Advertisement

ರಾಜ್ಯದ ಮೊದಲ ಬಿಎಸ್‌ 6 ಇಂಧನ ಘಟಕ ಕಾರ್ಯಾರಂಭ

12:44 AM Aug 04, 2021 | Team Udayavani |

ಮಂಗಳೂರು: ವಾಹನಗಳಿಂದಾಗುವ ವಾಯು ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಬಿಎಸ್‌ 6 ಇಂಧನ (ಪೆಟ್ರೋಲ್‌, ಡೀಸೆಲ್‌) ಪೂರೈಕೆಗೆ ಎಂಆರ್‌ಪಿಎಲ್‌ ಮುಂದಾಗಿದೆ.

Advertisement

ಬಿಎಸ್‌4 ಇಂಧನ ಉತ್ಪಾದನೆಯನ್ನು ಕಳೆದ ಜನವರಿಯಲ್ಲಿಯೇ ಸ್ಥಗಿತಗೊಳಿಸಿದ್ದ ಎಂಆರ್‌ಪಿಎಲ್‌ ಬಳಿಕ ಅದೇ ಘಟದಲ್ಲಿ ಬಿಎಸ್‌ 6 ಉತ್ಪಾದಿಸುತ್ತಿದೆ. ಬಿಎಸ್‌6ಗೆ ಪ್ರತ್ಯೇಕ ಘಟಕ ಮಾಡುವಂತೆ ಕೇಂದ್ರ ಸರಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಇದೀಗ 1,810 ಕೋ.ರೂ. ವೆಚ್ಚದಲ್ಲಿ ಪ್ರತ್ಯೇಕ ಘಟಕ ಸಿದ್ಧವಾಗಿದೆ. ಇದು ರಾಜ್ಯದ ಮೊದಲ ಬಿಎಸ್‌6 ಉತ್ಪಾದನಾ ಘಟಕವಾಗಿದೆ.

ಭಾರತ್‌ ಸ್ಟೇಜ್‌ (ಬಿಎಸ್‌) ವಾಹನಗಳ ಇಂಗಾಲಾಮ್ಲ ಹೊರಸೂಸುವಿಕೆಯು ಮಾಲಿನ್ಯ ಪ್ರಮಾಣದ ಮಾನದಂಡ. ಪೆಟ್ರೋಲ್‌, ಡೀಸೆಲ್‌ನಲ್ಲಿ ಸಲ್ಫರ್‌ ಅಂಶ ಸೇರಿಸಲು ಅವಕಾಶವಿದ್ದು, ಅದು ಅಧಿಕವಾದಷ್ಟು ಮಾಲಿನ್ಯವೂ ಅಧಿಕ. ಬಿಎಸ್‌4ನಡಿ ಪೆಟ್ರೋಲ್‌, ಡೀಸೆಲ್‌ನಲ್ಲಿ 50 ಪಿಪಿಎಂ ಸಲ#ರ್‌ ಸೇರ್ಪಡೆಗೆ ಅವಕಾಶವಿತ್ತು. ಬಿಎಸ್‌6 ಜಾರಿಗೆ ಬಂದ ಕಾರಣ ಸಲ್ಫರ್‌ ಪ್ರಮಾಣ 10 ಪಿಪಿಎಂಗೆ ಇಳಿಕೆಯಾಗಿದೆ.

ವಾಹನಗಳಿಂದಾಗುವ ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರಕಾರ “ಭಾರತ್‌ ಸ್ಟೇಜ್‌’ ಎಂಬ ಮಾಲಿನ್ಯ ನಿಯಮಾವಳಿಯನ್ನು ಜಾರಿಗೆ ತಂದಿದೆ. ಇಲ್ಲಿಯವರೆಗೆ “ಬಿಎಸ್‌-4′ ಜಾರಿಯಲ್ಲಿತ್ತು. 2020ರ ಎ. 1ರಿಂದ “ಬಿಎಸ್‌ 5′ ಬದಲು ನೇರವಾಗಿ “ಬಿಎಸ್‌ 6′ ಇಂಧನವನ್ನು ಬಳಸಲು ಆದೇಶಿಸಿತ್ತು. ಹೊಸದಾಗಿ ತಯಾರಾಗುವ ಎಲ್ಲ ವಾಹನಗಳೂ ಇದೇ ಮಾದರಿಯಲ್ಲಿ ಇರಲಿವೆ.

ಶೇ. 1ರಷ್ಟು ಸಲ್ಫರ್‌ ಇತ್ತು! :

Advertisement

ಎಂಆರ್‌ಪಿಎಲ್‌ನ ಆರಂಭಿಕ ಕಾಲದಲ್ಲಿ ಡೀಸೆಲ್‌ನಲ್ಲಿ ಶೇ. 1ರಷ್ಟು ಸಲ್ಫರ್‌ ಸೇರಿಸಲು ಅವಕಾಶವಿತ್ತು. ಬಳಿಕ ಶೇ. 0.50ಕ್ಕೆ ಇಳಿಕೆಯಾಗಿತ್ತು. ಆನಂತರ ಕ್ರಮವಾಗಿ 2,500 ಪಿಪಿಎಂ, 500 ಪಿಪಿಎಂ, 350 ಪಿಪಿಎಂಗೆ ಇಳಿಕೆಯಾಗಿತ್ತು. ಬಿಎಸ್‌4ನಡಿ 50 ಪಿಪಿಎಂ ಬಳಸಲಾಗುತ್ತಿತ್ತು. ಅಂತಿಮವಾಗಿ ಈಗ 10 ಪಿಪಿಎಂಗೆ ಇಳಿಕೆಯಾಗಿದೆ.

ಹಲವು ಸಮಯದಿಂದಲೇ ಬಿಎಸ್‌ 6 ಇಂಧನ ಸರಬರಾಜು ಮಾಡಲಾಗುತ್ತಿದೆ. ಇದೀಗ ಬಿಎಸ್‌6 ಉತ್ಪಾದನೆಗಾಗಿಯೇ ಪ್ರತ್ಯೇಕ ಘಟಕ ನಿರ್ಮಿಸಿ ಅದು ಕಾರ್ಯಾರಂಭವಾಗಿದೆ.– ರುಡಾಲ್ಫ್ ನೊರೋನ್ಹಾ,  ಕಾರ್ಪೊರೇಟ್‌ ಕಮ್ಯುನಿಕೇಶನ್‌,  ಎಂಆರ್‌ಪಿಎಲ್‌-ಮಂಗಳೂರು

ಬಿಎಸ್‌ 6ನಲ್ಲಿ ಸಲ್ಫರ್‌ ಪ್ರಮಾಣ ಬಹಳಷ್ಟು ಕಡಿಮೆಯಿದ್ದು, ಮಾಲಿನ್ಯ ಪ್ರಮಾಣವೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಕಳೆದ ಹಲವು ತಿಂಗಳಿನಿಂದ ಕರಾವಳಿಯಲ್ಲಿ ಬಿಎಸ್‌6 ಇಂಧನವೇ ದೊರೆಯುತ್ತಿದೆ.– ಶಿವಾನಂದ ಪ್ರಭು,  ಅಧ್ಯಕ್ಷರು, ದ.ಕ., ಉಡುಪಿ ಜಿಲ್ಲಾ ಪೆಟ್ರೋಲ್‌ ವ್ಯಾಪಾರಿಗಳ ಸಂಘ

Advertisement

Udayavani is now on Telegram. Click here to join our channel and stay updated with the latest news.

Next