Advertisement

ಮುಗಿಯದ ಅತಿಕ್ರಮಿತರ ಹೋರಾಟ

11:58 AM Sep 22, 2019 | Team Udayavani |

ಹೊನ್ನಾವರ: ಅರಣ್ಯ ಭೂಮಿ ಸಾಗುವಳಿದಾರರ ಬದುಕು ಬಿಸಿಲುಕುದುರೆಯ ಬೆನ್ನುಹತ್ತಿ ಬಸವಳಿದು ಹೋಗಿದೆ. ನಾಲ್ಕು ದಶಕಗಳು ಕಳೆದು ಹೋಯಿತು. ಮೂರನೇ ತಲೆಮಾರಿಗೆ ಮತದ ಹಕ್ಕು ಬಂತು. ಆದರೂ ಹುಟ್ಟಿದ ಭೂಮಿಯಲ್ಲಿ ಬದುಕಲು ಅವಕಾಶ ಇಲ್ಲದಾಗಿದೆ.  ಸ್ವಾತಂತ್ರ್ಯ  ಬಂದಾಗ ಜಿಲ್ಲೆಯಲ್ಲಿ ಶೇ.80 ರಷ್ಟು ಅರಣ್ಯವಿತ್ತು. 3ಲಕ್ಷ ಜನಸಂಖ್ಯೆಯಿತ್ತು. ಆಗ ಅರಣ್ಯ ಭೂಮಿ ಜನರಿಗೆ ಬೇಡವಾಗಿತ್ತು.

Advertisement

ಅರಣ್ಯ ಸರ್ಕಾರಕ್ಕೆ ಕುಬೇರನ ಬೊಕ್ಕಸವಾಯಿತು. ಈಗ ಸರ್ಕಾರದ ಕೈಲಿ ಅರಣ್ಯ ಇಲಾಖೆ ಭೂಮಿಯಿದ್ದರೂ ಆದಾಯ ಮೂಲವಾಗಿ ಸರ್ಕಾರವೇ ಕಾಡುಕಡಿದು ಮಾರಿದ ಕಾರಣ ಕೇವಲ ಶೇ. 40ರಷ್ಟು ಭೂಮಿಯಲ್ಲಿ ಅರಣ್ಯವಿದೆ. ಕಡಿದು ಹೋದ ಅರಣ್ಯ ಭೂಮಿಯಲ್ಲಿ ಅಲ್ಲಲ್ಲಿ ಜನ ಅತಿಕ್ರಮಣ ಮಾಡಿಕೊಂಡು ಅಡಕೆ, ತೆಂಗಿನ ತೋಟ ಬೆಳೆಸಿಕೊಂಡಿದ್ದಾರೆ. ಇವರಿಗೆ ಇನ್ನೂ ಹಕ್ಕು ದೊರೆತಿಲ್ಲ. 1980ರ ದಶಕದಲ್ಲಿ ಕೆಲವರಿಗೆ ಹಣ್ಣು-ಹಂಪಲು ಬೆಳೆಯಲು, ತೋಟಿಗರಿಗೆ ತೋಟಕ್ಕೆ ಸಪ್ಪು ತರಲು ಒಂದಿಷ್ಟು ಅರಣ್ಯ ಭೂಮಿ ಬಿಡುಗಡೆ ಮಾಡಲಾಯಿತು. ಶೇ. 80ರಷ್ಟು ಭೂಮಿ ಅರಣ್ಯ ಇಲಾಖೆ ಕೈಲಿದ್ದ ಕಾರಣ ಮತ್ತು ಸಿಆರ್‌ ಝಡ್‌ ಕಾನೂನು, ಕೇಂದ್ರ ಅರಣ್ಯ ಕಾನೂನು ಜಾರಿಗೆ ಬಂದ ಕಾರಣ ಯಾವುದೇ ಕೈಗಾರಿಕೆ ಆರಂಭವಾಗಲಿಲ್ಲ.

ಜನಸಂಖ್ಯೆ ಏರುತ್ತ ಹೋದಂತೆ, ಅನ್ನಕೊಡುವ ಉದ್ಯೋಗ ಇಲ್ಲದ ಕಾರಣ ಕುಟುಂಬದ ಉದ್ಯೋಗವಾದ ಕೃಷಿಗೆ ಜನ ಕಾಡುಹೊಕ್ಕಿದರು. ವೃತ್ತಿ ಶಿಕ್ಷಣ ನೀಡುವ ತರಬೇತಿ ಸಂಸ್ಥೆ ಇರಲಿಲ್ಲ. ಅರೆಬರೆ ಕಲಿತವರು ಕಾಡನ್ನು ಅವಲಂಬಿಸಿದರು. ಕೆಲವರು ಹೊಟೇಲ್‌ ಕೆಲಸಕ್ಕೆ ಹೋದರು. ಸರ್ಕಾರ ಕಾಡಿನ ನಾಶವನ್ನು ಜನರ ತಲೆಗೆ ಕಟ್ಟಿ ಒಕ್ಕಲೆಬ್ಬಿಸಲು ಹೊರಟಿತ್ತು. ಕಾನೂನು ಬಿಗಿಯಾಯಿತು. ಅರಣ್ಯ ಇಲಾಖೆ ಜಾಗದ ಮಧ್ಯೆಯೇ ಜನವಸತಿ ಇದೆ. ಬಹುಕಾಲದಿಂದ ಇವರು ವಾಸ್ತವ್ಯವಿದ್ದರೆ ಅ ಭೋಗದಾರಿಕೆ ಹಕ್ಕು ಕೊಡಲು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿತ್ತು.

