Advertisement

ಹೆಜ್ಜೆ ಗುರುತು: ಭರತನಾಟ್ಯ ಕಲಿತ ಮೊದಲ ಮಂಗಳಮುಖಿಯ ಕತೆ !

04:06 PM Aug 25, 2018 | |

ಟ್ರಾಫಿಕ್‌ ಸಿಗ್ನಲ್‌ ಬಿದ್ದಿದೆ. ವಾಹನಗಳ ಮಧ್ಯೆ ತೂರಿಕೊಂಡು, ಚಪ್ಪಾಳೆ ತಟ್ಟುತ್ತಾ ಅವರು ಹತ್ತಿರ ಬರುತ್ತಿದ್ದಾರೆ. ಥತ್‌, ಸಿಕ್ಕಿಹಾಕಿಕೊಂಡೆವಲ್ಲ ಅಂತ ಮುಖ ಆಚೆ ತಿರುಗಿಸುವಷ್ಟರಲ್ಲಿ, “ಕೊಡು ರಾಜಾ’ ಅಂತ ಕೈ ಒಡ್ಡಿಬಿಡುತ್ತಾರೆ… 
  ದಿನನಿತ್ಯ ಮಂಗಳಮುಖೀಯರು ನಮಗೆ ಎದುರಾಗುವುದು ಹೀಗೆಯೇ. ಟ್ರಾಫಿಕ್‌ ಸಿಗ್ನಲ್‌ನಲ್ಲಿ, ರೇಲ್ವೆ ಸ್ಟೇಷನ್‌ನಲ್ಲಿ, ರಸ್ತೆಯಲ್ಲಿ… ಆದರೆ, ಇವತ್ತು ಮಲ್ಲೇಶ್ವರದ ಸೇವಾಸದನಕ್ಕೆ ಬಂದರೆ, ಅವರನ್ನು ಝಗಮಗಿಸುವ ವೇದಿಕೆಯಲ್ಲಿ ನೋಡುತ್ತೀರಿ! ಅರೆ, ವಾಹ್‌ ಅಂತ ನೀವೇ ಚಪ್ಪಾಳೆ ತಟ್ಟುತ್ತೀರಿ. ಮಂಗಳಮುಖಿಯರಿಗಾಗಿ ನಡೆಯುತ್ತಿರುವ “ಮಂಗಳ ಕಲಾ ಉತ್ಸವ’ದ ವೇದಿಕೆಯಲ್ಲಿ, ಹೆಸರಾಂತ ಭರತನಾಟ್ಯ ಕಲಾವಿದೆ ಡಾ. ನರ್ತಕಿ ನಟರಾಜ್‌ ನೃತ್ಯ ಪ್ರದರ್ಶನ ನೀಡಲಿದ್ದಾರೆ. ತಿರಸ್ಕಾರ, ನೋವು, ಅವಮಾನಗಳನ್ನು ಮೀರಿ ಬೆಳೆದ ನರ್ತಕಿ ಅವರ ಹೆಜ್ಜೆಗಳು ರೋಚಕ ಮತ್ತು ಸ್ಫೂರ್ತಿದಾಯಕ…

Advertisement

  ನರ್ತಕಿ ಅವರು ಹುಟ್ಟಿದ್ದು, ತಮಿಳುನಾಡಿನ ಮಧುರೈನಲ್ಲಿ. ಹುಟ್ಟಿದ್ದು ನರ್ತಕಿಯಾಗಿ ಅಲ್ಲ, ನಟರಾಜ್‌ ಆಗಿ. ಮೊದಲಿನಿಂದಲೂ ನೃತ್ಯದ ಬಗ್ಗೆ ಬಹಳ ಒಲವಿತ್ತು. ಬುದ್ಧಿ ಬರುವಷ್ಟರಲ್ಲಿ, ತಾನು ಇತರರಂತೆ ಇಲ್ಲ ಎಂಬ ಅನುಮಾನ ಕಾಡಿತು. ತನ್ನದೇ ವಯಸ್ಸಿನ ಬೇರೆ ಹುಡುಗರಿಗೂ, ತನಗೂ ವ್ಯತ್ಯಾಸವಿದೆ ಅಂತ ಗೊತ್ತಾಯ್ತು. ಆದರೆ, ಆ ವ್ಯತ್ಯಾಸವನ್ನು ಸಮಾಜ ಸುಲಭವಾಗಿ ಒಪ್ಪಿಕೊಳ್ಳಲಿಲ್ಲ. ತಿರಸ್ಕರಿಸಿತು, ಮೂದಲಿಸಿ ಮೂಲೆಗೆ ತಳ್ಳಲು ಯತ್ನಿಸಿತು. 

