Advertisement

ನವ ಸಂವತ್ಸರದ ಪ್ರಥಮ ಪರ್ವ

09:07 PM Apr 04, 2019 | mahesh |

ನಾನು ಚಿಕ್ಕವಳಿದ್ದಾಗ ಬೇಸಿಗೆ ರಜೆ ಬಂದಿತೆಂದರೆ ಅಜ್ಜಿ ಮನೆಯೇ ನಮ್ಮ ಠಿಕಾಣಿಯ ಸ್ಥಳ. ಮಾರ್ಚ್‌- ಏಪ್ರಿಲ್‌ ತಿಂಗಳಲ್ಲಿ ಬರುವ ವರ್ಷದ ಮೊದಲ ಹಬ್ಬ ಯುಗಾದಿಯನ್ನು ಬಾಲ್ಯದಲ್ಲಿ ಅಲ್ಲೇ ಸಂಭ್ರಮಿಸುತ್ತಿದ್ದುದು. ಯುಗಾದಿ ಎಂದರೆ ಅದೆಂಥಹುದೋ ಮಿಂಚಿನ ಸಂಚಾರ ಅಜ್ಜಿಯಲ್ಲಿ. ವಾರಕ್ಕೂ ಮುಂಚೆಯೇ ಸೀರೆಯ ನೆರಿಗೆಗಳ ಸೊಂಟಕ್ಕೆ ಎತ್ತಿ ಕಟ್ಟಿ ಮನೆಯ ಮೂಲೆಮೂಲೆಯನ್ನೂ ಸ್ವಚ್ಛ ಮಾಡಲು ಶುರುವಿಟ್ಟುಕೊಂಡರೆ ಮುಗಿಯಿತು, ನಾವೆಲ್ಲ ಮಕ್ಕಳು ಬಾವಿಯಿಂದ ಅದೆಷ್ಟು ನೀರು ಸೇದಿ ತಂದರೂ ಹಿತ್ತಿಲು-ಅಂಗಳ ತೊಳೆಯಲಿಕ್ಕೇ ಸಾಲದು ಎನ್ನಿಸುತ್ತಿತ್ತು. ಆ ವಯಸ್ಸಿನಲ್ಲೂ ಅಷ್ಟು ಅಚ್ಚುಕಟ್ಟು ಅಜ್ಜಿ. ಅದನ್ನು ನೋಡಿಯೇ ನಮಗೆ ಸುಸ್ತಾಗುತ್ತಿತ್ತು. ಅಜ್ಜಿಯ ಸಹಾಯಕ್ಕೆನ್ನುವಂತೆ ಚಿಕ್ಕತ್ತೆ, ದೊಡ್ಡತ್ತೆ ನಿಲ್ಲುತ್ತಿದ್ದರು. ಹಳೆಯ ಕೊಳೆಯನ್ನೆಲ್ಲ ತೊಳೆದು ಹೊಸ ಸಂವತ್ಸರವ ಬರಮಾಡಿಕೊಳ್ಳುತ್ತಿದ್ದರು.

Advertisement

ಹಬ್ಬದ ದಿನವಂತೂ ಬೆಳಗಿನಿಂದಲೇ ಸಂಭ್ರಮ ಶುರು. ಮಕ್ಕಳೆಲ್ಲರಿಗೂ ಬಿಸಿಬಿಸಿ ಎಣ್ಣೆ-ನೀರಿನ ಸ್ನಾನ. ಅದಾದ ನಂತರ ತೋಟಕ್ಕೆ ಹೋಗಿ ಮಾವಿನ ಎಲೆ, ಬೇವಿನ ಎಲೆ, ಅಡಿಕೆಪಟ್ಟೆಯ ತುಂಬಾ ವಿವಿಧ ಹೂವುಗಳ ತಂದು ಮನೆಯ ಬಾಗಿಲುಗಳ ಸಿಂಗರಿಸಿ, ಬೇವಿನ ಹೂವಿಗೆ ಬೆಲ್ಲ, ಕಡಲೆಪಪ್ಪು, ಕೊಬ್ಬರಿ ಸೇರಿಸಿ ಪೂಜೆಯಾದ ಮೇಲೆ ಎಲ್ಲರಿಗೂ ಈ ನೈವೇದ್ಯವ ಹಂಚಿ ಬೇವು-ಬೆಲ್ಲದಂತೆ ಬದುಕು ಕೂಡ ಸರಿದೂಗಿಸಿಕೊಂಡು ಹೋಗಲಿ ಎಂದು ಆಶೀರ್ವದಿಸುತ್ತಿದ್ದರು ಅಜ್ಜ. ಇವೆಲ್ಲ ಮುಗಿಯುವ ಹೊತ್ತಿಗೆ ಅಡುಗೆ ಮನೆಯಿಂದ ಬರುತ್ತಿದ್ದ ಘಮಘಮ ಪರಿಮಳ ಹೊಟ್ಟೆಯನ್ನು ಮತ್ತಷ್ಟು ಹಸಿವೆಯಾಗುವಂತೆ ಮಾಡುತ್ತಿತ್ತು. ಮಾವಿನಕಾಯಿಯ ಚಿತ್ರಾನ್ನ, ಕೋಸಂಬರಿ, ಒಬ್ಬಟ್ಟು, ಪಲ್ಯ, ಒಬ್ಬಟ್ಟಿನ ಸಾರು, ಆಂಬೊಡೆ… ಅಬ್ಟಾ ಅದೆಂತಹ ಭಾರಿ ಭೋಜನ! ನೆನೆಸಿಕೊಂಡರೆ ಇಂದಿಗೂ ಬಾಯಿ ನೀರೂರುತ್ತದೆ.

