Advertisement

ಕರಾವಳಿ ಕರ್ನಾಟಕದ ಪ್ರಥಮ ಮೀನುಗಾರಿಕ ಶಾಲೆಗೆ ಈಗ 119 ವರ್ಷಗಳ ಸಂಭ್ರಮ

09:52 AM Nov 30, 2019 | Team Udayavani |

19ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1900 ಶಾಲೆ ಆರಂಭ
ಮೊದಲು ಮೂರು ತರಗತಿಗಳ ಶಾಲೆ

ಮಹಾನಗರ: ಮೀನುಗಾರರ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕರಾವಳಿ ಕರ್ನಾಟಕದಲ್ಲೇ ಆರಂಭವಾದ ಮೊದಲ ಮೀನುಗಾರಿಕ ಶಾಲೆ ಬೆಂಗ್ರೆ. 1900ರಲ್ಲಿ ಕೊರಂಟಿಲ್‌ ಎಂಬ ಕಟ್ಟಡದಲ್ಲಿ ಆರಂಭವಾದ ಈ ಶಾಲೆ 1919ರಲ್ಲಿ ಸರಕಾರಿ ಶಾಲೆಯಾಗಿ ಮೇಲ್ದರ್ಜೆಗೇರಿದ್ದು, ಒಟ್ಟು 119 ವರ್ಷಗಳ ಇತಿಹಾಸದೊಂದಿಗೆ ಮುನ್ನಡೆಯುತ್ತಿದೆ.

ಪೋರ್ಚ್‌ಗೀಸರ ಆಗಮನದ ದಿನದಿಂದ ಬ್ರಿಟಿಷ್‌ ಆಡಳಿತದ ಅಂತ್ಯದವರೆಗೂ ಬೆಂಗರೆಯಲ್ಲಿದ್ದ ಏಕಮಾತ್ರ ಕಟ್ಟಡ ಕೊರಂಟಿಲ್‌. ಸಾಂಕ್ರಾಮಿಕ ರೋಗಗ್ರಸ್ತರ ಬಟ್ಟೆಗಳನ್ನು ಈ ಕಟ್ಟಡದಲ್ಲಿ ಸ್ವತ್ಛಗೊಳಿಸುತ್ತಿದ್ದ ಬಗ್ಗೆ ಸ್ಥಳೀಯರು ಹೇಳುತ್ತಾರೆ. ಆದರೆ ಬಳಿಕ ಖಾಲಿಯಾಗಿ ಉಳಿದ ಕಟ್ಟಡದಲ್ಲಿ 1900ನೇ ಇಸವಿಯಲ್ಲಿ ಅಂದಿನ ಮದರಾಸು ಸರಕಾರದ ಸಹಕಾರದಲ್ಲಿ ವಿದ್ಯಾಭಿಮಾನಿಗಳ, ಹಿರಿಯರ ಪರಿಶ್ರಮದ ಫಲವಾಗಿ ಐದನೇ ತರಗತಿಯವರೆಗಿನ ಶಾಲೆ ನಿರ್ಮಾಣವಾಗಿತ್ತು. 1919ರಲ್ಲಿ ಈ ಶಾಲೆಯು ಸರಕಾರದ ವ್ಯಾಪ್ತಿಗೊಳಪಟ್ಟಿತು.

ವಂತಿಗೆ ಹಣದಿಂದ ಕಟ್ಟಡ ನಿರ್ಮಾಣ
ಐದನೇ ತರಗತಿ ವಿದ್ಯಾಭ್ಯಾಸ ಮುಗಿಸಿ ಆರನೇ ತರಗತಿಗೆ ಅಲ್ಲಿನ ಮಕ್ಕಳು ಮಂಗಳೂರು ನಗರಕ್ಕೆ ಬರುವುದು ತ್ರಾಸದಾಯಕವಾಗಿತ್ತು. ಅದಕ್ಕಾಗಿಯೇ ಬೆಂಗ್ರೆ ಮಹಾಜನ ಸಭಾವು ಶಿಕ್ಷಣ ಇಲಾಖೆಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಅವರ ಒಪ್ಪಿಗೆಯಂತೆ 35 ಸಾವಿರ ರೂ. ವಂತಿಗೆ ಸಂಗ್ರಹಿಸಿ 1965ರಲ್ಲಿ ಹೊಸ ಕಟ್ಟಡವೊಂದನ್ನು ಕಟ್ಟಿಸಿ ಸರಕಾರಕ್ಕೆ ಬಿಟ್ಟುಕೊಟ್ಟಿತು. ಇದೀಗ 1ರಿಂದ 7ನೇ ತರಗತಿಯನ್ನು ಹೊಂದಿರುವ ಶಾಲೆಯು ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯಾಗಿ ಮುಂದುವರಿಯುತ್ತಿದೆ.

