟೆ ಸರ್ಕಾರಿ ಶಾಲಾ ಆವರಣದಲ್ಲಿ ಆವತಿ ಗ್ರಾಮ ಪಂಚಾಯಿತಿ ವತಿಯಿಂದ ಮೊದಲ ಹಂತದ ಗ್ರಾಮ ಸಭೆ ಯನ್ನು ಉದ್ಘಾಟಿಸಿ ಮಾತನಾಡಿದರು.

Advertisement

ರಸ್ತೆ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ನನ್ನ ಗಮನಕ್ಕೆ ತಂದಿದ್ದು, ಸಮಸ್ಯೆ ಪರಿಹರಿಸಲಾಗುವುದು. ತಾಲೂಕಿನಲ್ಲಿ ಕಳೆದ 2 ತಿಂಗಳಿನಲ್ಲಿ 1,668 ಅರ್ಹರಿಗೆ ನಿವೇಶನದ ಹಕ್ಕು ಪತ್ರ ವಿತರಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 7 ರ ರಸ್ತೆ ಅಗಲೀಕರಣ ವೇಳೆ ನಿವೇಶನ ಕಳೆದುಕೊಂಡವರಿಗೆ ನಿವೇಶನ ನೀಡಿದ್ದರೂ, ನಿವೇಶನದ ಹಕ್ಕು ಪತ್ರದ ಸರ್ವೇ ನಂ ಮತ್ತು ವಾಸ ಮಾಡುತ್ತಿರುವ ಜಾಗಕ್ಕೂ ತಾಳೆ ಆಗುತ್ತಿಲ್ಲ. ಸ್ಥಳ ಪರಿಶೀಲನೆ ನೆಡಿಸಿ ಸಮಸ್ಯ ಬಗೆಹರಿಸಬೇಕು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕಾಟಾಚಾರಕ್ಕೆ ಸಭೆಗೆ ಬಂದು ಸುಳ್ಳು ಆಶ್ವಾಸನೆ ನೀಡಿ ಹೋದರೆ ಜನ ನಂಬುವುದಿಲ್ಲ. ನಾವು ಹೇಳಿದ ಕೆಲಸವನ್ನು ಮಾಡಿ ತೋರಿಸಬೇಕು. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು. ವಾಲ್ಮೀಕಿ ಭವನಕ್ಕೆ ನಿವೇಶನ ಗುರುತಿಸಿ ದಾಖಲೆ ತೋರಿಸಿದರೆ ಶಾಸಕರ ಅನುದಾನದಲ್ಲಿ ಕಟ್ಟಡ ನಿರ್ಮಾಣಕ್ಕೆ 10 ಲಕ್ಷ ರೂ ಅನುದಾನವನ್ನು ನೀಡುತ್ತೇನೆ ಎಂದು ಹೇಳಿದರು.

ಗ್ರಾಪಂ ಸದಸ್ಯ ಗೋಪಾಲ ಕೃಷ್ಣ ಮಾತನಾಡಿ, ಕೋರಮಂಗಲ ಸಂಪರ್ಕದ ತೋಟದ ರಸ್ತೆಗೆ 1996-97 ರಲ್ಲಿ ಜಿಪಂ ವತಿಯಿಂದ ಜೆಲ್ಲಿ ಕಲ್ಲು ಹಾಕಿ ಅಭಿವೃದ್ಧಿ ಪಡಿಸಲಾಗಿತ್ತು. ಈ ರಸ್ತೆ ಸಮಸ್ಯೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಹೋಗಿದ್ದಾರೆ. ಆದರೆ ತಾಲೂಕು ಮಟ್ಟದ ಅಧಿಕಾರಿಗಳು ಏನು ಹೇಳುತ್ತಾರೋ ಗೊತ್ತಾಗುವುದಿಲ್ಲ. ರಸ್ತೆಯ ಅಕ್ಕ ಪಕ್ಕದ ತೋಟದವರು ರಸ್ತೆಗೆ ಜಾಗ ಕೊಟ್ಟಿದ್ದಾರೆ. ಒಬ್ಬರೂ ಮಾತ್ರ ಜಾಗವನ್ನು ಬಿಟ್ಟುಕೊಟ್ಟಿಲ್ಲ.

ಶಾಸಕರು ಈ ಸಮಸ್ಯೆಯನ್ನು ಬಗೆ ಹರಿಸಿಕೊಡಬೇಕು. ಆವತಿ ಗ್ರಾಮದಲ್ಲಿ ವಾಸ ಎಂದು ಹೇಳಿ ನಮ್ಮ ಗ್ರಾಮದಲ್ಲಿ ನಿವೇಶನ ಪಡೆದು ಮಾರಾಟ ಮಾಡಿದ್ದಾರೆ. ಪದೇ ಪದೇ ಆವತಿ ಗ್ರಾಮದವರಿಗೆ ನಿವೇಶನ ನೀಡಿದರೆ ಸ್ಥಳೀಯರ ಪಾಡೇನು ಯಾವುದೇ ಕಾರಣಕ್ಕೂ ಸ್ಥಳೀಯ ಗ್ರಾಮದ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗವನ್ನು ಸ್ಥಳೀಯ ಅರ್ಹ ಎಲ್ಲಾ ಸಮುದಾಯದವರನ್ನು ಗುರುತಿಸಿ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು.

Advertisement

ಗ್ರಾಪಂ ಸದಸ್ಯ ಎ.ಸಿ ನಾಗರಾಜ್‌ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ನಿವೇಶನ ನೀಡಲಾಗಿದೆ. ಸ್ಥಳೀಯ ಗ್ರಾಮಸ್ಥರು ಅರ್ಜಿ ಸಲ್ಲಿಸಿರಲಿಲ್ಲ. ಹಳೆ ಪಂಚಾಯಿತಿಯ ಕಟ್ಟಡದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಿ ಪಂಚಾಯಿತಿಗೆ ಆದಾಯ ಬರುವಂತೆ ತೀರ್ಮಾನ ಮಾಡಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಗಳನ್ನು ನೀಡಲಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ಅಧ್ಯಕ್ಷತೆಯನ್ನು ವಹಿಸಿದ್ದು, ಜಿಪಂ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಕನ್ಯಾ ಕುಮಾರಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ರಾಧಮ್ಮ, ತಾಪಂ ಅಧ್ಯಕ್ಷೆ ಚೈತ್ರಾ, ಸದಸ್ಯೆ ನಂದಿನಿ, ತಾಪಂ ಇಒ ಮುರುಡಯ್ಯ, ಬಿಇಒ ಗಾಯಿತ್ರೀ ದೇವಿ, ಗ್ರಾಪಂ ಉಪಾಧ್ಯಕ್ಷೆ ನಾಗರತ್ನಮ್ಮ, ಸದಸ್ಯರಾದ ಎವಿ ಕೆಂಪೇಗೌಡ, ವೆಂಕಟೇಶ್‌, ಆರ್‌ ವೆಂಕಟೇಶ್‌, ಮುನಿ ನಾರಾಯಣಪ್ಪ, ರಾಜಶೇಖರ್‌, ಶಿಲ್ಪ, ಸರಸ್ವತಮ್ಮ, ಶೋಭಾ, ಭಾಗ್ಯಮ್ಮ, ಎನ್‌ ಮಾಲತಿ, ನರಸಿಂಹ ಮೂರ್ತಿ, ಪಿಡಿಒ ಕೃಷ್ಣಪ್ಪ, ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next