ಬೆಂಗಳೂರು: ಇತ್ತೀಚಿನ ಸಂಶೋಧನೆಗಳು ಪಿಎಚ್‌ಡಿಗೆ ಸೀಮಿತವಾಗುತ್ತಿವೆ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಆರೋಪಿಸಿದ್ದಾರೆ. ಚಿಂತನ ಚಿಲುಮೆ ಸಂಘಟನೆ, ಮಾಲೆ ಪ್ರಕಾಶನ ಸಹಯೋಗದೊಂದಿಗೆ ಶನಿವಾರ ಪ್ರಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ, 1962ರ ಭಾರತ- ಚೀನಾ ಯುದ್ಧ ಕುರಿತು ಲೇಖಕ ಯಡೂರ ಮಹಾಬಲ ಅವರು ರಚಿಸಿದ “ಯುದ್ಧ ಪೂರ್ವ ಕಾಂಡ’, “ಯುದ್ಧಕಾಂಡ’ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸಂಶೋಧಕ ಭೂತಕಾಲವನ್ನು ಪ್ರಧಾನವಾಗಿಟ್ಟುಕೊಂಡು ವರ್ತಮಾನಕ್ಕೆ ಅನುಗುಣವಾಗುವಂತೆ ಕೃತಿಯನ್ನು ಹೊರ ತರಬೇಕು. ಆದರೆ, ಕೆಲ ಲೇಖಕರು ಭೂತ ಕಾಲವನ್ನು ಪರಿಗಣನೆಗೆ ಪಡೆಯದೇ ಕೃತಿ ರಚಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಧ್ಯಯನ ಮಾಡದೇ ಸಂಶೋಧನೆ ಮಾಡಲಾಗುತ್ತಿದೆ ಎಂದರು.
ಬೃಹತ್ ದೇಶಗಳಿಗೆ ಯುದ್ಧ ಒಂದು ಉದ್ಯಮವಾಗಿದೆ. ಈ ಮೊದಲು ರಾಜಪ್ರಭುತ್ವದಲ್ಲಿ ಮತ್ತು ಪ್ರಜಾಪ್ರಭುತ್ವದಲ್ಲಿ ಯುದ್ಧಗಳು ನಡೆಯುತ್ತಿದ್ದವು. ಆದರೆ, ಈಗ ಮತದಾನಕ್ಕಾಗಿ ಹಾಗೂ ಪಕ್ಷದ ಅಸ್ತಿತ್ವಕ್ಕಾಗಿ ಯುದ್ಧಗಳನ್ನು ಮಾಡಿಯೇ ತೀರುತ್ತೇವೆ ಎಂಬ ಕಾಲ ಬಂದಿದೆ. ಸೈನಿಕನ ಬಲಿದಾನಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ವಿಷಾದಿಸಿದರು.
ಕನ್ನಡದಲ್ಲಿ ಯುದ್ಧಕ್ಕೆ ಸಂಬಂಧಿಸಿದ ಕೃತಿಗಳು ತೀರಾ ಕಡಿಮೆ. ಈ ನಿಟ್ಟಿನಲ್ಲಿ ಯಡೂರ ಮಹಾಬಲ ಯುದ್ಧದ ಬಗ್ಗೆ ಕೃತಿ ರಚಿಸಿರುವುದು ವಿಶೇಷ. ಇತ್ತೀಚಿಗೆ ಸಂಸೃತಿಯ ಅಪವ್ಯಾಕ್ಯ ಹೆಚ್ಚಾಗುತ್ತಿದೆ. ಎಲ್ಲದಕ್ಕೂ ನೆಹರು ಅವರನ್ನು ಗುರಿಯಾಗಿಸಿ ಟೀಕಿಸುತ್ತಿದ್ದಾರೆ ಎಂದು ತಿಳಿಸಿದರು.
ರೈತ ಮುಖಂಡ ಜೆ.ಎಂ.ವೀರಸಂಗಯ್ಯ ಮಾತನಾಡಿ, ಭಾರತ ಮತ್ತು ಚೀನಾ ನಡುವಿನ ಯುದ್ಧದ ಘಟನೆಗಳನ್ನು ಯಡೂರ ಮಹಾಬಲ ಅವರು ಸವಿಸ್ತಾರವಾಗಿ ಉಲ್ಲೇಖೀಸಿದ್ದಾರೆ. ಯುದ್ಧ ಬೇಡ ಎನ್ನುವವರನ್ನು ದೇಶದ್ರೋಹಿಗಳ ಪಟ್ಟಿಗೆ ಸೇರಿಸುವ ಕಾಲ ಇದಾಗಿದೆ ಎಂದು ಆರೋಪಿಸಿದರು.
ಇದೇ ವೇಳೆ “ಲೋಹಿಯಾ ವಿಚಾರಗಳ ಒಂದು ವಿಮರ್ಶೆ’ ವಿಷಯ ಕುರಿತು ವೈದ್ಯ ಬಿ.ಆರ್.ಮಂಜುನಾಥ, “ಆಕ್ಸಾಯ್ ಚಿನ್ ವಿವಾದದ ಇತಿಹಾಸ’ ಕುರಿತು ಸಾಹಿತ್ಯ ವಿಮರ್ಶಕ ರಾಜೇಂದ್ರ ಚೆನ್ನಿ, “ಯುದ್ಧಪೂರ್ವ ಕಾಂಡ’ ಪುಸ್ತಕ ಕುರಿತು ಚಿಂತಕ ಕೆ.ಎನ್. ಉಮೇಶ, “ಯುದ್ಧಕಾಂಡ’ ಪುಸ್ತಕದ ಕುರಿತು ಚಿಂತಕ ಡಾ.ಪ್ರಕಾಶ್ ಕೃಷ್ಣಪ್ಪ ಅವರು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.