Advertisement

ನಾರಾಯಣ ಐಲ ಅವರು ಶಾಲೆಯ ಮೊದಲ ಮುಖ್ಯೋಪಾಧ್ಯಾಯರು. ಶಾಲೆ ಆರಂಭವಾದಾಗ ಕೇವಲ 3 ತರಗತಿಗಳನ್ನು ಹೊಂದಿದ್ದು, 144 ಮಕ್ಕಳು ಹಾಗೂ 3 ಮಂದಿ ಶಿಕ್ಷಕರಿದ್ದರು. ಪ್ರಸ್ತುತ 72 ಮಂದಿ ವಿದ್ಯಾರ್ಥಿಗಳು, ಓರ್ವ ಪ್ರಭಾರ ಮುಖ್ಯ ಶಿಕ್ಷಕಿ, ಮೂವರು ಅತಿಥಿ ಶಿಕ್ಷಕರು ಶಾಲೆಯಲ್ಲಿದ್ದಾರೆ.

ವಿದ್ಯಾಭಿಮಾನಿಗಳು ಮತ್ತು ಹಳೆ ವಿದ್ಯಾರ್ಥಿಗಳ ಶ್ರಮದಿಂದ ಶಾಲೆಯು ಹೊಸತನಕ್ಕೆ ತೆರೆದುಕೊಳ್ಳುತ್ತಿದೆ. ವಿಜ್ಞಾನ, ದೇಶಸೇವೆ, ಕಲಾರಂಗ, ನಾಟಕ, ವೈದ್ಯಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಳೆ ವಿದ್ಯಾರ್ಥಿಗಳನ್ನು ಹೊಂದಿದ ಹೆಮ್ಮೆ ಬೆಂಗ್ರೆ ಶಾಲೆಯದ್ದು. ಮಾಜಿ ಶಾಸಕ ಎಸ್‌. ಕೆ. ಅಮೀನ್‌, ಸ್ವಾತಂತ್ರ್ಯ ಹೋರಾಟಗಾರರಾದ ಎಂ. ಎಸ್‌. ದಯಾಕರ, ರಂಗಪ್ಪ ಸಾಲ್ಯಾನ್‌, ಕೂಸಯ್ಯ ಪುತ್ರನ್‌, ಕಲ್ಯಾಣಿ ಪುತ್ರನ್‌, ಶಂಭು ಕರುಣಾಕರ, ವಿಜ್ಞಾನಿಗಳಾದ ಶಾಂತಾರಾಮ ಗುಜರನ್‌, ನಾರಾಯಣ ಕರ್ಕೇರ, ರಂಗಾಯಣ ಹಿರಿಯ ಕಲಾವಿದೆ ಪ್ರಮೀಳಾ, ನಾಟಕ ರಚನೆಕಾರರಾದ ಸತ್ಯಾತ್ಮ ಮೆಂಡನ್‌, ಸದಾನಂದ ಕರ್ಕೇರ, ಸೈನಿಕರಾದ ಸದಾನಂದ ಕರ್ಕೇರ, ವಿಶ್ವನಾಥ, ಜಿತೇಶ್‌ ಕರ್ಕೇರ, ವಿಶ್ವನಾಥ್‌ ಖಾರ್ವಿ, ಅನಿಲ್‌, ಸಮಾಜಸೇವಕರಾದ ಭುಜಂಗ ಸಾಲ್ಯಾನ್‌ ಮಿತ್ತಮನೆ, ಪುಂಡಲೀಕ ಕರ್ಕೇರ, ಶೇಖರ ಸುವರ್ಣ, ಧನಂಜಯ ಪುತ್ರನ್‌, ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಪಟುಗಳಾದ ರಾಮಚಂದ್ರ ಬೆಂಗ್ರೆ, ಪ್ರೇಮಾನಂದ ಬೆಂಗ್ರೆ, ನಾಗಪ್ಪ ಖಾರ್ವಿ, ವಿಜಯ ಸುವರ್ಣ, ಆನಂದ ಅಮೀನ್‌, ಜಗದೀಶ, ಪುಂಡಲೀಕ ಖಾರ್ವಿ, ಪ್ರಶಾಂತ ಮೆಂಡನ್‌, ಸುನಿಲ್‌ ಖಾರ್ವಿ ಮುಂತಾದವರು ಈ ಶಾಲೆಯ ಸಾಧಕ ಹಳೆ ವಿದ್ಯಾರ್ಥಿಗಳು ಎನ್ನುತ್ತಾರೆ ಶಾಲೆಯ ಹಳೆ ವಿದ್ಯಾರ್ಥಿ ಲೋಕೇಶ್‌ ಬೆಂಗ್ರೆ.

