Advertisement

ಅಧಿವೇಶನದ ಮೊದಲ ದಿನವೇ ಬಿಜೆಪಿ ಹೋರಾಟದ ಎಚ್ಚರಿಕೆ

06:36 AM Jan 24, 2019 | Team Udayavani |

ಬೆಂಗಳೂರು: ಸಚಿವ ಪುಟ್ಟರಂಗಶೆಟ್ಟಿ ಅವರ ಆಪ್ತನ ಬಳಿ 25 ಲಕ್ಷ ರೂ. ಲಂಚದ ಹಣ ಪತ್ತೆ ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರ ವ್ಯವಸ್ಥಿತ ಸಂಚು ನಡೆಸಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಸರ್ಕಾರ ಕೂಡಲೇ ತನಿಖೆ ನಡೆಸಿ ಸಚಿವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಅಧಿವೇಶನದ ಮೊದಲ ದಿನವೇ ಸದನದೊಳಗೆ ಹೋರಾಟ ನಡೆಸಲಾಗುವುದು ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದರು.

Advertisement

ವಿಧಾನಸೌಧದಲ್ಲಿನ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಪುಟ್ಟರಂಗ ಶೆಟ್ಟಿ ಅವರ ಆಪ್ತ ಮೋಹನ್‌ ಕುಮಾರ್‌ ಬಳಿ 25 ಲಕ್ಷ ರೂ. ಲಂಚದ ಹಣ ಪತ್ತೆಯಾಗಿತ್ತು. ಈ ಘಟನೆಯಿಂದ ರಾಜ್ಯದ ಶಕ್ತಿಕೇಂದ್ರ ಭ್ರಷ್ಟಾಚಾರದ ಸ್ಥಳವಾಗಲಿದೆಯೇ ಎಂಬ ಆತಂಕ ಎದುರಾಗಿತ್ತು.

ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ ಸರ್ಕಾರ ಪ್ರಕರಣವನ್ನು ಎಸಿಬಿಗೆ ವಹಿಸಿತ್ತು. ಆದರೆ ಎಸಿಬಿ ಅಧಿಕಾರಿಗಳು ಈವರೆಗೆ ಸಚಿವರ ಹೇಳಿಕೆ ಪಡೆದಿಲ್ಲ. ಕೆಪಿಸಿಸಿ ಅಧ್ಯಕ್ಷರು ಪತ್ತೆಯಾಗಿದ್ದು, ಜುಜುಬಿ ಹಣ ಎನ್ನುತ್ತಾರೆ. ಇದರಿಂದ ಪ್ರಕರಣವನ್ನೇ ಮುಚ್ಚಿ ಹಾಕುವ ಸಂಚು ನಡೆದಿರುವುದು ಸ್ಪಷ್ಟ ಎಂದು ಆರೋಪಿಸಿದರು.

ಸರ್ಕಾರ ಜಂಟಿ ಅಧಿವೇಶನ ಹಾಗೂ ಬಜೆಟ್‌ ಅಧಿವೇಶನಕ್ಕೆ ಸಿದ್ಧತೆ ನಡೆಸಿದೆ. ಆದರೆ ಆಡಳಿತ ಸಂಪೂರ್ಣ ವಿಫ‌ಲವಾಗಿದೆ. ಹಾಗಾಗಿ ಅಧಿವೇಶನ ಆರಂಭವಾಗುವುದರೊಳಗೆ ತನಿಖೆ ನಡೆಸಿ ಸಚಿವರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಅಧಿವೇಶನದ ಮೊದಲ ದಿನದಿಂದಲೇ ಬಿಜೆಪಿ ಹೋರಾಟ ನಡೆಸಲಿದೆ ಎಂದು ಹೇಳಿದರು.

