Advertisement

15 ರಂದು ಮತದಾರರ ಅಂತಿಮ ಪಟ್ಟಿ ಪ್ರಕಟ

12:43 PM Dec 23, 2018 | Team Udayavani |

ಕಲಬುರಗಿ: ರಾಜ್ಯ ಚುನಾವಣಾ ಆಯೋಗವು ಜ. 15 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳಿಸುತ್ತಿದೆ. ಈ ಅವಧಿಯೊಳಗಾಗಿ ಮತದಾರರ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಿದ್ದಲ್ಲಿ ಆಕ್ಷೇಪಣೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ತಿಳಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಕರೆದ ರಾಜಕೀಯ ಪಕ್ಷದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜಕೀಯ ಪಕ್ಷದವರು ಬೂತ್‌ ಮಟ್ಟದ ಏಜೆಂಟರ ಮಾಹಿತಿ ನೀಡಿಲ್ಲ. ಡಿ. 26 ರಂದು ಕರೆದ ರಾಜಕೀಯ ಪಕ್ಷದ ಮುಖಂಡರ ಸಭೆಯಲ್ಲಿ ಕಡ್ಡಾಯವಾಗಿ ಏಜೆಂಟರ ಪಟ್ಟಿ ಸಲ್ಲಿಸಬೇಕು ಎಂದರು.

ಜಿಲ್ಲೆಯಲ್ಲಿ ಅ. 10ರಂದು ಮತದಾರರ ಕರಡು ಯಾದಿ ಪ್ರಕಟಿಸಲಾಗಿದೆ. ಅದರ ಪ್ರಕಾರ ಜಿಲ್ಲೆಯಲ್ಲಿ 101 ಮತಗಟ್ಟೆಗಳನ್ನು ಹೆಚ್ಚಿಗೆ ರೂಪಿಸುವ ಮೂಲಕ ಜಿಲ್ಲೆಯಲ್ಲಿ ಒಟ್ಟು 2368 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಕರಡು ಮತದಾರರ ಯಾದಿಯಂತೆ ಜಿಲ್ಲೆಯಲ್ಲಿ 1063102 ಪುರುಷ, 1033331 ಮಹಿಳೆ ಹಾಗೂ 344 ಇತರೆ ಮತದಾರರು ಸೇರಿದಂತೆ ಒಟ್ಟು 2096777 ಮತದಾರರಿದ್ದು 10490 ವಿಕಲಚೇತನ ಮತದಾರೆಂದು ಗುರುತಿಸಲಾಗಿದೆ ಎಂದರು.

ಅ. 11 ರಿಂದ ಡಿ. 22 ರ ವರೆಗೆ ಕರಡು ಮತದಾರರ ಪಟ್ಟಿ ಪರಿಷ್ಕರಣೆಗೆ ಆಹ್ವಾನಿಸಿದ ಆಕ್ಷೇಪಣೆಗಳನ್ವಯ ಈ ಅವಧಿಯಲ್ಲಿ 21082 ನೂತನ ಮತದಾರರನ್ನು ಸೇರಿಸಲಾಗಿದೆ. 15552 ಮತದಾರರನ್ನು ಪಟ್ಟಿಯಿಂದ ತಗೆದುಹಾಕಲಾಗಿದೆ. 5946 ಜನರ ಹೆಸರು ಅಥವಾ ವಿಳಾಸ ತಿದ್ದುಪಡಿ ಮಾಡಲಾಗಿದ್ದು, 411 ಮತದಾರರು ತಮ್ಮ ಹೆಸರನ್ನು ಬೇರೆಡೆ ವರ್ಗಾಯಿಸಿಕೊಂಡಿದ್ದಾರೆ ಎಂದು ಹೇಳಿದರು. 

ಜಿಲ್ಲೆಯಲ್ಲಿ ಮತಗಟ್ಟೆವಾರು ಅತಿ ಹೆಚ್ಚು ಮತ್ತು ಅತಿ ಕಡಿಮೆ ಹೊಸ ಹೆಸರುಗಳ ನೋಂದಣಿ, ಹೆಸರು ತೆಗೆದುಹಾಕುವ ಪ್ರಕ್ರಿಯೆಯನ್ನು ಗಮನಿಸಲಾಗುತ್ತಿದೆ. ಯಾವುದಾದರು ಮತಗಟ್ಟೆಯಲ್ಲಿ ಸಂಶಯ ಕಂಡುಬಂದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳಿಂದ ಪರಿಶೀಲಿಸಲಾಗುತ್ತಿದೆ.

