ಹುಬ್ಬಳ್ಳಿ: ಅವಳಿ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ ಪ್ರಕರಣಗಳು ನಡೆಯುತ್ತಿದ್ದು, ಇದು ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಬೊಟ್ಟು ತೋರುವಂತಾಗಿದೆ. ಜೊತೆಗೆ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಆಯುಕ್ತರು ಇವುಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.
ನಗರದಲ್ಲಿ ವಾರದೊಳಗೆ ನಡೆದ ಪ್ರತ್ಯೇಕ 4-5 ಚಾಕು ಇರಿತ ಪ್ರಕರಣಗಳಲ್ಲಿ ಇಬ್ಬರು ಮೃತಪಟ್ಟು, ಒಂಭತ್ತು ಜನರು ಗಾಯಗೊಂಡಿದ್ದಾರೆ. ಗಾಂಜಾ ಹಾಗೂ ಅಕ್ರಮ ದಂಧೆಗಳು ಅವ್ಯಾಹತವಾಗಿ ನಡೆದಿವೆ. ಇದು ಪೊಲೀಸರ ನಿದ್ದೆಗೆಡಿಸಿದೆ.
ಅದರಲ್ಲೂ ಪೊಲೀಸ್ ಆಯುಕ್ತರನ್ನು ಇನ್ನಷ್ಟು ಚಿಂತೆಗೀಡು ಮಾಡಿದೆ. ಹೀಗಾಗಿ ಅವರೇ ಖುದ್ದಾಗಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಕಾನೂನು, ಸುವ್ಯವಸ್ಥೆ ಬಲಗೊಳಿಸುವ ನಿಟ್ಟಿನಲ್ಲಿ ಹಾಗೂ ಅಪರಾಧ ಚಟುವಟಿಕೆಗಳನ್ನು ಮಟ್ಟಹಾಕಲು ಅಧಿಕಾರಿಗಳ ನೇತೃತ್ವದಲ್ಲಿ ಪೊಲೀಸರು ಶುಕ್ರವಾರ ಬೆಳಗ್ಗೆ ಕಾರ್ಯಾಚರಣೆಗೆ ಇಳಿದರು. ನಗರದ ಮೂಲೆ ಮೂಲೆಗಳಲ್ಲಿ ವಾಹನಗಳನ್ನು ತಪಾಸಣೆ ಮಾಡಿದರು. ಸಂಶಯಯುಕ್ತರನ್ನು ತಡೆದು ತಪಾಸಣೆ ಮಾಡಿದರು.
ವಾಹನ ಸವಾರರ ದಾಖಲಾತಿಗಳನ್ನು ಪರಿಶೀಲಿಸಿದರು. ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಿದರು. ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರು, ದಾಖಲಾತಿ ಇಲ್ಲದ, ವಾಹನ ಚಾಲನಾ ಪರವಾನಿಗೆ ಇಲ್ಲದ, ವಿಮೆ ಮಾಡಿಸದ ಹಾಗೂ
ವಾಯುಮಾಲಿನ್ಯ ತಪಾಸಣೆ ಪ್ರಮಾಣಪತ್ರ ಹೊಂದಿರದ, ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದ ಹಾಗೂ ಕುಡಿದು ವಾಹನ ಚಾಲನೆ ಮಾಡುವವರಿಗೆ ದಂಡದ ಬಿಸಿ ಮುಟ್ಟಿಸಿದರು.