Advertisement

ಕೋವಿಡ್‌ ಮೊದಲ ಡೋಸ್‌ ಗುರಿ ಸಾಧನೆಗೆ ಶೇ. 1 ಕಗ್ಗಂಟು

02:14 AM Feb 10, 2022 | Team Udayavani |

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 99ರಷ್ಟು ಮಂದಿಗೆ ಕೊರೊನಾ ಲಸಿಕೆಯ ಮೊದಲ ಡೋಸ್‌ ನೀಡಲಾಗಿದ್ದು, ಬಾಕಿ ಇರುವ ಶೇ. 1ರಷ್ಟು ಜನರಿಗೆ ನೀಡುವುದೇ ಕಗ್ಗಂಟಾಗಿದೆ.

Advertisement

ಉಡುಪಿ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ 9,99,000 ಮಂದಿ ಲಸಿಕೆ ಗುರಿ ನಿಗದಿಪಡಿಸಲಾಗಿತ್ತು. ಇದರಲ್ಲಿ 9,88,476 (ಶೇ. 99) ಜನರು ಮೊದಲ ಡೋಸ್‌ ಹಾಗೂ 8,87,100 (ಶೇ. 89) ಜನರು ದ್ವಿತೀಯ ಡೋಸ್‌ ಪಡೆದಿದ್ದಾರೆ. ದ.ಕ.ದಲ್ಲಿ ನಿಗದಿಪಡಿಸಿದ 17,15,000 ಜನರಲ್ಲಿ 17,01,128 (ಶೇ. 99) ಮಂದಿ ಪ್ರಥಮ ಡೋಸ್‌, 14,95,618 (ಶೇ. 87) ಜನರು ದ್ವಿತೀಯ ಡೋಸ್‌ ಹಾಕಿಸಿಕೊಂಡಿದ್ದಾರೆ. ಪ್ರಥಮ ಡೋಸ್‌ ಪಡೆದು ನಿರ್ದಿಷ್ಟ ದಿನಗಳ ಅನಂತರ ಎರಡನೇ ಡೋಸ್‌ ಪಡೆಯಲು ಜನರು ಸ್ವತಃ ಬರುತ್ತಿದ್ದಾರೆ. ಆದರೆ ಅನೇಕರು ಮೊದಲ ಡೋಸ್‌ ಪಡೆಯಲು ಇನ್ನೂ ಹಿಂದೇಟು ಹಾಕುತ್ತಿದ್ದಾರೆ.

ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ರಾಯಚೂರು ಹಾಗೂ ಕಲಬುರಗಿ ಹೊರತುಪಡಿಸಿ ರಾಜ್ಯದ ಉಳಿದೆಲ್ಲ ಜಿಲ್ಲೆಗಳು ಮೊದಲ ಡೋಸ್‌ನಲ್ಲಿ ನಿಗದಿತ ಗುರಿ ಸಾಧಿಸಿವೆ. ಕೆಲವು ಜಿಲ್ಲೆಗಳು ಹೆಚ್ಚುವರಿ ಗುರಿಸಾಧನೆ ಮಾಡಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೊದಲ ಡೋಸ್‌ ಪಡೆಯದವರು ಯಾರು ಎಂಬ ಪಟ್ಟಿ ಜಿಲ್ಲಾಡಳಿತ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದೆ. ಆದರೆ ಅವರಿಗೆ ನೀಡಲು ಸಾಧ್ಯವಾಗುತ್ತಿಲ್ಲ.

ಅಧಿಕಾರಿಗಳೇ ರಂಗಕ್ಕೆ
ಉಭಯ ಜಿಲ್ಲೆಗಳಲ್ಲೂ ಜಿಲ್ಲಾಧಿಕಾರಿಗಳು, ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹ
ಶೀಲ್ದಾರ್‌ ಸಹಿತವಾಗಿ ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಲಸಿಕೆ ಪಡೆಯದವರ ಮನೆಗೆ ಹೋಗಿ, ಮನವೊಲಿಸಿ ಲಸಿಕೆ ನೀಡುವ ಪ್ರಯತ್ನ ನಡೆಸುತ್ತಿದ್ದಾರೆ. ಗ್ರಾ.ಪಂ.ಗಳ ಕಾರ್ಯಪಡೆಗಳೂ ಸಕ್ರಿಯವಾಗಿವೆ.

