Advertisement

ಬಂತು ಮೊದಲ ಕಂತು; ಇನ್ನೂ ಬರಬೇಕಿದೆ ಬಹುಪಾಲು!

11:49 AM Jun 12, 2019 | Suhan S |

ಶಿರಸಿ: ಸಾಲ ಮನ್ನಾ ಎಂದು ಬಜೆಟ್‌ನಲ್ಲಿ ಘೋಷಿಸಿದ್ದ ರಾಜ್ಯ ಸರ್ಕಾರದ ಬಜೆಟ್‌ನ ಮೊದಲ ಕಂತಿನ ಹಣ ಬಂದಿದೆ.

Advertisement

ಲೋಕಸಭಾ ಚುನಾವಣೆ ಬಳಿಕ ಬಿಡುಗಡೆಗೊಂಡಿದೆ ಎನ್ನಲಾದ ಸಾಲ ಮನ್ನಾ ಬಾಪ್ತಿನಲ್ಲಿ ಈಗಾಗಲೇ 40 ಸಾವಿರದಷ್ಟು ರೈತರ ಖಾತೆಗೆ ನೇರ ಜಮಾಗೊಂಡಿದೆ. ಒಂದು ಲಕ್ಷ ರೂ. ಒಳಗೆ ಬೆಳೆಸಾಲ ಪಡೆದಿದ್ದ ಚಿಕ್ಕ ಹಾಗೂ ಅತಿ ಚಿಕ್ಕ ರೈತರ ಉಳಿತಾಯ ಖಾತೆಗೆ ಪ್ರಥಮ ಕಂತಿನ ಹಣ ಪಾವತಿಸಲಾಗಿದೆ. ಆದರೆ, ಒಂದು ಲಕ್ಷಕ್ಕಿಂತ ಅಧಿಕ ಮೊತ್ತ ಇರುವ ಅಥವಾ ಸಾಲಮನ್ನಾ ಮಾನದಂಡದ ವ್ಯಾಪ್ತಿಗೆ ಬಾರದೇ ಇರುವ ರೈತರ ಖಾತೆಗೆ ಜಮಾ ಆಗಿಲ್ಲ. ಮಾರ್ಚ್‌, ಏಪ್ರಿಲ್ ವೇಳೆ ಸಾಲ ಮನ್ನಾ ಪಾವತಿ ಮಾಡಿದ್ದ, ಮಾಡದ ರೈತರ ಖಾತೆಗೆ ಹಣ ಬಂದಿದೆ.

ರೈತರನ್ನು ಸಾಲದಿಂದ ಋಣಮುಕ್ತಗೊಳಿಸುವ ಯೋಜನೆಯಡಿ ಕಳೆದ ವಿಧಾನಸಭಾ ಚುನಾವಣಾ ಪೂರ್ವದ ಘೋಷಣೆಯನ್ನು ಸಿಎಂ ಕುಮಾರಸ್ವಾಮಿ ಬಜೆಟ್‌ನಲ್ಲಿ ಆಡಿದಂತೆ ಈಗ ಅದರ ಪ್ರಕ್ರಿಯೆ ಶುರು ಮಾಡಿದ್ದಾರೆ. ರೈತರ ಖಾತೆಗೆ ನೇರವಾಗಿ ಹಣ ಸರ್ಕಾರದಿಂದಲೇ ಪಾವತಿ ಆಗುತ್ತಿದೆ.

175 ಕೋಟಿ ರೂ!: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಧ್ಯವರ್ತಿ ಬ್ಯಾಂಕ್‌ ಕೆಡಿಸಿಸಿ ಮೂಲಕ ರೈತರಿಗೆ ಸಾಲ ವಿತರಿಸಲಾಗಿತ್ತು. ಪ್ರಾಥಮಿಕ ಸಹಕಾರಿ ಸಂಘಗಳ ಮೂಲಕ ಬೆಳೆಸಾಲವನ್ನು ಏಪ್ರಿಲ್ 15, ಏಪ್ರಿಲ್ 31ರೊಳಗೆ ವಿತರಿಸಲಾಗಿತ್ತು. ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಜಗಲಪೇಟೆ ಸೊಸೈಟಿಗಳಿಗೆ ಮಾತ್ರ ಮೇ 31ರ ಬೆಳ ಸಾಲ ಮರು ಪಾವತಿ ಅಖೈರು ದಿನವಾಗಿತ್ತು.

ಇದೀಗ ಪ್ರಥಮ ಹಂತವಾಗಿ ಕೆಡಿಸಿಸಿ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿದ ಬೆಳೆಗಾರರಿಗೆ ನೇರವಾಗಿ 175 ಕೋ.ರೂ. ಹಂಚಿಕೆಯಾಗಿದೆ. ಕೆಲವು ರೈತರು ಹಣ ಮರು ಪಾವತಿಸದೇ ಇದ್ದವರ ಖಾತೆಯಿಂದ ಸರ್ಕಾರ ಹಣ ವರ್ಗಾವಣೆ ಮಾಡಿಕೊಳ್ಳಲು ಸೂಚಿಸಿದೆ. ಈ ಮೂಲಕ ಸರ್ಕಾರ ರೈತರನ್ನು ಋಣಮುಕ್ತಗೊಳಿಸಲು ಮುಂದಾಗಿದೆ.