ಕಾಂಗ್ರೆಸ್‌ ಶಾಸಕ ಆನಂದ್‌ ಸಿಂಗ್‌ ಮೇಲೆ ರೆಸಾರ್ಟ್‌ನಲ್ಲಿ ಗಂಭೀರ ಹಲ್ಲೆಯಾಗಿದ್ದರೆ, ಇನ್ನೊಂದೆಡೆ ರಾಜ್ಯದ ಜನ ಬರದಿಂದ ತತ್ತರಿಸುತ್ತಿದ್ದಾರೆ. ಕೂಡಲೇ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ರಾಜ್ಯದ ಜನತೆಗೆ ಘಟನೆ ಬಗ್ಗೆ ಮಾಹಿತಿ ನೀಡಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು. ಶಾಸಕರ ಮೇಲೆ ಹಲ್ಲೆ ನಡೆದಿದ್ದರೂ ಸಚಿವ ಡಿ.ಕೆ.ಶಿವಕುಮಾರ್‌ ಅವರು ಆನಂದ್‌ ಸಿಂಗ್‌ ನಾಳೆ ಬರುತ್ತಾರೆ ಎಂದು ಹೇಳಿದ್ದರು.

Advertisement

ಕಾಂಗ್ರೆಸ್‌ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಹಲ್ಲೆಗೆ ಸಂಬಂಧಪಟ್ಟಂತೆ ಪಕ್ಷದಿಂದ ಸಮಿತಿ ರಚಿಸಿರುವುದಾಗಿ ಹೇಳಿದ್ದಾರೆ. ಕೂಡಲೇ ರೆಸಾರ್ಟ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪಡೆದು ಸ್ಪಷ್ಟ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಸದನದ ಒಳಗೆ ಹೊರಗೆ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಆತ್ಮಸಾಕ್ಷಿಯಾದರೂ ಒಪ್ಪಬೇಕಲ್ಲ: ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ಹಾಗೂ ಒಂದು ದಿನ ಸರ್ಕಾರಿ ರಜೆ ಘೋಷಿಸಿದರು. ಅತ್ತ “ನಡೆದಾಡುವ ದೇವರು’ ಲಿಂಗೈಕ್ಯರಾಗಿದ್ದರೆ ಇತ್ತ ಅಶೋಕಾ ಹೋಟೆಲ್‌ನಲ್ಲಿ ದೇಶದ ನಾನಾ ಭಾಗಗಳಿಂದ ಕೆಲವರನ್ನು ಕರೆಸಿ ಸಂವಾದ ನಡೆಸುತ್ತಿದ್ದರು. ಶ್ರೀಗಳು ಲಿಂಗೈಕ್ಯರಾದ ಸಂದರ್ಭದಲ್ಲಿ ಈ ರೀತಿಯ ಕಾರ್ಯಕ್ರಮ ನಡೆಸಲು ಆತ್ಮವಾದರೂ ಒಪ್ಪಬೇಕಲ್ಲ ಎಂದು ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು.

ರಾಷ್ಟ್ರ ವಿರೋಧಿ ಘೋಷಣೆ ಕೂಗಿದ ಆರೋಪವಿರುವ ಕನ್ಹಯ್ಯ ಕುಮಾರ್‌, ಯುದ್ಧ ಸಂಭವಿಸಿದರೆ ಪಾಕ್‌ ಬೆಂಬಲಿಸುವುದಾಗಿ ಹೇಳಿದ್ದ ಸಂಸದ ಅಸಾದುದ್ದೀನ್‌ ಓವೈಸಿಯಂತಹ ರಾಷ್ಟ್ರವನ್ನು ಛಿದ್ರ ಮಾಡುವ ಮನಸ್ಥಿತಿಯವರು ಸಮಾಜ ಕಲ್ಯಾಣ ಸಚಿವರ ಸಮ್ಮುಖದಲ್ಲಿ ಸಂವಾದ ನಡೆಸುತ್ತಾರೆ. ಶ್ರೀಗಳು ಲಿಂಗೈಕ್ಯರಾಗಿದ್ದರಿಂದ ಜನ ಶೋಕ ಸಾಗರದಲ್ಲಿ ಮುಳುಗಿದ್ದರೆ ಇತ್ತ ಸಮಾಜ ಕಲ್ಯಾಣ ಇಲಾಖೆ ಸಚಿವರು ಐಷಾರಾಮಿ ಹೋಟೆಲ್‌ನಲ್ಲಿ ಸಂವಾದ ನಡೆಸುತ್ತಿದ್ದರು ಎಂದು ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next