Advertisement
ಕಾರ್ಕಳ ತಾಲೂಕಿನ ಕುಕ್ಕುಂದೂರು ಹಾಗೂ ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾ.ಪಂ.ಗಳಲ್ಲಿ ಎಫ್ಎಸ್‌ಟಿಪಿ ನಿರ್ಮಾಣಕ್ಕೆ ವರ್ಷಗಳ ಹಿಂದೆ ಚಾಲನೆ ಸಿಕ್ಕಿತ್ತು. ಜಿಲ್ಲೆಯ ಬೇರೆ ಯಾವುದೇ ಗ್ರಾ.ಪಂ.ನಲ್ಲೂ ಈ ಘಟಕ ಇಲ್ಲ. ಕುಕ್ಕುಂದೂರಿನಲ್ಲಿ ಘಟಕ ಇನ್ನೂ ನಿರ್ಮಾಣ ಹಂತದಲ್ಲಿದೆ. 80 ಬಡಗಬೆಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ 43 ಲ.ರೂ. ವೆಚ್ಚದಲ್ಲಿ ಘಟಕ ನಿರ್ಮಾಣಗೊಂಡಿದೆ. ಶೀಘ್ರವೇ ಇದರ ಉಪಯೋಗ ಗ್ರಾಮಸ್ಥರಿಗೆ ಸಿಗಲಿದೆ.
ಎಫ್ಎಸ್‌ಟಿಪಿ ಘಟಕ 80 ಬಡಗಬೆಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿದ್ದರೂ, ಅದರ ಬಳಕೆ ಸುತ್ತಲಿನ ಗ್ರಾ.ಪಂ.ಗಳು ಪಡೆದುಕೊಳ್ಳಲು ಅನುಕೂಲವಾಗುವಂತೆ ಒಪ್ಪಂದ ಮಾಡಿಕೊಳ್ಳಲಿದ್ದೇವೆ. ಅಂಬಲಪಾಡಿ, ಕರ್ಜೆ, ಅಲೆವೂರು ಮೊದಲಾದ ಗ್ರಾ.ಪಂ.ಗಳೊಂದಿಗೆ ಒಪ್ಪಂದ ಮಾಡಿಕೊಂಡು, ಆ ಗ್ರಾ.ಪಂ. ವ್ಯಾಪ್ತಿಯ ಮಲತ್ಯಾಜ್ಯ ಸಂಸ್ಕರಣೆ ಇಲ್ಲಿ ಮಾಡಲಾಗುವುದು. ಅದಕ್ಕೆ ಗ್ರಾ.ಪಂ. ನಿರ್ದಿಷ್ಟ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
Related Articles
ಸದ್ಯ ಘಟಕ ಪೂರ್ಣಪ್ರಮಾಣದಲ್ಲಿ ಸಜ್ಜಾಗಿ ನಿಂತಿದೆ. ಆದರೆ, ಕಾರ್ಯಾರಂಭಕ್ಕೆ ವಾಹನದ ಅಗತ್ಯವಿದೆ. ಮಲತ್ಯಾಜ್ಯ ಸಾಗಾಟಕ್ಕೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಯಾವುದೇ ವಾಹನವಿಲ್ಲ. ಈ ಸಂಬಂಧ ತಾಲೂಕು ಪಂಚಾಯತ್ ಮೂಲಕ ಜಿಲ್ಲಾ ಪಂಚಾಯತ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿ.ಪಂ. ಹಂತದಲ್ಲಿ ಇದರ ಚರ್ಚೆಯೂ ನಡೆಯುತ್ತಿದೆ. ಸುಸಜ್ಜಿತವಾದ ಆಧುನಿಕ ತಂತ್ರಜ್ಞಾನದ ವಾಹನ ಲಭ್ಯವಾದ ತತ್‌ಕ್ಷಣದಿಂದಲೇ ಘಟಕ ಕಾರ್ಯಾರಂಭವಾಗಲಿದೆ.