Advertisement

ಬರಬೇಕಿದೆ ಇನ್ನೂ: ಜಿಲ್ಲೆಯ ಹನ್ನೊಂದು ತಾಲೂಕುಗಳಲ್ಲಿ ಬೆಳೆಸಾಲ ಪಡೆದ ರೈತರ ಸಂಖ್ಯೆ 86,815. ಕೆಡಿಸಿಸಿ ಬ್ಯಾಂಕ್‌ ಮೂಲಕ ಇಷ್ಟು ರೈತರಿಗೆ ಗರಿಷ್ಠ 3 ಲಕ್ಷ ರೂ. ತನಕ 700 ಕೋಟಿ ರೂ.ಗಳಷ್ಟು ಬೆಳೆ ಸಾಲ ವಿತರಿಸಲಾಗಿತ್ತು.

ಈಗ ಬಂದಿರುವ ಹಣದ ಮೊತ್ತ ಕೇವಲ 175 ಕೋ.ರೂ. ಲಕ್ಷದೊಳಗೆ ಸಾಲ ಪಡೆದ ಸುಮಾರು 40 ಸಾವಿರ ರೈತರಿಗೆ. ಇನ್ನುಳಿದ ಮೊತ್ತ ಹಾಗೂ 46 ಸಾವಿರ ರೈತರಿಗೆ ಹಣ ಬರಬೇಕಿದೆ.

ರೈತರು ಬೆಳೆ ಸಾಲ ಪಡೆದ ಮಾಸದಂತೆ ಸಾಲ ಮನ್ನಾ ಹಣ ಕೂಡ ಬರಬೇಕಿದೆ. ನಿರೀಕ್ಷೆ ಪ್ರಕಾರ ನಡೆದರೆ ಇನ್ನೊಂದು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣವಾಗಬಹುದಾಗಿದೆ ಎನ್ನುತ್ತದೆ ಉನ್ನತ ಮೂಲವೊಂದು.

ದೃಢೀಕರಣಗೊಳ್ಳಬೇಕು: ಒಂದು ಲಕ್ಷ ರೂ.ಗಿಂತ ಅಧಿಕ ಮೊತ್ತದ ಸಾಲ ಪಡೆದವರು ಮರು ಪಾವತಿಯನ್ನು ಉಳಿಕೆ ಹಣ ಮಾಡಿದ್ದರೆ ಅದು ದೃಢೀಕರಣದ ಬಳಿಕ ಉಳಿದ ಹಣ ಬರಲಿದೆ. ತಾಲೂಕು ಕಂದಾಯ ಅಧಿಕಾರಿಗಳಿಂದ ದೃಢೀಕರಣಗೊಳಿಸಿ ಬರಬೇಕಿದೆ. ಈ ಪೈಕಿ 9800 ಅರ್ಜಿಗಳ ದೃಢೀಕರಣದಲ್ಲಿ 1100 ಅರ್ಜಿಗಳು ಇನ್ನೂ ಪೂರ್ಣವಾಗಬೇಕಿದೆ.

ಅಡಕೆ, ಭತ್ತದ ಬೆಳೆಗಾರರ ಕಷ್ಟ ಮಧ್ಯೆ ಈ ಸಾಲ ಮನ್ನಾ ಮೊತ್ತದ ಹಣ ಎಲ್ಲ ರೈತರಿಗೆ ಶೀಘ್ರ ಜಮಾ ಆಗಲಿ ಎಂಬುದು ಬೆಳೆಗಾರರ ಹಕ್ಕೊತ್ತಾಯವಾಗಿದೆ. ನನಗಂತೂ ಸಾಲ ಮನ್ನಾ ಹಣ ಬಂದಿದೆ. ಉಳಿದ ರೈತರಿಗೂ ಆದಷ್ಟು ಬೇಗ ಬರಲಿ. ಸಾಲದ ಹಣ ಪಾವತಿಸದೇ ಇದ್ದು, ಖಾತೆಯಲ್ಲಿ ಇಟ್ಟುಕೊಂಡಿದ್ದರೆ ತಕ್ಷಣ ಅದನ್ನು ಸೊಸೈಟಿ ಮೂಲಕ ಕೆಡಿಸಿಸಿ ಬ್ಯಾಂಕ್‌ಗೆ ನೀಡುವ ಕಾರ್ಯ ಕೂಡ ಆಗಬೇಕು.•ಎಸ್‌.ಎನ್‌.ಭಟ್ಟ, ರೈತ
•ರಾಘವೇಂದ್ರ ಬೆಟ್ಟಕೊಪ್ಪ
Advertisement

Udayavani is now on Telegram. Click here to join our channel and stay updated with the latest news.

Next