ಈ ಅಜ್ಜಿಯ ಮಗಳಾದ ಅಮ್ಮನಿಗೆ ಫೋನ್‌ ಮಾಡಿ ಹಬ್ಬಕ್ಕೆ ವಿಶ್‌ ಮಾಡಿದಾಗ ಹೇಳಿದ್ದಿಷ್ಟು , “”ನೀವೆಲ್ಲರೂ ಕಾಲೇಜು, ಕೆಲಸ, ಮದುವೆ ಅಂತ ಮನೆಯಿಂದ ಹೊರಗೆ ಹೋದ ಮೇಲೆ ಹಬ್ಬ ಮಾಡಲು ಬೇಜಾರು ಕಣೆ. ನಮ್ಮಿಬ್ಬರಿಗೆ ಅಂತ ಏನು ಮಾಡಿಕೊಳ್ಳುವುದು. ದೇವರ ಪೂಜೆ ಮಾಡಿ ನೇವೇದ್ಯಕ್ಕೆ ಅಂತ ಪಾಯಸ ಮಾಡಿದ್ದೆ ಅಷ್ಟೆ” ಅಂದಿದ್ದಳು.
ಇನ್ನು ಆ ಅಜ್ಜಿಯ ಮಗಳ ಮಗಳಾದ ನಾನೋ ಈ ಸಾಫ್ಟ್ ವೇರ್‌ ಕೆಲಸದ ಗಂಡನ ಕಟ್ಟಿಕೊಂಡು ಹಬ್ಬವೂ ಇಲ್ಲ , ಹರಿದಿನವೂ ಇಲ್ಲ. ಮಾಡಿದ ಅಡುಗೆಯ ತಿನ್ನಲು ಯಜಮಾನರು ಆಫೀಸಿನಿಂದ ಬರುವುದೇ ರಾತ್ರಿ ಹನ್ನೊಂದು ದಾಟಿದ ನಂತರ. ಡಯಟ್ಟು, ಕ್ಯಾಲರಿ ಅಂತ ಯೋಚಿಸುವ ಇವರಿಗೆ ರಾತ್ರಿ ಏನಾದರೂ ಹಬ್ಬದ ಊಟ ಬಡಿಸಿದರೆ ನನ್ನ ಕತೆ ಮುಗಿದ ಹಾಗೆಯೇ. ಮುಂದಿನ ಹದಿನೈದು ದಿನಗಳವರೆಗೆ ಬೈಗುಳಗಳ ಸುಪ್ರಭಾತ ಕೇಳಬೇಕಾಗುತ್ತದೆ. ಈ ಸಂಪತ್ತಿಗೆ ಅಡುಗೆ ಮಾಡಿ ನಾನೇನು ತಲೆಗೆ ಬಡಿದುಕೊಳ್ಳೋಣವೇ ಎಂದು ಗಾಂಧಿಬಜಾರಿನ ಅಂಗಡಿಗೆ ಹೋಗಿ ನಾಲ್ಕು ಹೋಳಿಗೆ ತಂದು ಮಕ್ಕಳಿಗೆ ತಿನ್ನಿಸಿ ಖುಷಿಪಟ್ಟದಷ್ಟೆ ಭಾಗ್ಯ. ಬೇವು-ಬೆಲ್ಲ, ಹಬ್ಬದ ಊಟ, ಮನೆಯ ಸಿಂಗರಿಸುವುದು, ಎಲ್ಲವೂ ವಾಟ್ಸಾಪ್‌-ಫೇಸ್‌ಬುಕ್ಕಿನ ಖಾತೆಯ ಮೊಬೈಲ್‌ಗ‌ಷ್ಟೇ ಸೀಮಿತವಾಯಿತು. ಬಾಲ್ಯದಿಂದಲೇ ಭಾವನೆಗಳ ಜೊತೆ ಬೆಳೆದುಬಂದ ಈ ಹಬ್ಬ ಬದುಕಿನುದ್ದಕ್ಕೂ ಸಾಗಿದ್ದು ಮಾತ್ರ, ಪ್ರಕೃತಿಯಂತೆ ನಮ್ಮ ಒಳಗೆ ಸಂಭ್ರಮಿಸಲಾಗುತ್ತಿಲ್ಲ ಅನ್ನುವುದಂತೂ ಅಕ್ಷರ ಸಹ ಸತ್ಯ.