Advertisement

ಜಿಲ್ಲೆಯಲ್ಲಿರುವ ಹೆಸರು ಮತ್ತು ಭಾವಚಿತ್ರ ಡುಪ್ಲಿಕೇಟ್‌ ಹೊಂದಿರುವವರ ವಿವರ ಮಾಹಿತಿ ಚುನಾವಣಾ ಆಯೋಗವು ನೀಡಿದೆ. ಅವುಗಳನ್ನು ಪರಿಶೀಲಿಸಲಾಗಿದೆ. ಚುನಾವಣೆ ಆಯೋಗವು ವಿವಿಧ ಮತಕ್ಷೇತ್ರಗಳ ಹಾಗೂ ಜಿಲ್ಲೆಯಲ್ಲಿ ಹೆಸರು ಮತ್ತು ಭಾವಚಿತ್ರ ಡುಪ್ಲಿಕೇಟ್‌ ಇರುವವರನ್ನು ಗುರುತಿಸಲು ಇಆರ್‌ಓ ನೆಟ್‌ ಎಂಬ ತಂತ್ರಾಂಶ ಅಭಿವೃದ್ಧಿ ಪಡಿಸಿದೆ.

ಮುಂದಿನ ದಿನಗಳಲ್ಲಿ ಈ ತಂತ್ರಾಂಶ ಜಿಲ್ಲೆಯಲ್ಲೂ ಅಳವಡಿಸಲಾಗುವುದು ಎಂದು ಹೇಳಿದರು. ಜಿಲ್ಲೆಯಲ್ಲಿ ಕೆಲವರು 35 ರಿಂದ 40ವರ್ಷ ವಯಸ್ಸಿನವರು ಮತದಾರರ ಪಟ್ಟಿಯಲ್ಲಿ ನೂತನವಾಗಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದಾರೆ. ಇಂಥವರು ಈ ಹಿಂದೆ ಯಾವುದೇ ಮತಕ್ಷೇತ್ರದಲ್ಲಿ ಹೆಸರು ನೋಂದಾಯಿಸಿಕೊಂಡಿರುತ್ತಾರೆ. ಅಲ್ಲಿನ ಮತದಾರರ ಚೀಟಿ ಸಲ್ಲಿಸಿದಲ್ಲಿ ಹೆಸರು ವರ್ಗಾಯಿಸಬಹುದು. ಹಳೆಯ ಕೆ.ಟಿ. ಸರಣಿಯ ಮತದಾರರ ಚೀಟಿ ಇದ್ದರೂ ಸಹ ಸಲ್ಲಿಸಿ ನೂತನ ಚೀಟಿ ತಡೆಯಬಹುದಾಗಿದೆ ಎಂದರು.  ಚುನಾವಣಾ ಶಾಖೆ ಶಿರಸ್ತೇದಾರ ಸಂಜಯ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು.

 ಮತದಾರ ಪಟ್ಟಿಗೆ ಭಾವಚಿತ್ರ ಸೇರಿಸಿಕೊಳ್ಳಿ 
ಕಲಬುರಗಿ: ಗುಲಬರ್ಗಾ ಉತ್ತರ ಹಾಗೂ ದಕ್ಷಿಣ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮತದಾರರ ಪಟ್ಟಿಯಲ್ಲಿ ಹೆಸರಿದ್ದು,
ಭಾವಚಿತ್ರವಿಲ್ಲದ ಮತದಾರರು ಎರಡು ದಿನದೊಳಗೆ ತಮ್ಮ ಭಾವಚಿತ್ರವನ್ನು ಸಂಬಂಧಿಸಿದ ಬಿ.ಎಲ್‌.ಒ.ಗಳಿಗೆ ಸಲ್ಲಿಸಿ
ಮತದಾರರ ಪಟ್ಟಿಯಲ್ಲಿ ಭಾವಚಿತ್ರ ಸೇರಿಸಿಕೊಳ್ಳಬೇಕು ಎಂದು ಗುಲಬರ್ಗಾ ಉತ್ತರ ಹಾಗೂ ಗುಲಬರ್ಗಾ ದಕ್ಷಿಣ ಕ್ಷೇತ್ರದ ಮತದಾರರ ನೋಂದಣಾಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳು ತಿಳಿಸಿದ್ದಾರೆ. ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ 3375 ಮತದಾರರ ಹಾಗೂ ಗುಲಬರ್ಗಾ ದಕ್ಷಿಣ ವಿಧಾನಸಭೆ ಕ್ಷೇತ್ರಗಳಲ್ಲಿ 665 ಮತದಾರರ ಭಾವಚಿತ್ರ ಇರುವುದಿಲ್ಲ. ಈ ಬಗ್ಗೆ ಪಾಲಿಕೆ ಅಂತರ್ಜಾಲ gulbargacity.mrc.gov.in ನಲ್ಲಿ ಪಟ್ಟಿ ಲಭ್ಯವಿದೆ. ಭಾವಚಿತ್ರ ಇಲ್ಲದ ಮತದಾರರು ಕಾಲಮಿತಿಯೊಳಗೆ ಸಂಬಂಧಿಸಿದ ಬಿ.ಎಲ್‌.ಪ. ಗಳಿಗೆ ಭಾವಚಿತ್ರ ಸಲ್ಲಿಸದಿದ್ದಲ್ಲಿ, ಈ ವಿಳಾಸದಲ್ಲಿ ಮತದಾರರು ವಾಸವಿರುವುದಿಲ್ಲ ಎಂದು ಪರಿಗಣಿಸಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಅರ್ಹ ಮತದಾರರೆ ಆಗಿದ್ದಲ್ಲಿ ನಮೂನೆ-6ಲ್ಲಿ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next