ನಗರ: ಅಧಿಕ ಕಾರ್ಯಭಾರವನ್ನು ಹೊಂದಿರುವ ಪುತ್ತೂರು ಅಗ್ನಿಶಾಮಕ ಠಾಣೆಗೆ ಕಡೆಗೂ ಅತ್ಯಾಧುನಿಕ ವ್ಯವಸ್ಥೆಯನ್ನು ಹೊಂದಿರುವ ತುರ್ತು ಕಾರ್ಯಾಚರಣೆ ಟ್ಯಾಂಕರ್ ಮಂಜೂರುಗೊಂಡಿದ್ದು, ಸೇವೆಗೆ ಆಗಮಿಸಿದೆ. ಅಗ್ನಿ ಅವಘಡ ಹಾಗೂ ತೈಲ, ಅನಿಲ ಸೋರಿಕೆ ಸಂದರ್ಭ ತತ್‌ಕ್ಷಣ ಸ್ಪಂದಿಸಲು ಅನುಕೂಲವಾಗುವಂತಹ ಸುಸಜ್ಜಿತ ಅಡ್ವಾನ್ಸ್‌ಡ್ ವಾಟರ್ ಬೌಸರ್ ಅಗ್ನಿಶಾಮಕ ಟ್ಯಾಂಕರ್ ಮಂಗಳವಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪೂಜೆಗೊಂಡು ಅಗ್ನಿಶಾಮಕ ಠಾಣೆಗೆ ಸೇರ್ಪಡೆಯಾಗಿದೆ.
ಅನಿಲ ಸೋರಿಕೆ ಅಥವಾ ಅಗ್ನಿ ಅನಾಹುತದ ಸಂದರ್ಭ ಬೆಂಕಿಯ ಮೇಲೆ ಏಕಕಾಲದಲ್ಲಿ ನೀರು ಮತ್ತು ನೊರೆ ಹಾಯಿಸಬಹುದಾದ ಸುಸಜ್ಜಿತ ತಂತ್ರಜ್ಞಾನ ಹೊಂದಿರುವ ಈ ವಾಹನದಲ್ಲಿ ನೀರು ಮತ್ತು ನೊರೆಯನ್ನು ಒಂದೇ ವಾಹನದಲ್ಲಿ ಹೊತ್ತೂಯ್ಯಬಹುದಾಗಿದೆ. 4,500 ಲೀ. ನೀರು ಮತ್ತು 500 ಲೀ. ನೊರೆ ಸಂಗ್ರಹಣೆ ಸಾಮರ್ಥ್ಯದ ಟ್ಯಾಂಕ್‌ಗಳು ಇದರಲ್ಲಿವೆ. ಅಗತ್ಯಕ್ಕೆ ತಕ್ಕಂತೆ ನೀರಿನೊಂದಿಗೆ ನೊರೆಯನ್ನು ಬಿಟ್ಟಾಗ ತೈಲದ ಮೇಲಿನ ಬೆಂಕಿ ತತ್‌ಕ್ಷಣ ಹತೋಟಿಗೆ ಬರುತ್ತದೆ.
ಈ ಹಿಂದೆ ಕಾರ್ಯಾಚರಣೆಯ ಸಂದರ್ಭ ನೊರೆ ಹಾಯಿಸುವಲ್ಲಿ ಪ್ರತ್ಯೇಕ ನೊರೆಯ ಕ್ಯಾನ್ ಒಂದನ್ನು ನೀರಿನೊಂದಿಗೆ ಪಂಪ್ ಮಾಡಿ ಸ್ಪ್ರೆà ಮಾಡಲಾಗುತ್ತಿತ್ತು. ದೊಡ್ಡ ಮಟ್ಟದ ಅಗ್ನಿ ಅನಾಹುತಗಳಿಗೆ ಇದು ಸಾಕಾಗುತ್ತಿರಲಿಲ್ಲ. ನೂತನ ವಾಹನದಿಂದ ಸಿಬಂದಿಯ ಶ್ರಮ ಮತ್ತು ಕಾರ್ಯಾಚರಣೆಯ ಸಮಯ ಉಳಿತಾಯವಾಗುತ್ತದೆ ಎಂದು ಅಗ್ನಿಶಾಮಕದಳದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಪುತ್ತೂರು ಅಗ್ನಿಶಾಮಕ ಠಾಣೆಯಲ್ಲಿ ತುರ್ತು ಕಾರ್ಯಾಚರಣೆಗಾಗಿ 1991ನೇ ಮಾಡೆಲಿನ ಹಳೆಯ ಎರಡು ಟ್ಯಾಂಕರ್‌ಗಳಿವೆ. ಇದೀಗ ಅತ್ಯಾಧುನಿಕ ಟ್ಯಾಂಕರ್ ಬಂದಿದ್ದರಿಂದ ಠಾಣೆಯ ಬಲ ಹೆಚ್ಚಾಗಿದೆ. ಇದರ ಜತೆಗೆ ರಕ್ಷಣಾ ವ್ಯಾನ್, ಒಟ್ಟು 15 ಮಂದಿ ಸಿಬಂದಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆವಶ್ಯಕತೆ ಇತ್ತು
ಪುತ್ತೂರು ಅಗ್ನಿಶಾಮಕ ದಳಕ್ಕೆ ಅತ್ಯಾಧುನಿಕ ವ್ಯವಸ್ಥೆಯ ಆವಶ್ಯಕತೆ ಇತ್ತು. ಮುಂದಿನ ದಿನಗಳಲ್ಲಿ ಅಡ್ವಾನ್ಸ್‌ಡ್ ವಾಟರ್ ಬೌಸರ್ ಕಾರ್ಯನಿರ್ವಹಿಸುವ ರೀತಿಯನ್ನು ಅಲ್ಲಲ್ಲಿ ಮುನ್ನೆಚ್ಚರಿಕೆಗಾಗಿ ಜಾಗೃತಿ ಕಾರ್ಯಕ್ರಮ ಹಾಗೂ ಅಣಕು ಪ್ರದರ್ಶನದ ಮೂಲಕ ಅಗ್ನಿಶಾಮಕ ದಳ ಪರಿಚಯಿಸಲಿದೆ.
– ಎನ್.ಸಿ. ರಾಮಚಂದ್ರ ನಾಯ್ಕ, ಪ್ರಭಾರ ಠಾಣಾಧಿಕಾರಿ, ಅಗ್ನಿಶಾಮಕ ದಳ