ಬೆಂಗಳೂರು: ಕಾರು ಖರೀದಿಸಿದರೆ ಚಿನ್ನದ ನಾಣ್ಯ ಕೊಡುತ್ತೇವೆ ಎಂದು ಹೇಳಿ, ಖರೀದಿಸಿದ ನಂತರ ರಾಗ ಬದಲಿಸಿ, ವಂಚಿಸಿದ್ದ ಕಾರು ಡೀಲರ್‌ಶಿಪ್‌ಗೆ ಗ್ರಾಹಕರೊಬ್ಬರು ನ್ಯಾಯಾಲಯದ ಮೂಲಕ ತಕ್ಕ ಪಾಠ ಕಲಿಸಿದ್ದಾರೆ. ಕಾರು ಖರೀದಿ ಮಾಡಿದರೆ 2 ಗ್ರಾಂ. ಬಂಗಾರದ ನಾಣ್ಯ ನೀಡುವುದಾಗಿ ವಂಚಿಸಿದ ಹೊಸಕೆರೆಹಳ್ಳಿಯ ರಿಂಗ್ ರಸ್ತೆಯಲ್ಲಿರುವ ಆಪಲ್ ಆಟೋಕ್ರಾಫ್ಟ್ ಕಾರು ಶೋರೂಮ್ ವಿರುದ್ಧ, ಬನಶಂಕರಿ 6ನೇ ಹಂತದ ನಿವಾಸಿ, 56 ವರ್ಷದ ಸುರೇಶ್ ಭಟ್ ಎಂಬುವವರು ಕಾನೂನು ಹೋರಾಟ ನಡೆಸಿ ನ್ಯಾಯ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ರಾಹಕ ನೀಡಿದ ದೂರು ಮಾನ್ಯ ಮಾಡಿದ ಬೆಂಗಳೂರು ನಗರ ಗ್ರಾಹಕ ನ್ಯಾಯಾಲಯ, ದೂರುದಾರ ಸುರೇಶ್ ಭಟ್‌ಗೆ 2 ಗ್ರಾಂ. ಚಿನ್ನದ ನಾಣ್ಯ ಅಥವಾ ಇಂದಿನ ಮಾರುಕಟ್ಟೆ ದರದಂತೆ 2 ಗ್ರಾಂ ಚಿನ್ನಕ್ಕೆ ಆಗುವ ಹಣವನ್ನು ನೀಡಬೇಕು. ಹಾಗೇ, ಈ ಮೊತ್ತಕ್ಕೆ 2016ರ ಅಕ್ಟೋಬರ್ 6ರಿಂದ ಅನ್ವಯವಾಗುವಂತೆ ಶೇ.12ರ ದರದ ಬಡ್ಡಿ ಸೇರಿಸಿ ನೀಡುವಂತೆ ಆದೇಶಿಸಿದೆ. ಅಲ್ಲದೆ, ಭಟ್ ದೂರುದಾರ ಕಾನೂನು ಹೋರಾಟಕ್ಕೆ ಮಾಡಿದ ಖರ್ಚಿನ ಪರಿಹಾರವಾಗಿ, ಶೋರೂಮ್‌ಗೆ ಒಂದು ಸಾವಿರ ರೂ. ದಂಡ ವಿಧಿಸಿರುವ ನ್ಯಾಯಾಲಯ, 30 ದಿನಗಳಲ್ಲಿ ಆದೇಶ ಪಾಲಿಸುವಂತೆ ಡೀಲರ್‌ಶಿಪ್‌ಗೆ ಸೂಚಿಸಿದೆ.
ಪ್ರಕರಣ ಏನು?: ಡಟ್ಸನ್ ರೆಡಿ ಗೋ ಕಾರು ಖರೀದಿಸಲು ನಿರ್ಧರಿಸಿದ್ದ ಸುರೇಶ್ ಭಟ್, 2016ರ ಸೆಪ್ಟೆಂಬರ್ 24ರಂದು 5 ಸಾವಿರ ರೂ. ಹಣ ನೀಡಿ, ಮುಂಗಡ ಬುಕಿಂಗ್ ಮಾಡಿದ್ದರು. ಹಣ ಸ್ವೀಕರಿಸಿದ ಶೋರೂಮ್ ಸಿಬ್ಬಂದಿ, ಕಾರು ಖರೀದಿ ವೇಳೆ 2 ಗ್ರಾಂ. ಚಿನ್ನದ ನಾಣ್ಯ ನೀಡುವುದಾಗಿ ತಿಳಿಸಿದ್ದರು. ಕಾರು ಬುಕ್ ಮಾಡುವ ಮೊದಲೂ ಇದೇ ಭರವಸೆ ನೀಡಿದ್ದರು. ನಿಗದಿಯಂತೆ 2016ರ ಅಕ್ಟೋಬರ್ 10ರಂದು ಕಾರು ನೀಡಿದ ಡೀಲರ್‌ಶಿಪ್‌ನವರು, ಚಿನ್ನದ ನಾಣ್ಯ ನೀಡಿರಲಿಲ್ಲ.
“ಚಿನ್ನದ ನಾಣ್ಯ ಎಲ್ಲಿ’ ಎಂದು ಭಟ್ ಅವರು ಕೇಳಿದಾಗ, “ಸ್ಟಾಕ್ ಮುಗಿದಿದೆ. 15 ದಿನಗಳಲ್ಲಿ ಕೊಡುತ್ತೇವೆ’ ಎಂದು ಸಿಬ್ಬಂದಿ ತಿಳಿಸಿದ್ದರು. ಆದರೆ ಹಲವು ತಿಂಗಳು ಅಲೆದರೂ ಸುರೇಶ್ ಭಟ್ ಅವರಿಗೆ ಶೋರೂಮ್‌ನವರು ಚಿನ್ನದ ನಾಣ್ಯ ಕೊಡಲೇ ಇಲ್ಲ. ಅಂತಿಮವಾಗಿ 2017ರ ಸೆಪ್ಟೆಂಬರ್‌ನಲ್ಲಿ “ಆಫರ್ ಮುಗಿದಿದೆ. ನಾಣ್ಯ ಕೊಡುವುದಿಲ್ಲ’ ಎಂಬ ಉತ್ತರ ಬಂದಿತ್ತು. ಹೀಗಾಗಿ, ಡೀಲರ್‌ಶಿಪ್ ವಿರುದ್ಧ ಸುರೇಶ್‌ಭಟ್ ಗ್ರಾಹಕ ನ್ಯಾಯಾಲಯದ ಮೊರೆಹೋಗಿದ್ದರು.