ನಾವಿರುವ ಮನೆಯಲ್ಲಿ ಕನ್ನಡ ಗೊತ್ತಿರುವವರು ಒಬ್ಬರಾದ್ರೂ ಇರುವಂತೆ ಮಾಡ್ರಪ್ಪಾ ಎಂದು ದೇವರಲ್ಲಿ ಬೇಡಿಕೊಂಡೆ. ಆದರೆ, ರೂಂಗೆ ಬಂದಾಗಲೇ ಗೊತ್ತಾಯ್ತು: ಅಲ್ಲಿರುವ ಆರು ಜನರೂ ಆರು ರಾಜ್ಯಕ್ಕೆ ಸೇರಿದವರು ಎಂಬ ಸಂಗತಿ ! ಆಮೇಲೆ ಮಾಡುವುದೇನು? ಪೆಚ್ಚು ಮೊರೆ ಹಾಕ್ಕೊಂಡು ಕೂತೆ…
ಮನಸಲ್ಲಿ ಸಾವಿರಾರು ಆಲೋಚನೆ. ಹೃದಯದ ಬಡಿತ ಕೇಳ್ಳೋಷ್ಟು ಆತಂಕ. ಇದಕ್ಕೆಲ್ಲಾ ಕಾರಣ, ಏನೂ ಗೊತ್ತಿಲ್ಲದ ಊರು. ಅಲ್ಲಿ ಜೀವನ ಹೆಂಗೋ ಏನೋ ಅನ್ನೋ ಭಯ. ಆದ್ರೂ ಜೀವನದಲ್ಲಿ ಏನಾದ್ರೂ ಸಾಧಿಸಲೇ ಬೇಕು ಅನ್ನುವ ಛಲ… ಹೀಗೆ ನನ್ನ ಚಿಂತೆಗಳು ಸಾವಿರವಿದ್ದವು. ಅವನ್ನೆಲ್ಲ ಜೊತೆಗಿಟ್ಟುಕೊಂಡೇ ಅವತ್ತು ರಾತ್ರಿ ಎಲ್ಲಿಗೋ ಪಯಣ ಯಾವುದೋ ದಾರಿ, ಏಕಾಂಗಿ ಸಂಚಾರಿ’ ಅಂತ ಮುಂಬೈ ಬಸ್ ಹತ್ತಿ ಕುಳಿತುಬಿಟ್ಟಿದ್ದೆ.
ನಿದ್ದೆ ಮಾಡದ ನಗರಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಲೈಫ್ನಲ್ಲಿ ಒಂದು ಸಾರಿ ಆದರೂ ಮುಂಬೈಗೆ ಹೋಗಿ ಗೇಟ್ ವೇ ಆಫ್ ಇಂಡಿಯಾ ನೋಡೋ ಕನಸು ಎಲ್ಲರಿಗೂ ಇದ್ದೇ ಇರತ್ತೆ. ಬರೀ ತಿರುಗಾಟಕ್ಕಾಗಿ ಬರೋದು ಬೇರೆ, ಇಲ್ಲೇ ಇರೋಕೆ ಬರೋದು ಬೇರೆ. ಅದರಲ್ಲೂ, ಯಾವುದೋ ಒಂದು ಪುಟ್ಟ ಹಳ್ಳಿಯಿಂದ ಬಂದು ಮುಂಬೈನ ದೊಡ್ಡದೊಂದು ಕಂಪನಿಯಲ್ಲಿ ಕೆಲಸಕ್ಕೆ ಸೇರೋದು ಅಂದ್ರೆ ತಮಾಷೆನಾ?
ಒಬ್ಬರಾದ್ರೂ ಕನ್ನಡಿಗರು ನಾನು ಇರೋ ಮನೇಲಿ ಇರುವ ಹಾಗೆ ಮಾಡಪ್ಪಾ ಅಂತ ದೇವ್ರತ್ರ ಕೇಳಿಕೊಳ್ಳದೇ ಇರೋ ನಿಮಿಷನೇ ಇಲ್ಲಾ. ಇರೋ ಬರೋ ಧೈರ್ಯ ಎಲ್ಲಾ ಒಟ್ಟುಗೂಡಿಸಿ ಮನೆ ಒಳಗೆ ಬರಿ¤ದ್ದಂಗೇ ಗೊತ್ತಾಯ್ತು. ಒಂದೇ ಕಂಪನೀಲಿ ಕೆಲಸ ಸಿಕ್ಕಿರೋ ನಾವು ಏಳು ಹುಡುಗೀರೂ, ಆರು ಬೇರೆ ಬೇರೆ ರಾಜ್ಯದೋರು ಅಂತ. ಅಲ್ಲಿಗೆ ಮುಗೀತು: ಮನಸಿನ ಮೂಲೆಯಲ್ಲಿ ಇದ್ದ ಸಣ್ಣದೊಂದು ಆಸೆನೂ ಸತ್ತು ಹೋಗಿತ್ತು.