  ಆದರೆ, ನಟರಾಜ್‌ಗಿದ್ದ ನೃತ್ಯದ ಒಲವು ಕಡಿಮೆಯಾಗಲಿಲ್ಲ. ಸಿನಿಮಾ, ನಾಟಕಗಳನ್ನು ನೋಡಿ ನೃತ್ಯ ಕಲಿತರು. ವೈಜಯಂತಿಮಾಲ, ಹೇಮಾಮಾಲಿನಿ, ಯಾಮಿನಿ ಕೃಷ್ಣಮೂರ್ತಿ ಮುಂತಾದ ಕಲಾವಿದೆಯರನ್ನು ಮಾನಸ ಗುರುಗಳೆಂದೇ ಭಾವಿಸಿ, ನೃತ್ಯವನ್ನು ಆರಾಧಿಸಿದರು. ಅವರ ಸಿನಿಮಾಗಳನ್ನು ನೋಡಿ ಅನುಕರಿಸಿದರು. ಮನೆಯವರಿಗೆ ತಿಳಿಯದಂತೆ ನೃತ್ಯ ಕಾರ್ಯಕ್ರಮಗಳನ್ನು ನೀಡಿ ಶಭಾಷ್‌ಗಿರಿ ಪಡೆದರು. ಅವರ ನೃತ್ಯವನ್ನು ಮೆಚ್ಚಿದವರೆಲ್ಲ, “ಗುರುಗಳು ಯಾರು?’ ಎಂದು ಕೇಳುತ್ತಿದ್ದರು. ಆದರೆ, ನಟರಾಜ್‌ಗೆ ಗುರುಗಳೇ ಇರಲಿಲ್ಲ! 

ಮನೆಯವರೇ ವಿರೋಧಿಸಿದರು…
ತಾನೂ ಶಾಸ್ತ್ರೀಯವಾಗಿ ನೃತ್ಯ ಕಲಿಯಬೇಕೆಂದು ಆಸೆಪಟ್ಟಾಗ ಮನೆಯವರಿಂದ ವಿರೋಧ ಬಂತು. ಅವರ ದೈಹಿಕ ಬದಲಾವಣೆಗೆ ನೃತ್ಯವೇ ಕಾರಣ ಎಂದು ಮೂದಲಿಸಲಾಯ್ತು. ಕದ್ದುಮುಚ್ಚಿ ಡ್ಯಾನ್ಸ್‌ ಮಾಡಬೇಕಿತ್ತು. ಗೊತ್ತಾದರೆ ಮನೆಯವರು ಹೊಡೆಯುತ್ತಿದ್ದರು. ಕದಮುಚ್ಚಿದ ಕೋಣೆಯಲ್ಲಿ, ನಿರ್ಜನ ಪ್ರದೇಶದಲ್ಲಿ, ಕೆಲವೊಮ್ಮೆ ಸ್ಮಶಾನದಲ್ಲಿ ನೃತ್ಯಾಭ್ಯಾಸ ಮಾಡಿದ್ದೂ ಇದೆ ಎಂದವರು ನೆನಪಿಸಿಕೊಳ್ಳುತ್ತಾರೆ. ಕೊನೆಗೆ, ಮನೆಯವರಿಂದ ತೀವ್ರ ವಿರೋಧ ಬಂದಾಗ, 16ನೇ ವಯಸ್ಸಿನಲ್ಲಿ ಗುರುವನ್ನು ಅರಸಿ ಮನೆಬಿಟ್ಟು ಬಂದರು.