ಇನ್ನೂ ಕನಿಷ್ಠ 15 ದಿನ ಬೇಕು
ರಾಜ್ಯ ಲಸಿಕೆ ಪಟ್ಟಿಯಲ್ಲಿ ಎರಡು ಜಿಲ್ಲೆಗಳು ಮೊದಲ ಮತ್ತು ಎರಡನೇ ಡೋಸ್‌ ನೀಡಿಕೆಯಲ್ಲಿ ರಾಜ್ಯ ಸರಾಸರಿಗಿಂತ ಕಡಿಮೆಯಿದೆ. ಮೊದಲ ಡೋಸ್‌ ನೀಡಿಕೆಯಲ್ಲಿ ಶೇ. 100ರಷ್ಟು ಪ್ರಗತಿ ಸಾಧಿಸಲು ಇನ್ನೂ ಕನಿಷ್ಠ 15 ದಿನ ಅಗತ್ಯವಿದೆ. ಉಡುಪಿಯಲ್ಲಿ ಸುಮಾರು 10 ಸಾವಿರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 13 ಸಾವಿರ ಮಂದಿ ಮೊದಲ ಡೋಸ್‌ ಪಡೆಯಲು ಬಾಕಿಯಿದ್ದಾರೆ. ಅವರಲ್ಲಿ ಬಹುತೇಕರನ್ನು ಜಿಲ್ಲಾಡಳಿತ ತಲುಪಿದೆ. ಅವರಿಗೆ ಪೂರ್ಣಪ್ರಮಾಣದಲ್ಲಿ ಲಸಿಕೆ ನೀಡಲು ಇನ್ನೂ ಕನಿಷ್ಠ 15 ದಿನ ಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

ಹಲವು ಕಾರಣ
ಉಭಯ ಜಿಲ್ಲೆಯಲ್ಲಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮೊದಲ ಡೋಸ್‌ ಪಡೆಯದೇ ಇರುವವರು ಇದ್ದಾರೆ. 60ರಿಂದ 70 ವರ್ಷ ಮೇಲ್ಪಟ್ಟವರೂ ಇದ್ದಾರೆ. ಹಿರಿಯ ನಾಗರಿಕರಲ್ಲಿ ಬಹುತೇಕರು ದೀರ್ಘ‌ಕಾಲದ ಅನಾರೋಗ್ಯ, ವೈದ್ಯರ ಸಲಹೆ ಹಾಗೂ ನಿರಂತರ ಆರೋಗ್ಯ ಸಮಸ್ಯೆ ಇತ್ಯಾದಿ ಕಾರಣಗಳಿಂದ ಕೊರೊನಾ ಲಸಿಕೆ ಪಡೆದಿಲ್ಲ. ಇನ್ನು ಅರ್ಹ ಯುವ ಮತ್ತು ಮಧ್ಯವಯಸ್ಕರು ಉದಾಸೀನ, ಲಸಿಕೆ ಧಿಕ್ಕಾರ ಮನೋಭಾವದಿಂದ ತೆಗೆದುಕೊಳ್ಳುತ್ತಿಲ್ಲ. ಅನೇಕ ಕಡೆಗಳಲ್ಲಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವಲಸೆ ಹೋಗಿರುವವರ ಬಗ್ಗೆ ಸರಿಯಾದ ಮಾಹಿತಿಯನ್ನು ಕುಟುಂಬದವರು ನೀಡಿಲ್ಲ. ಹೊರಜಿಲ್ಲೆ, ರಾಜ್ಯಕ್ಕೆ ಹೋಗಿರುವವರು ಅಲ್ಲಿ ಲಸಿಕೆ ಪಡೆದಿರುವ ಬಗ್ಗೆ ಮಾಹಿತಿ ಸಿಗದೆ ಇರುವುದು ಸೇರಿ ಅನೇಕ ಅಂಶಗಳು ಗಮನಕ್ಕೆ ಬಂದಿವೆ.

ಜನಸಂಖ್ಯೆಯ ಆಧಾರದಲ್ಲಿ ಗುರಿನಿಗದಿ ಮಾಡಲಾಗಿದೆ. ಶೇ. 99ರಷ್ಟು ಗುರಿಸಾಧನೆ ಮಾಡಿದ್ದೇವೆ ಮತ್ತು ಉಳಿದ ಶೇ. 1ರಷ್ಟು ಜನರಿಗೆ ಮೊದಲ ಡೋಸ್‌ ನೀಡಲು ಬೇಕಾದ ಎಲ್ಲ ರೀತಿಯ ಕ್ರಮವನ್ನು ತೆಗೆದುಕೊಂಡಿದ್ದೇವೆ. ಅಧಿಕಾರಿಗಳು ಮನೆ ಮನೆಗೆ ಹೋಗುತ್ತಿದ್ದಾರೆ.
– ಡಾ| ಕಿಶೋರ್‌ ಕುಮಾರ್‌,
– ಡಾ| ನಾಗಭೂಷಣ ಉಡುಪ,
ದ.ಕ., ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿಗಳು

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next