ಯುಗಾದಿ ಹಬ್ಬದ ಬರವನ್ನು ನಮಗೆ ಯಾರೂ ಹೇಳಬೇಕಿಲ್ಲ. ಪ್ರಕೃತಿ ನಿಧಾನವಾಗಿ ಬಿತ್ತರಿಸತೊಡಗುತ್ತದೆ. ಯುಗಾದಿಯೆಂದರೆ ಪ್ರತಿ ಹಸಿರಿನ ಕಣಕ್ಕೂ ಚೈತ್ರ ವೈಶಾಖ ವಸಂತ ಋತು. ಹೊಂಗೆ ಹೂವಿನ ಕೊಂಬೆಕೊಂಬೆಯಲ್ಲೂ ಹೂವನು ಮುತ್ತಿಡಲು ಬಂದ ದುಂಬಿಗಳ ಸಮ್ಮೇಳನ. ಎಲ್ಲೆ ಮೀರಿ ಬರುವ ಚಿಟ್ಟೆಗಳ ದೂರ ತಳ್ಳ ಬಯಸದ ಹೂವುಗಳ ಪರಿಮಳ ಸುತ್ತಲೂ ಹರಡಿರುವಾಗ ಪ್ರಕೃತಿಯೇ ಬಣ್ಣದ ತೇರಿನ ಉತ್ಸವದಲಿ ಸಡಗರಿಸುತ್ತದೆ.

ಋತುಗಳ ರಾಜ ವಸಂತ ಬಂದಾಗ ಮಾವು-ಬೇವು ಚಿಗುರುತ್ತವೆ, ಮರಗಳು ಹೂವು ಬಿಡುತ್ತವೆ ಅಂತ ನಾವು ಅಂದುಕೊಳ್ಳುತ್ತೇವೆ. ಆದರೆ, ಸತ್ಯವೇನೆಂದರೆ, ಮರಗಳು ಚಿಗುರಿ ಹೂಬಿಟ್ಟಾಗಲೇ ವಸಂತನ ರಾಜ್ಯವಾದ ಭೂರಮೆಯಲ್ಲಿ ಉತ್ಸವ. ನಿಧಾನವಾಗಿ ಕಾಯಿಗಳು ಮಾಗುವ, ಹಣ್ಣಾಗುವ ಕಾಲ. ಮೊದಲು ಚಿಗುರು ತದನಂತರ ಮೊಗ್ಗು, ಹೂವು, ಮಿಡಿ, ಕಾಯಿ, ಹಣ್ಣು. ತೊಟ್ಟು ಕಳಚುವ ಕಾಲಕ್ಕೆ ಜೀವನ ಮಾಗಿರಬೇಕು ಎಂಬ ಸಂದೇಶ. ಮರಮರದ ತುಂಬ ಗಿಳಿ, ಅಳಿಲು, ಕೋಗಿಲೆ, ಎಲ್ಲಿಂದಲೋ ಬಂದು ಗೂಡು ಕಟ್ಟಿಕೊಳ್ಳುವುದರಲ್ಲಿ ತೊಡಗಿರುವ ಹೆಸರೇ ತಿಳಿಯದ ಹಕ್ಕಿಗಳ ಮೇಳ, ಚಿಲಿಪಿಲಿ ಕಲರವ. ಯುಗಾದಿಯೆಂದರೆ ಬೇವು ಬೆಲ್ಲವಷ್ಟೇ ಅಲ್ಲ. ಅದು ಕಣ್ಣು ತೆರೆದು ನಾವು ಸುತ್ತುಮುತ್ತ ನೋಡಿ ಮರ, ಹೂವು, ಚಿಗುರು, ಹಕ್ಕಿಗಳೊಂದಿಗೆ ತಾದಾತ್ಮ ಸಾಧಿಸಬೇಕಾದ ಕಾಲ.