ಗುರುವಿನ ಹುಡುಕಾಟದಲ್ಲಿ…
ಆದರೆ, ಯಾರು ನೃತ್ಯ ಕಲಿಸುತ್ತಾರೆ? ಕೈಯಲ್ಲಿ ಹಣವಿಲ್ಲ, ಸ್ವಂತ ಒಂದು ಅಸ್ತಿತ್ವವೇ ಇಲ್ಲ. ಆದರೆ, ತನ್ನ ಪ್ರತಿಭೆಯ ಮೇಲೆ ಅಪಾರ ನಂಬಿಕೆಯನ್ನಿಟ್ಟಿದ್ದ ನಟರಾಜ್‌, ಬಂದು ನಿಂತದ್ದು ತಂಜಾವೂರಿನ ಪ್ರಸಿದ್ಧ ನಾಟ್ಯ ಗುರು ಕೆ.ಪಿ. ಕಿಟ್ಟಪ್ಪ ಪಿಳ್ಳೆ„ ಬಳಿ. ಪಿಳ್ಳೆ„, ವೈಜಯಂತಿ ಮಾಲ ಮುಂತಾದ ಹೆಸರಾಂತ ಕಲಾವಿದೆಯರಿಗೆ ಗುರುಗಳು. ಅಷ್ಟು ದೊಡ್ಡವರು ತನಗೆ ನೃತ್ಯ ಕಲಿಸಿಕೊಡುತ್ತಾರೆಯೇ ಎಂಬ ಭಯದಲ್ಲಿದ್ದ ನಟರಾಜ್‌ರನ್ನು, ಅವರೇ ನರ್ತಕಿಯನ್ನಾಗಿ ಬದಲಿಸಿದ್ದು. ಕೇವಲ ಹೆಸರನ್ನಷ್ಟೇ ಬದಲಿಸಲಿಲ್ಲ, 15 ವರ್ಷಗಳ ಕಾಲ ತಮ್ಮ ಗುರುಕುಲದಲ್ಲಿಯೇ ಆಶ್ರಯ ನೀಡಿ ಬಾಳ ಪಥವನ್ನೇ ಬದಲಿಸಿದರು. ಭರತನಾಟ್ಯ ಕಲಿತು, ಹೆಸರು ಮಾಡಿದ ಮೊದಲ ಮಂಗಳಮುಖೀ ಎಂಬ ಹೆಮ್ಮೆಗೆ ಪಾತ್ರರಾದ ಡಾ. ನರ್ತಕಿ ನಟರಾಜ್‌ ಇದೀಗ, ಸ್ವಂತ ನೃತ್ಯಶಾಲೆಯನ್ನೂ ನಡೆಸುತ್ತಿದ್ದಾರೆ. ಅವರ ನೃತ್ಯ ಪ್ರದರ್ಶನ ಈಗ ರಾಜಧಾನಿಯಲ್ಲಿ ನಡೆಯುತ್ತಿದೆ.

Advertisement

11ನೇ ತರಗತಿಗೆ ಇವರ ಬದುಕೇ ಪಠ್ಯ
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪೆರಿಯಾರ್‌ ಮಣಿಯಮ್ಮೆ„ ವಿ.ವಿ ಗೌರವ ಡಾಕ್ಟರೇಟ್‌, ನೃತ್ಯ ಚೂಡಾಮಣಿ, ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ, ನೃತ್ಯರತ್ನಾಕರ ಸೇರಿದಂತೆ ಹಲವು ಗೌರವ ಪಡೆದಿರುವ ನರ್ತಕಿಯರ ಜೀವನಗಾಥೆ ತಮಿಳುನಾಡಿನಲ್ಲಿ 11ನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯವೂ ಆಗಿದೆ. 
 
ನರ್ತಕಿಯ ಹಿಂದಿನ “ಶಕ್ತಿ’
ತನ್ನೆಲ್ಲ ಸಾಧನೆಯ ಹಿಂದಿರುವ ಒಂದು ಶಕ್ತಿಯನ್ನು ನರ್ತಕಿ ಎಂದಿಗೂ ಮರೆಯುವುದಿಲ್ಲ. ಅದು ಅವರ ಬಾಲ್ಯದ ಗೆಳತಿ ಶಕ್ತಿ ಭಾಸ್ಕರ್‌. ಸ್ಮಶಾನದಲ್ಲಿ ನೃತ್ಯ ಕಲಿಯುವಾಗಿನಿಂದ ಹಿಡಿದು, ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆಯುವವರೆಗಿನ ಪ್ರತಿ ಹೆಜ್ಜೆಯನ್ನೂ ಇಬ್ಬರೂ ಒಟ್ಟಿಗೇ ಇಟ್ಟಿದ್ದಾರೆ.

