ಮಸ್ಕಿ: 2008ರಲ್ಲಿ ಕ್ಷೇತ್ರ ಮರುವಿಂಗಡಣೆ ವೇಳೆ ಉದಯವಾಗಿದ್ದ ಎಸ್‌ಟಿ ಮೀಸಲು ವಿಧಾನಸಭಾ ಕ್ಷೇತ್ರ ಮಸ್ಕಿಯಲ್ಲಿ ಇದುವರೆಗೂ ಮೂರು ಬಾರಿ ಸಾರ್ವತ್ರಿಕ ಚುನಾವಣೆ ನಡೆದಿವೆ. ಆದರೆ ಇದೇ ಮೊದಲ ಬಾರಿಗೆ ಉಪಚುನಾವಣೆ ಕಾವೇರಿದ್ದು, ಹಲವು ಐತಿಹಾಸಿಕ ಘಟನೆಗೆ ಇಲ್ಲಿನ ನೆಲ ಸಾಕ್ಷಿಯಾಗುತ್ತಿದೆ!.
ಮಸ್ಕಿ ವಿಧಾನಸಭೆ ಕ್ಷೇತ್ರ ರಚನೆ ಬಳಿಕ ಮೊದಲ ಬಾರಿ ಬಿಜೆಪಿ, ಮತ್ತೆರಡು ಬಾರಿ ಕಾಂಗ್ರೆಸ್‌ಗೆ ಒಲವು ತೋರಿದ್ದ ಇಲ್ಲಿನ ಮತದಾರ ಈ ಬಾರಿ ಯಾರ ಕೊರಳಿಗೆ ವಿಜಯ ಮಾಲೆ ಹಾಕಲಿದ್ದಾನೆ ಎನ್ನುವ ಕುತೂಹಲ ಉಂಟಾಗಿದೆ. ಪ್ರತಿ ಚುನಾವಣೆಯಲ್ಲೂ ಮೂರು ಪಕ್ಷಗಳ ಅಭ್ಯರ್ಥಿಗಳ ಅಖಾಡದಲ್ಲಿರುತ್ತಿದ್ದರು. ಆದರೆ, ಈ ಬಾರಿ ಇದುವರೆಗೂ ಜೆಡಿಎಸ್‌ನಿಂದ ಅಭ್ಯರ್ಥಿ ಘೋಷಣೆಯಾಗಿಲ್ಲ.ಬಿಜೆಪಿ ಮತ್ತು ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಅಖಾಡದಲ್ಲೂ ಪ್ರಚಾರದ ಧೂಳೆಬ್ಬಿಸಿದ್ದಾರೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರಾನೇರಾ ಫೈಟ್ ನಡೆಯಲಿದೆ.
ಕ್ಷೇತ್ರದ ಇತಿಹಾಸ: 2008ರ ಪೂರ್ವ ಸಿಂಧನೂರು, ಲಿಂಗಸುಗೂರು, ಮಾನ್ವಿ ವಿಧಾನಸಭೆ ಕ್ಷೇತ್ರದಲ್ಲಿ ಹಂಚಿ ಹೋಗಿದ್ದ ಹಳ್ಳಿಗಳನ್ನು ಕ್ರೋಡೀಕರಿಸಿ ಹೊಸ ಮಸ್ಕಿ ವಿಧಾನಸಭೆ ಕ್ಷೇತ್ರ ರಚನೆ ಮಾಡಲಾಯಿತು. ಕ್ಷೇತ್ರ ರಚನೆಯಾದ 2008ರ ಮೊದಲ ಚುನಾವಣೆಯಲ್ಲಿ ಆಗಿನ ಬಿಜೆಪಿ ಅಭ್ಯರ್ಥಿಯಾಗಿದ್ದ ಪ್ರತಾಪಗೌಡ ಪಾಟೀಲ್ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಇವರ ಜತೆ ಅಖಾಡಕ್ಕೆ ಇಳಿದಿದ್ದ ಕಾಂಗ್ರೆಸ್‌ನ ತಿಮ್ಮಯ್ಯ ನಾಯಕ, ಜೆಡಿಎಸ್ ನ ಅಯ್ಯನಗೌಡ ಆಯನೂರು ಸೋಲು ಅನುಭವಿಸಿದ್ದರು.
