ಶಿವಮೊಗ್ಗ : ಹೋರಾಟದ ಜಿಲ್ಲೆ, ಚಳವಳಿಗಳ ಹುಟ್ಟೂರು ಎಂದೇ ಖ್ಯಾತಿ ಗಳಿಸಿರುವ ಶಿವಮೊಗ್ಗದಲ್ಲಿ ದಕ್ಷಿಣ ಭಾರತದ ಮೊದಲ ಮಹಾ ಪಂಚಾಯತ್‌ಗೆ ವೇದಿಕೆ ಸಿದ್ಧಗೊಂಡಿದೆ. ದೆಹಲಿಯಲ್ಲಿ 100ಕ್ಕೂ ಹೆಚ್ಚು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರಾಕೇಶ್ ಟಿಕಾಯತ್ ಮಾ.20ರಂದು ರೈತರಿಗೆ ಸಂದೇಶ ನೀಡಲಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋ ಧಿಸಿ 100ಕ್ಕೂ ಹೆಚ್ಚು ದಿನಗಳಿಂದ ಪಂಜಾಬ್, ಹರಿಯಾಣ, ದೆಹಲಿ ಭಾಗದ ರೈತರು ಬೃಹತ್ ಹೋರಾಟ ನಡೆಸುತ್ತಿದ್ದು, ಅದರ ಕಾವು ಉತ್ತರ ಭಾರತದ ರಾಜ್ಯಗಳಿಗೆ ಸೀಮಿತವಾಗಿದೆ. ಇದನ್ನು ದಕ್ಷಿಣ ಭಾರತದ ರಾಜ್ಯಗಳಿಗೆ ವಿಸ್ತರಿಸಲು ರೈತ ಸಂಘಟನೆಗಳು ತೀರ್ಮಾನಿಸಿದ್ದು, ಅದರ ಮೊದಲ ಭಾಗವಾಗಿ ಸಿಎಂ ತವರು ಕ್ಷೇತ್ರ ಶಿವಮೊಗ್ಗದಲ್ಲಿ ಪ್ರತಿಭಟನಾ ಸಮಾವೇಶ ನಡೆಯಲಿದೆ.
ಶಿವಮೊಗ್ಗ ಅಷ್ಟೇ ಅಲ್ಲ ಅಕ್ಕಪಕ್ಕದ ಜಿಲ್ಲೆಗಳ ಸುಮಾರು 50 ಸಾವಿರ ಜನ ಸಮಾವೇಶಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ. ರೈತರ ಹೋರಾಟ ಬೆಂಬಲಿಸಲು ದೆಹಲಿಗೆ ಹೋಗಿದ್ದ ರೈತ ಮುಖಂಡರಿಗೆ ರಾಕೇಶ್ ಟಿಕಾಯತ್ ಹೋರಾಟವನ್ನು ದೇಶವ್ಯಾಪಿ ವಿಸ್ತರಿಸಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದರು. ಅದರಂತೆ ಶಿವಮೊಗ್ಗದಲ್ಲಿ ದಕ್ಷಿಣ ರಾಜ್ಯಗಳ ಮೊದಲ ಸಭೆ ನಡೆಯಲಿದೆ. ಇದರ ಉಸ್ತುವಾರಿಯನ್ನು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್, ರೈತಸಂಘಗಳ ವರಿಷ್ಠರಾದ ಕೆ.ಟಿ. ಗಂಗಾಧರ್, ಎಚ್.ಆರ್. ಬಸವರಾಜಪ್ಪ, ಪ್ರಗತಿಪರ ಸಂಘಟನೆಗಳ ಮುಖಂಡರಾದ ಕೆ.ಪಿ. ಶ್ರೀಪಾಲ್, ಕೆ.ಎಲ್. ಅಶೋಕ್, ಎಸ್‌ನ ಎಂ. ಗುರುಮೂರ್ತಿ, ಹಾಲೇಶಪ್ಪ ವಹಿಸಿಕೊಂಡಿದ್ದು, ಒಂದು ತಿಂಗಳಿಂದ ಹಳ್ಳಿ ಹಳ್ಳಿ ಸುತ್ತಿ ಸಂಘಟನೆ ಮಾಡುತ್ತಿದ್ದಾರೆ. ಇವರಿಗೆ ಕೆ.ಎಲ್. ಅಶೋಕ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್. ಸುಂದರೇಶ್, ಮಧು ಬಂಗಾರಪ್ಪ, ಕಿಮ್ಮನೆ ರತ್ನಾಕರ್ ಸೇರಿದಂತೆ ನೂರಾರು ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೆಲವು ಸಂಘಟನೆಗಳೂ ಸಾಥ್ ನೀಡಿವೆ. ಸಾಹಿತ್ಯ, ರಾಜಕೀಯ, ಸಂಸ್ಕೃತಿ ಸೇರಿ ಎಲ್ಲ ಕ್ಷೇತ್ರಗಳಲ್ಲೂ ದೇಶದಲ್ಲೇ ಹೆಸರುವಾಸಿಯಾಗಿರುವ ಶಿವಮೊಗ್ಗ ಜಿಲ್ಲೆ ರಾಜ್ಯದ ಕ್ರಾಂತಿಗಳ ಹುಟ್ಟೂರು ಕೂಡ ಆಗಿದೆ. ಸಮಾಜವಾದಿ, ಕಾಗೋಡು, ಭೂ ಸುಧಾರಣೆ, ರೈತ, ದಲಿತ ಚಳವಳಿಗಳು ಇಲ್ಲಿಂದಲೇ ಆರಂಭವಾಗಿ ರಾಜ್ಯವ್ಯಾಪಿ ವ್ಯಾಪಿಸಿ ಸರ್ಕಾರಗಳ ಬದಲಾವಣೆಗೂ ಕಾರಣವಾಗಿದ್ದವು. ಇಂತಹ ಕ್ರಾಂತಿಯ ನೆಲದಲ್ಲಿ ಮತ್ತೂಂದು ಹೋರಾಟಕ್ಕೆ ಭೂಮಿಕೆ ಸಿದ್ಧವಾಗುತ್ತಿದೆ.