ಯಾರ್ಯಾರು ಇರುತ್ತಾರೆ?
ಇಂಟರ್‌ನ್ಯಾಷನಲ್‌ ಆರ್ಟ್ಸ್ ಆ್ಯಂಡ್‌ ಕಲ್ಚರಲ್‌ ಫೌಂಡೇಶನ್‌ ವತಿಯಿಂದ, ಶ್ರೀವತ್ಸ ಶಾಂಡಿಲ್ಯ ನೇತೃತ್ವದಲ್ಲಿ “ಮಂಗಳ ಕಲಾ ಉತ್ಸವ’ (ಟ್ರಾನ್ಸ್‌ ಆರ್ಟ್ಸ್ ಫೆಸ್ಟಿವಲ್‌’) ನಡೆಯುತ್ತಿದೆ. ಐಎಎಸ್‌ ಅಧಿಕಾರಿ ಡಾ. ನಾಗಾಂಬಿಕಾ ದೇವಿ ಅವರು ಉತ್ಸವವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತ ಭರತನಾಟ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್‌, ಎನ್‌ಝೆಡ್‌ಸಿಸಿ ಪಟಿಯಾಲದ ನಿರ್ದೇಶಕಿ  ಪ್ರೊ. ಸೌಭಾಗ್ಯ ವರ್ಧನ್‌, ಹಿರಿಯ ಕೂಚಿಪುಡಿ ಕಲಾವಿದೆ ವೈಜಯಂತಿ ಕಾಶಿ, ಐಜಿಎನ್‌ಸಿಎ ವಿಭಾಗೀಯ ನಿರ್ದೇಶಕಿ ಡಾ.ದೀಪ್ತಿ ನವರತ್ನ ಪಾಲ್ಗೊಳ್ಳುವರು. 
ಎಲ್ಲಿ?:  ಸೇವಾಸದನ, 14ನೇ ಕ್ರಾಸ್‌, ಮಲ್ಲೇಶ್ವರ
ಯಾವಾಗ?: ಆ.25, ಶನಿವಾರ, ಸಂಜೆ 5

ಇಂಥದ್ದೊಂದು ವಿಶೇಷ ಕಲಾ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷದ ವಿಷಯ. ಲೈಂಗಿಕ ಅಲ್ಪಸಂಖ್ಯಾತರ ಕಲಾಪ್ರದರ್ಶನಕ್ಕೆ ಅವಕಾಶ, ವೇದಿಕೆ ಸಿಗುವುದು ತುಂಬಾ ಕಡಿಮೆ.  ಆ ನಿಟ್ಟಿನಲ್ಲಿ ಶ್ರೀವತ್ಸ ಶಾಂಡಿಲ್ಯ ಅವರ ಈ ಕಾರ್ಯ ಶ್ಲಾಘನೀಯ ಮತ್ತು ಸ್ವಾಗತಾರ್ಹ.
–  ಪದ್ಮಶ್ರೀ ಪ್ರತಿಭಾ ಪ್ರಹ್ಲಾದ್‌, ಹಿರಿಯ ಭರತನಾಟ್ಯ ಕಲಾವಿದೆ