ಬಳಿಕ 2013ರ ಸಾರ್ವತ್ರಿಕ ಚುನಾವಣೆ ಘೋಷಣೆ ವೇಳೆ ಬಿಜೆಪಿಯಲ್ಲಿದ್ದ ಪ್ರತಾಪಗೌಡ ಪಾಟೀಲ್ ಕಾಂಗ್ರೆಸ್ ಬಾಗಿಲು ಬಡಿದು ಟಿಕೆಟ್ ಗಿಟ್ಟಿಸಿದರು. ಆಗಿನ ಕೈ ಪಕ್ಷದ ಅಲೆಯಲ್ಲಿ ಮತ್ತೂಮ್ಮೆ ಗೆದ್ದು ಶಾಸಕರಾದರು. ಆಗ ಬಿಜೆಪಿಯಿಂದ ಶಂಕರ್ ಮ್ಯಾದರ್, ಕೆಜೆಪಿಯಿಂದ ಮಹಾದೇವಪ್ಪಗೌಡ, ಬಿಎಸ್ಸಾರ್‌ನಿಂದ ಶೇಖರಪ್ಪ ತಳವಾರ, ಜೆಡಿಎಸ್‌ನಿಂದ ಅಮೇಶ ಕಣಕ್ಕೆ ಇಳಿದು ಸೋಲು ಅನುಭವಿಸಿದ್ದರು. ಇನ್ನು 2018ರ ಸಾರ್ವತ್ರಿಕ ಚುನಾವಣೆ ಎದುರಾದಾಗ ಮತ್ತೂಮ್ಮೆ ಕಾಂಗ್ರೆಸ್ ನಿಂದಲೇ ಪ್ರತಾಪಗೌಡ ಪಾಟೀಲ್ ಕಣಕ್ಕೆ ಇಳಿದು ಬಿಜೆಪಿ ಅಭ್ಯರ್ಥಿಯಾಗಿದ್ದ ಆರ್.ಬಸನಗೌಡ ತುರುವಿಹಾಳ ವಿರುದ್ಧ ಕೇವಲ 213 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದರು. ಒಟ್ಟು ಮೂರು ಚುನಾವಣೆಯಲ್ಲೂ ಮಸ್ಕಿಯ ಮತದಾರರು ಪ್ರತಾಪಗೌಡ ಪಾಟೀಲ್ ಅವರನ್ನು ಬೆಂಬಲಿಸಿ ಹ್ಯಾಟ್ರಿಕ್ ವಿಜಯಕ್ಕೆ ನಾಂದಿ ಹಾಡಿದ್ದರು.
ಕೆಲವೇ ದಿನಗಳಲ್ಲಿ ರಾಜೀನಾಮೆ: ಸತತ ಮೂರು ಬಾರಿ ಗೆದ್ದ ಪ್ರತಾಪಗೌಡ ಪಾಟೀಲ್ 2018ರಲ್ಲಿ ಗೆದ್ದ ಕೆಲವೇ ದಿನಗಳಲ್ಲಿ ಅಪರೇಷನ್ ಕಮಲಕ್ಕೆ ಬಲಿಯಾದರು. ಕೈ ತೊರೆದು ಬಿಜೆಪಿ ಸೇರುವ ಮೂಲಕ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ನಂತರ ನಡೆದ ಹಲವು ಕಾನೂನು ಹೋರಾಟಗಳನ್ನು ದಾಟಿ ಬಂದಿದ್ದಾರೆ. ಈಗ ಇಷ್ಟು ಘಟನೆಗೆ ಸಾಕ್ಷಿಯಾದ ಮಸ್ಕಿ ಮೊದಲ ಬಾರಿಗೆ ಉಪಚುನಾವಣೆ ಎದುರಿಸುತ್ತಿದೆ. ಈ ಉಪಚುನಾವಣೆಯಲ್ಲೂ ಪ್ರತಾಪಗೌಡ ಪಾಟೀಲ್ ಮತ್ತು ಆರ್.ಬಸನಗೌಡ ತುರುವಿಹಾಳ ಕಣಕ್ಕೆ ಇಳಿದಿದ್ದು, ಹಳೆಯ ವ್ಯಕ್ತಿಗಳಾಗಿದ್ದರೂ ಪಕ್ಷ ಮತ್ತು ಚಿಹ್ನೆಗಳು ಅದಲು-ಬದಲಾಗಿವೆ.
ಜಾತಿ ಲೆಕ್ಕಾಚಾರ ಹೇಗಿದೆ?
ಮಸ್ಕಿ ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಎಸ್ಟಿ ಸಮುದಾಯದ ಮತಗಳೇ ಇಲ್ಲಿ ಅಧಿಕ. ಈ ಎರಡು ಸಮುದಾಯದವರ ವೋಟ್‌ಗಳು ಅಭ್ಯರ್ಥಿಗಳ ಗೆಲುವು-ಸೋಲಿನ ಹಿಂದೆ ನಿರ್ಣಾಯಕವಾಗಿವೆ. ಮಸ್ಕಿಯಲ್ಲಿ ಒಟ್ಟು 2,06,988 ಮತದಾರರಿದ್ದು, ಇದರಲ್ಲಿ 1,01,234 ಪುರುಷ, ಮಹಿಳೆಯರು-1,04,941 ಇದ್ದು, ಇತರೆ-28 ಮತಗಳಿವೆ. ಜಾತಿ ಆಧಾರಿತ ಅಂದಾಜು ಮತಗಳು ಹೀಗಿವೆ. ಲಿಂಗಾಯತ-52 ಸಾವಿರ, ಪರಿಶಿಷ್ಟ ಜಾತಿ-45 ಸಾವಿರ, ಪರಿಶಿಷ್ಠ ಪಂಗಡ-49 ಸಾವಿರ, ಕುರುಬರು-20 ಸಾವಿರ, ಅಲ್ಪಸಂಖ್ಯಾತರು-14 ಸಾವಿರ, ಬ್ರಾಹ್ಮಣ-2 ಸಾವಿರ, 24 ಸಾವಿರ ಇತರೆ ಮತಗಳಿವೆ. ಈ ಎಲ್ಲ ಮತಗಳ ಸಮೀಕರಣದ ಆಧಾರದ ಮೇಲೆ ಚುನಾವಣೆ ನಡೆಯಲಿದ್ದು, ಮೊದಲ ಉಪಚುನಾವಣೆ ಯಾರ ಪಾಲಿಗೆ ಶುಭವಾಗಲಿದೆ ಕಾದು ನೋಡಬೇಕಿದೆ.
*ಮಲ್ಲಿಕಾರ್ಜುನ ಚಿಲ್ಕರಾಗಿ