Advertisement

ಯುಗಾದಿ ಹಬ್ಬದಂದು ಬೇವು-ಬೆಲ್ಲ ತಿನ್ನುವ ಆಚರಣೆಯು ಒಂದು ವಿಶಿಷ್ಟ ಪರಿಕಲ್ಪನೆ ಜೀವನದ ಹಾದಿಯಲ್ಲಿನ ಕಷ್ಟ-ಸುಖಗಳ ಸಂಯೋಜನೆಗೆ ರೂಪಕ. ಹಾಗಾಗಿ, ಇವೆರಡು ಒಂದನ್ನೊಂದು ಬಿಟ್ಟಿರಲಾರವು ಎಂದು ಪರೋಕ್ಷ ಬಿಂಬಿಸುತ್ತದೆ. ಕತ್ತಲು-ಬೆಳಕು, ರಾತ್ರಿ- ಹಗಲು ಹೇಗೆ ಒಂದನ್ನೊಂದು ಬಿಟ್ಟಿರಲಾರವೋ ಹಾಗೆಯೇ ಕಷ್ಟವಿ ಲ್ಲದೆ, ಸುಖವಿಲ್ಲ; ಸುಖವಿಲ್ಲದೆ ಕಷ್ಟವಿಲ್ಲ ಎನ್ನುವುದು ಬದುಕಿನ ಸತ್ಯ.

ಯುಗಾದಿ ಅಂದರೆ, ಮತ್ತೂಂದು ಯುಗದ ಆದಿ, ಆರಂಭ, ಮನ್ವಂತರದ ಬದಲಾವಣೆಯ ಕಾಲ. ಯಾವುದೇ ಹೊಸದು ಬಂದ ಮೇಲೆ ಹಳೆಯದರ ಕುರಿತು ಅಸಡ್ಡೆ ಹೊಂದುವುದು ಸಾಮಾನ್ಯ. ಆದರೆ, ಹೊಸದನ್ನು ಬರಲು ಹಳೆಯದು ಅವಕಾಶ ಮಾಡಿಕೊಡದಿದ್ದರೆ ಹೊಸದು, ಹೊಸತನ ಬರಲು ಹೇಗೆ ಸಾಧ್ಯ? ಆದುದರಿಂದ ಹೊಸತನದ, ಹೊಸದರ ಆರಂಭವಾಗಲು “ಹಳೆಯದರ’ ಪಾಲು, ಸಹಾಯ, ಸಹಕಾರ ಪ್ರಮುಖವಾಗಿರುತ್ತದೆ. ಹಾಗಾಗಿ, ಹೊಸತು-ಹಳತು ಎಂಬುವು ಪ್ರಕೃತಿಯ ಬದಲಾವಣೆಯ ಎರಡು ಮುಖಗಳು. ಇವೆರಡರಲ್ಲಿ ಯಾವುದಿರದಿದ್ದರೂ ಮತ್ತೂಂದಕ್ಕೆ ಬೆಲೆಯಿರುವುದಿಲ್ಲ. ಈ ವಿಷಯವಾಗಿ ಯುಗಾದಿ ಹಬ್ಬವು ಮೌನವಾಗಿಯೇ ನಮ್ಮಲ್ಲಿ ಅರಿವನ್ನು ಮೂಡಿಸುತ್ತದೆ.

ವಿಶಾಲವಾದ ಜಗತ್ತಿನಲ್ಲಿ ಪ್ರತಿಯೊಬ್ಬ ಮನುಷ್ಯನದು ಗಣನೆಗೇ ಸಿಗದಷ್ಟು ಪುಟ್ಟ ಜೀವಿತಾವಧಿ. ಸಿಟ್ಟು, ಸ್ವಾರ್ಥ, ಹಗೆತನ, ದ್ವೇಷ… ನಮ್ಮನ್ನು ಮತ್ತಷ್ಟು ಸಣ್ಣವರನ್ನಾಗಿ ಮಾಡುತ್ತದೆ. ಮನಸ್ಸಿಗೂ, ಬದುಕಿಗೂ ಅಂಟಿಕೊಂಡ ಹಳೆಯ ಸರಕುಗಳಾದ ಜಂಜಾಟ, ಸಂಕುಚಿತತೆಯನ್ನು ಪ್ರಕೃತಿಯಂತೆ ನಾವೂ ಕೊಡವಿಕೊಂಡು ನಂಬಿಕೆ, ಪ್ರೀತಿ, ಕರುಣೆ, ವಿಶ್ವಾಸಗಳೆಂಬ ಚಿಗುರನ್ನು ನಮ್ಮ ಬದುಕಿನಾವಧಿಯಲ್ಲಿ ನವೀಕರಿಸಿ ಜೀವಂತಗೊಳಿಸಬೇಕು.

ಹೊಸ ಬಟ್ಟೆಯ ತೊಟ್ಟು, ಬೇವು-ಬೆಲ್ಲದಂತೆಯೇ ಬದುಕನ್ನು ಸ್ವೀಕರಿಸಿ ಸಂಭ್ರಮಿಸುವ ಯುಗಾದಿ ನಿಮ್ಮೆಲ್ಲರ ಸ್ವಚ್ಛ, ಸುಂದರ ನಾಳೆಗಳಿಗೆ ನಾಂದಿ ಹಾಡಲಿ.

ಮುನಾರಾಣಿ ಹೆಚ್‌. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next