ನಗರ ಪ್ರದೇಶದಿಂದ ದೂರದಲ್ಲಿರುವ ಬೆಂಗ್ರೆಯ ಜನರಿಗೆ ಆಗಿನ ಕಾಲದಲ್ಲಿ ಶಾಲೆಯ ಮುಖ ಕಾಣಬೇಕಾದರೆ ನಗರಕ್ಕೆ ಬರಬೇಕಾಗಿತ್ತು. ಇದರಿಂದಾಗಿ ಹೆಣ್ಣು ಮಕ್ಕಳು ಶಿಕ್ಷಣದಿಂದ ದೂರವೇ ಉಳಿಯಬೇಕಾಗಿತ್ತು. ಇಂತಹ ಸಂದರ್ಭದಲ್ಲಿ ಆ ಪರಿಸರದಲ್ಲಿ ಶಾಲೆ ಆರಂಭವಾಗಿದ್ದು ಹೆಣ್ಣು ಮಕ್ಕಳ ಶೈಕ್ಷಣಿಕ ಬದುಕಿಗೆ ಚೇತರಿಕೆಯನ್ನು ನೀಡಿತ್ತು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಶಾಲೆಯಲ್ಲಿದ್ದ ಸುಶೀಲಾ ಪುತ್ರನ್‌ ಎಂಬವರ ಕಾಳಜಿ ಅಪಾರವಾದದ್ದು ಎಂದು ನೆನೆಯುತ್ತಾರೆ ಹಳೆ ವಿದ್ಯಾರ್ಥಿಗಳು.

ಆಟದ ಮೈದಾನ
ಶಾಲಾರಂಭದಲ್ಲಿ ತೋಟ ಬೆಂಗ್ರೆ, ಕಸಬಾ ಬೆಂಗ್ರೆ, ಕುದ್ರೋಳಿ ಬೆಂಗ್ರೆ, ಬೊಕ್ಕಪಟ್ಣ ಬೆಂಗ್ರೆ, ಬೋಳೂರು, ತಣ್ಣೀರುಬಾವಿ ಗ್ರಾಮಗಳ ಮಕ್ಕಳು ಇಲ್ಲಿಗೆ ಆಗಮಿಸುತ್ತಿದ್ದರು. ಪ್ರಸ್ತುತ ಆಸುಪಾಸಿನಲ್ಲಿ ಇನ್ನೆರಡು ಶಾಲೆಗಳು ಸ್ಥಾಪನೆಯಾಗಿದ್ದು, ವಿದ್ಯಾರ್ಥಿಗಳು ಹಂಚಿ ಹೋಗಿದ್ದಾರೆ. ಶಾಲೆಯು 2 ಎಕರೆ 27 ಸೆಂಟ್ಸ್‌ ಜಾಗವನ್ನು ಹೊಂದಿದ್ದು, ಫುಟ್ಬಾಲ್‌, ಟೆನ್ನಿಸ್‌, ವಾಲಿಬಾಲ್‌ ಮೈದಾನಗಳು ಹಾಗೂ ಬಾಲವನ ಶಾಲೆಯ ಆವರಣದಲ್ಲಿದೆ.

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗೂ ಪ್ರೋತ್ಸಾಹ ನೀಡಲಾಗುತ್ತಿದೆ. ಸ್ಥಳೀಯ ಮಕ್ಕಳ ಸಂಖ್ಯೆ ಕಡಿಮೆ ಇದ್ದು, ಆಂಧ್ರ ಮುಂತಾದೆಡೆಗಳ ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಹೊರ ರಾಜ್ಯದ ಮಕ್ಕಳಿಗೆ ಕನ್ನಡ ಭಾಷೆ ಕಲಿಸುವುದು ಸ್ವಲ್ಪ ಕಷ್ಟವಾಗುತ್ತಿದೆ.
-ಉಷಾ, ಮುಖ್ಯ ಶಿಕ್ಷಕಿ (ಪ್ರಭಾರ)

ಬೆಂಗ್ರೆ ಶಾಲೆಯು ಕರಾವಳಿ ಕರ್ನಾಟಕದ ಮೊದಲ ಮೀನುಗಾರಿಕಾ ಶಾಲೆ. ಯಾವುದೇ ಕ್ಷೇತ್ರವನ್ನು ನೋಡಿದರೂ ಅಲ್ಲಿ ಬೆಂಗ್ರೆ ಶಾಲೆಯ ಹಳೆ ವಿದ್ಯಾರ್ಥಿಗಳಿರುವುದು ಈ ಶಾಲೆಯ ವೈಶಿಷ್ಟé. ಹಳೆ ವಿದ್ಯಾರ್ಥಿ ಎಂಬ ಹೆಮ್ಮೆ ಇದೆ.
-ಧನಂಜಯ ಪುತ್ರನ್‌, ಹಳೆ ವಿದ್ಯಾರ್ಥಿ

- ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next