Advertisement
ಉಪಯೋಗವೇನು?ಎಫ್ಎಸ್‌ಟಿಪಿಯಲ್ಲಿ ಮನೆ, ವಸತಿ ಸಮುಚ್ಚಯದ ಮಲತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮಾಡಲಾಗುತ್ತದೆ. ನಾಲ್ಕು ಹಂತದಲ್ಲಿ ಸಂಸ್ಕರಣೆ ನಡೆಯಲಿದೆ. ಮನೆಗಳಿಂದ ಮಲತ್ಯಾಜ್ಯ ಸಂಗ್ರಹಿಸಿ ನಿರ್ದಿಷ್ಟ ವಾಹನದ ಮೂಲಕ ಘಟಕಕ್ಕೆ ತರಲಾಗುತ್ತದೆ. ಅನಂತರ ನೀರಿನ ಅಂಶಗಳನ್ನು ಬೇರ್ಪಡಿಸಲು ಸಂಸ್ಕರಣೆ ಮಾಡಲಾಗುತ್ತದೆ. ಸುಮಾರು 15 ದಿನಗಳಲ್ಲಿ ಅದು ಗೊಬ್ಬರವಾಗುತ್ತದೆ. ತದನಂತರ ಆ ಗೊಬ್ಬರವನ್ನು ಕೃಷಿ ಚಟುವಟಿಕೆಗಳಿಗೆ ಬಳಸಲು ಸಾಧ್ಯವಿದೆ. ಶೀಘ್ರ ವಾಹನ ಪೂರೈಕೆ
ಇದು ರಾಜ್ಯದ ಮೊದಲ ಮಲತ್ಯಾಜ್ಯ ಸಂಸ್ಕರಣ ಘಟಕವಾಗಿದೆ. ತಾ.ಪಂ.ನಿಂದ ಇದಕ್ಕೆ ವಾಹನ ಒದಗಿಸುವ ಸಂಬಂಧ ಪ್ರಕ್ರಿಯೆ ನಡೆದಿದ್ದು ಶೀಘ್ರದಲ್ಲಿ ವಾಹನ ಬರಲಿದೆ. ಮಲತ್ಯಾಜ್ಯ ಸಂಸ್ಕರಣೆಯಿಂದ ಗೊಬ್ಬರ ಸಿದ್ಧವಾಗಲಿದೆ. ಕುಕ್ಕುಂದೂರು ಗ್ರಾ.ಪಂ.ನಲ್ಲಿ ಇದೇ ರೀತಿ ಘಟಕ ನಿರ್ಮಾಣ ಹಂತದಲ್ಲಿದೆ.
–ಡಾ| ನವೀನ್ ಭಟ್ ವೈ.,
ಜಿ.ಪಂ. ಸಿಇಒ, ಉಡುಪಿ ಜನಸಾಮಾನ್ಯರಿಗೆ ಅನುಕೂಲ
ಸುಸಜ್ಜಿತ ಎಫ್ಎಸ್‌ಟಿಪಿ ಘಟಕದ ಕಾಮಗಾರಿ ಸಂಪೂರ್ಣ ಮುಗಿದಿದ್ದು ಬಳಕೆಗೆ ಸಿದ್ಧವಾಗಿದೆ. ವಾಹನ
ಸೌಲಭ್ಯ ಸಿಕ್ಕ ಕೂಡಲೇ ಉದ್ಘಾಟನೆಯಾಗಿ ಕಾರ್ಯಾರಂಭ ಮಾಡಲಿದೆ. ಗ್ರಾ.ಪಂ. ವ್ಯಾಪ್ತಿಯ ಜನಸಾಮಾನ್ಯರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ.
-ಮಾಧವಿ ಎಸ್. ಆಚಾರ್ಯ,
ಅಧ್ಯಕ್ಷೆ, 80 ಬಡಗಬೆಟ್ಟು, ಗ್ರಾ.ಪಂ. 8 ಹಂತದ ಸಂಸ್ಕರಣೆ
ಎಫ್ಎಸ್‌ಟಿಪಿಯಲ್ಲಿ ಮಲ ತ್ಯಾಜ್ಯ ವೈಜ್ಞಾನಿಕ ಹಾಗೂ ಸ್ವಾಭಾವಿಕ ವಿಧಾನದ ಮೂಲಕ 8 ಹಂತದಲ್ಲಿ ಸಂಸ್ಕರಣೆ ಮಾಡ ಲಾಗುತ್ತದೆ. ಬೇರೆ ಗ್ರಾ.ಪಂ.ಗಳು ಇದರ ಉಪಯೋಗ ಪಡೆಯಬಹುದು. ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲಿದ್ದೇವೆ.
–ಅಶೋಕ್ ಕುಮಾರ್,
ಪಿಡಿಒ, 80 ಬಡಗಬೆಟ್ಟು, ಗ್ರಾ.ಪಂ. -ರಾಜು ಖಾರ್ವಿ ಕೊಡೇರಿ