ಹಳಿಯಾಳ: ಕಳೆದ 15 ದಿನಗಳಿಂದ ತಾಲೂಕಿನಾದ್ಯಂತ ಭಾರಿ ವರ್ಷಧಾರೆ ಆಗುತ್ತಿದೆ. ಅದರಲ್ಲೂ ಕಳೆದ ನಾಲ್ಕೂ ದಿನಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಹಳಿಯಾಳದ ಎಲ್ಲ ಕೆರೆ, ಕಟ್ಟೆ, ಹಳ್ಳ, ಕೊಳ್ಳಗಳು ತುಂಬಿವೆ.
ಕೆಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇನ್ನು ಹಳಿಯಾಳ ಗಡಿಭಾಗದ ಖಾನಾಪುರ, ನಂದಗಡ್, ಬಿಡಿ ಸೇರಿದಂತೆ ಬೆಳಗಾವಿ ಜಿಲ್ಲೆಯಾದ್ಯಂತ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಕಾರಣ ಹಳಿಯಾಳದಲ್ಲಿ ನೆರೆ ವಾತಾವರಣ ಸೃಷ್ಟಿಯಾಗಿದೆ.
ಹಳಿಯಾಳದ ಯಡೋಗಾ ಸೇತುವೆ, ಕಳಸಾಪುರ ಹಳ್ಳ, ಕೆಸರೊಳ್ಳಿ ಸೇತುವೆ, ಮಂಗಳವಾಡ ಸೇತುವೆಗಳಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿದೆ.
ಕೆಸರೊಳ್ಳಿ ಸೇತುವೆ ಮೇಲಿಂದ ಸುಮಾರು ಎರಡರಿಂದ ನಾಲ್ಕು ಅಡಿಯಷ್ಟು ನೀರು ತುಂಬಿ ಹರಿಯುತ್ತಿರುವ ಕಾರಣ ಹಳಿಯಾಳ ಯಲ್ಲಾಪುರ, ಕಾರವಾರ, ದಾಂಡೇಲಿ ಸೇರಿದಂತೆ ಪ್ರಮುಖ ನಗರಗಳಿಗೆ ದಿನನಿತ್ಯ ಸಂಚರಿಸುತ್ತಿದ್ದ ಸಾವಿರಾರು ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದ ಹತ್ತಾರು ಕಿಮೀ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ವಾಹನ ಸವಾರರು, ಪ್ರಯಾಣಿಕರು ಪರದಾಡುವಂತಾಗಿದೆ. ಹಳಿಯಾಳ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಈ ಪ್ರಮಾಣದ ನೀರು ಹರಿಯುತ್ತಿದ್ದು ಪ್ರವಾಹದ ಪರಿಸ್ಥಿತಿ ಎದುರಾಗಿದೆ.
ಸಾವಿರಾರು ಎಕರೆಯಲ್ಲಿ ಬೆಳೆದ ಕಬ್ಬು, ಭತ್ತ, ಮೆಕ್ಕೆಜೋಳ, ಹತ್ತಿ ಸಂಪೂರ್ಣ ಮಳೆಗೆ ಆಹುತಿಯಾಗಿವೆ. ನೀರಿನಿಂದ ಸಂಪೂರ್ಣ ನಡುಗಡ್ಡೆ ಆಗಿದೆ. ಹಳಿಯಾಳದಿಂದ ಮೂರು ಕಿಮೀ ಅಂತರದಲ್ಲಿರುವ ಕೆಸರೊಳ್ಳಿ ಸೇತುವೆ ಬಳಿಯ ರಾಜಶೇಖರ ರೆಸಾರ್ಟ್ ಸಂಪೂರ್ಣ ನೀರಿನಲ್ಲಿ ಮುಳುಗಿದೆ. ಹತ್ತು ಅಡಿಗಿಂತ ಹೆಚ್ಚಿನ ನೀರು ರೆಸಾರ್ಟ್‌ನಲ್ಲಿ ತುಂಬಿಕೊಂಡಿದ್ದು ಇದರಿಂದ ಹೊಟೆಲ್ನಲ್ಲಿ ಇದ್ದ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿದೆ.
ಇನ್ನು ಹಳಿಯಾಳ ಪಟ್ಟಣದ ಅಂಚಿನಲ್ಲಿರುವ ಹೊರಗಿನ ಗುತ್ತಿಗೇರಿ ಕೆರೆ ಸಂಪೂರ್ಣ ತುಂಬಿ ಕೆರೆಯ ನೀರು ಪುಟ್ ಪಾತ್ ಹಾಗೂ ರಾಜ್ಯ ಹೆದ್ದಾರಿ ಮೇಲೂ ಹರಿಯುತ್ತಿದೆ. ಕೆರೆಯ ಅಕ್ಕಪಕ್ಕದ ಮನೆಗಳಿಗೂ ನೀರು ನುಗ್ಗಿದೆ. ನೂರಾರು ಎಕರೆ ಪ್ರದೇಶ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿವೆ ಬೆಳೆ ನಾಶವಾಗಿದೆ.
ಮಳೆಯ ಅವಾಂತರ ಸೃಷ್ಟಿ: ಪಟ್ಟಣದಲ್ಲಿ ಹತ್ತಾರು ಮನೆಗಳ ಗೋಡೆಗಳು ಕುಸಿದು ಬಿದ್ದಿವೆ. ಇನ್ನು ಪಟ್ಟಣದ ಕಿಲ್ಲಾ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿದೆ ಕಿಲ್ಲಾ ಪ್ರದೇಶದ ಸುಮಾರು ಐದಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಕೆಲವು ಮನೆಗಳಲ್ಲಿ ಅಗ್ನಿಶಾಮಕದಳದವರ ಸಹಾಯದಿಂದ ಮೋಟಾರುಗಳನ್ನು ಹಚ್ಚಿ ನೀರನ್ನು ಹೊರಹಾಕಲಾಗುತ್ತಿದೆ ಹಾಗೂ ಮನೆಯಲ್ಲಿ ಗಟಾರನ್ನು ತೆಗೆದು ನೀರನ್ನು ಮನೆಯಿಂದ ಹೊರಹಾಕುವ ಸಂದಿಗ್ಧ ಪರಿಸ್ಥಿತಿ ಎದುರಿಸಬೇಕಾಗಿದೆ.