ರೂಮಿಗೆ ಬಂದಾಗ ತಿಳೀತು. ನನ್ನ ರೂಮ್‌ಮೇಟ್ ರಾಜಧಾನಿ ದೆಹಲಿಯವಳು ಎಂದು. ಛಲೋ ಠೀಕ್ ಹೈ ಅಂತ ಚೂರು ಪಾರು ಹಿಂದಿ ಎಲ್ಲಾ ಒಟ್ಟುಗೂಡಿಸಿ ಅವಳ ಜೊತೆ ಮಾತಾಡಿದ್ದೂ ಆಯಿತು. ದೇವರು ಯಾವಾಗ್ಲೂ ಜೊತೆಗೆ ಇರ್ತಾನೆ ಅನ್ನೋದಕ್ಕೆ ಅವಳೇ ಸಾಕ್ಷಿ. ಅಪ್ಪ-ಅಮ್ಮ, ಮನೇ ಮಠ ಬಿಟ್ಟು ಬಂದು ನಿಂತಿದ್ದ ನನಗೆ ಅವಳು ಒಂದೇ ದಿನದಲ್ಲಿ ಒಳ್ಳೆಯ ಸ್ನೇಹಿತೆಯಾದಳು. ನನಗೆ ಹಿಂದಿ ಚನ್ನಾಗಿ ಬರೋದಿಲ್ಲ ಎಂದು ತಿಳಿದಮೇಲಂತೂ ಒಂದು ಕ್ಷಣಕ್ಕೂ ನನ್ನ ಒಬ್ಬಳನ್ನೇ ಬಿಟ್ಟು ಹೋಗ್ತಿರ್ಲಿಲ್ಲ.
“ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು ರಾಘವೇಂದ್ರ’ ಎಂದು ಮಾರನೇದಿನ ಆಫೀಸಿಗೆ ಹೋಗಿದ್ದೂ ಆಯಿತು. ಹೊಟ್ಟೆಗೆ ಹಿಟ್ಟಿಲ್ಲದಿದ್ದರು ಜುಟ್ಟಿಗೆ ಮಲ್ಲಿಗೆ ಹೂವು ಅಂತಾರಲ್ಲ ಅದೇ ಥರ, ಸುಂದರವಾಗಿರೋ ಹುಡುಗರು ಇರಲಪ್ಪಾ ಆಫೀಸಲ್ಲಿ ಅಂತ ಮನಸಲ್ಲೇ ಮಂಡಕ್ಕಿ ತಿಂತಿದ್ದೆ. ಮೊದಲನೇ ದಿನ ಆಗಿರೋದ್ರಿಂದ ಜಾಸ್ತಿ ಏನು ಕೆಲಸ ಇರಲಿಲ್ಲ. ಸ್ವಲ್ಪ ಬೇಗನೆ ಮನೆಗೆ ಹೊರಟಾಯಿತು. ಅದೃಷ್ಟಾನೋ ದುರಾದೃಷ್ಟಾನೋ ಗೊತ್ತಿಲ್ಲ. ಅಂದಿನ ಮಳೆ ಅಬ್ಬರಕ್ಕೆ ಟ್ರಾಫಿಕ್‌ನಲ್ಲಿ ನಾವು ಸಿಕ್ಕಾಕ್ಕೊಂಡಿದ್ವಿ. ಮಲೆನಾಡಲ್ಲಿ ಮಳೆಗಾಲದಲ್ಲಿ ಮುದವಾಗಿ ಮಲಗಿರಬೇಕಾಗಿದ್ದ ಮುಗ್ಧ ಮನಸ್ಸು ಮುಂಬಯಿನ ಮಾರಣಾಂತಿಕ ಮಳೆಯಲ್ಲಿ ಮಂಕಾಗಿ ಕುಳಿತಿದ್ದ ಆ ದಿನ ಮರೆಯಲು ಸಾಧ್ಯವೇ ಇಲ್ಲ.
-ಜಯಲಕ್ಷ್ಮೀ ಭಟ್, ಡೊಂಬೇಸರ