“ಮಂಗಳ ಕಲಾ ಉತ್ಸವ’ವನ್ನು 2016ರಲ್ಲಿ ಪ್ರಾರಂಭಿಸಿದೆವು. ಅದರಲ್ಲಿ ಮಲೇಶಿಯ, ಸಿಂಗಾಪುರದ ಕಲಾವಿದರು ಕೂಡ ಭಾಗವಹಿಸಿದ್ದರು. ನಮ್ಮ ಮತ್ತು ಲೈಂಗಿಕ ಅಲ್ಪಸಂಖ್ಯಾತರ ನಡುವಿನ ಸಾಮಾಜಿಕ ಅಂತರವನ್ನು ಕಡಿಮೆ ಮಾಡುವುದು ಕಾರ್ಯಕ್ರಮದ ಉದ್ದೇಶ. 
-ಶ್ರೀವತ್ಸ ಶಾಂಡಿಲ್ಯ, ನಿರ್ದೇಶಕ, ಇಂಟರ್‌ನ್ಯಾಷನಲ್‌ ಆರ್ಟ್ಸ್ ಆ್ಯಂಡ್‌ ಕಲ್ಚರಲ್‌ ಸೆಂಟರ್‌

ಹಿಂದೆ ಭರತನಾಟ್ಯವನ್ನು ಹೆಣ್ಮಕ್ಕಳ ಕಲೆ ಎಂದು ನಂಬಲಾಗಿತ್ತು. ಇತಿಹಾಸವನ್ನು ಗಮನಿಸಿದರೂ ಭರತನಾಟ್ಯ ಗುರುಗಳಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ. ಲಾಸ್ಯ, ಲಾವಣ್ಯ ಹುಡುಗಿಯರ ಜನ್ಮಜಾತ ಸ್ವಭಾವ. ಅದನ್ನು ಅಭಿನಯಿಸಲು ಸ್ವಲ್ಪ ಕಷ್ಟವಾದ್ದರಿಂದ ಗಂಡುಮಕ್ಕಳು ಅದನ್ನು ಕಲಿಯುತ್ತಿರಲಿಲ್ಲ. ಈಗ ಹುಡುಗರೂ ಭರತನಾಟ್ಯ ಕಲಿಯುತ್ತಿದ್ದಾರೆ. ಆದರೆ, ಭರತನಾಟ್ಯದ ಅಡವುಗಳನ್ನು, ಹುಡುಗ ಮತ್ತು ಹುಡುಗಿ ಅಭಿನಯಿಸುವಾಗ ವ್ಯತ್ಯಾಸವಾಗುತ್ತದೆ. ಆ ಸೂಕ್ಷ್ಮ ವ್ಯತ್ಯಾಸವನ್ನು ನೃತ್ಯ ಗುರುಗಳು ಕಲಿಸಬೇಕು. ಹುಡುಗಿಯ ಭಾವಾಭಿನಯ, ಆಂಗಿಕ ಚಲನೆಯನ್ನು ಹುಡುಗರು ಅನುಕರಿಸಬಾರದು. ಅಡವುಗಳಲ್ಲಿನ ಸೂಕ್ಷ್ಮ ವ್ಯತ್ಯಾಸ ಅರ್ಥವಾಗದಿದ್ದರೆ, ನೃತ್ಯ ಕಲಿತ ಹುಡುಗರು ಹುಡುಗಿಯರಂತೆ ವರ್ತಿಸುತ್ತಾರೆ ಎಂಬ ತಪ್ಪುಕಲ್ಪನೆ ಮೂಡುತ್ತದೆ. ಆದರೆ, ಒಬ್ಬ ಮಂಗಳಮುಖೀಗೆ ನೃತ್ಯ ಕಲಿಯಲು ಸಾವಿರಾರು ಸವಾಲುಗಳಿವೆ. ಯಾಕಂದ್ರೆ, ನಮ್ಮ ಸಮಾಜ ಅವರನ್ನು ಮುಖ್ಯವಾಹಿನಿಯಿಂದ ದೂರವೇ ಇಟ್ಟಿದೆ. ಇದೆಲ್ಲ ಮೀರಿಯೂ ನರ್ತಕಿ ನಟರಾಜ್‌ರ ಸಾಧನೆ ಮಾದರಿ. 
– ಡಾ.ಕೆ.ಎಸ್‌. ಚೈತ್ರಾ, ಮನಃಶಾಸ್ತ್ರಜ್ಞೆ, ಭರತನಾಟ್ಯ ಗುರು

ಪ್ರಿಯಾಂಕಾ ಎನ್‌

Advertisement

Udayavani is now on Telegram. Click here to join our channel and stay updated with the latest news.

Next