ಸರ್ಕಾರಗಳು ಇದನ್ನು ಚುನಾವಣೆಯ ಅಸ್ತ್ರವಾಗಿ ಬಳಸಿಕೊಂಡವೇ ವಿನಃ ಭೂಮಿ ಕೊಡಲಿಲ್ಲ. ಅರ್ಜಿ ಸ್ವೀಕರಿಸಿ ಶೇ.99ನ್ನು ಅಧಿಕಾರಿಗಳು ತಿರಸ್ಕರಿಸಿದರು. ಪರಿಸರದ ಪಂಡಿತರೊಬ್ಬರು ನ್ಯಾಯಾಲಯಕ್ಕೆ ಹೋಗಿ ಅತಿಕ್ರಮಣ ಖುಲ್ಲಾಪಡಿಸುವ ಆದೇಶ ಪಡೆದರು. ಅತ್ತ ಅಧಿಕಾರಿಗಳು ಎಬ್ಬಿಸಲು ಹೊರಟರೆ ಇತ್ತ ರಾಜಕಾರಣಿಗಳು ಜನರನ್ನು ಖುಷಿಪಡಿಸಲು ಮೌಖೀಕವಾಗಿ ತಡೆಯೊಡ್ಡಿದರು. ಸಾಗುವಳಿದಾರರ ಕಾಟ ತಪ್ಪಿಸಿಕೊಳ್ಳಲು ಜಿಲ್ಲೆಯ ಅರಣ್ಯವನ್ನು ಅಭಯಾರಣ್ಯವನ್ನಾಗಿ ಸರ್ಕಾರ ಘೋಷಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದು ಜಾರಿಗೆ ಬಂದಿದೆ. ಇದರಿಂದ ಅರಣ್ಯವಾಸಿಗಳಿಗೆ ಯಾವುದೇ ಪ್ರಯೋಜನ ಇಲ್ಲ, ದಾರಿಗಳು ಬಂದ್‌ ಆಗಿವೆ.

ಈ ಮಧ್ಯೆ ನ್ಯಾಯವಾದಿ ರವೀಂದ್ರನಾಥ ನಾಯ್ಕ 30ವರ್ಷಗಳಿಂದ ಅತಿಕ್ರಮಣದಾರರ ಪರವಾಗಿ ಹೋರಾಡುತ್ತ ಬಂದರು. ಜಾಥಾ ನಡೆಸಿದರು, ನ್ಯಾಯಾಲಯದ ಕಟ್ಟೆ ಏರಿದರು, ಹಳ್ಳಿಹಳ್ಳಿ ತಿರುಗಾಡಿ ಸಂಘಟನೆ ನಡೆಸಿದರು. ಇವರನ್ನು ರಾಜಕೀಯವಾಗಿ ಕಾಂಗ್ರೆಸ್‌ ಮುಗಿಸಿತು. ಜೆಡಿಎಸ್‌ ಕೈಬಿಟ್ಟಿತು. ಅತಿಕ್ರಮ ಮಾಡಿದ ಜನ ಮತಹಾಕಿದ್ದರೆ ಇವರ ಠೇವಣಿ ಉಳಿಯುತ್ತಿತ್ತು.

Advertisement

ತಮ್ಮನ್ನು ಉಳಿಸಿದ ರವೀಂದ್ರನಾಥ ನಾಯ್ಕರನ್ನು ಮತದಾರರು ಸೋಲಿಸಿದರು. ಪರಿಸರವಾದಿಗಳು ಉದ್ಯಮ ಬರಲು ಬಿಡಲಿಲ್ಲ,ಕಾಡು ಸೂರೆ ಹೋಗುವುದನ್ನು ತಡೆಯಲಿಲ್ಲ, ಅತಿಕ್ರಮಣದಾರರನ್ನು ಎಬ್ಬಿಸಿ ಎಂದು ಬೊಬ್ಬೆ ಹೊಡೆಯುವುದನ್ನು ಬಿಡಲಿಲ್ಲ. ರಾಜಕಾರಣಿಗಳ, ಅರಣ್ಯ ಅಧಿಕಾರಿಗಳ ಕೈಕಾಲು ಹಿಡಿಯುತ್ತ ದಯನೀಯ ಸ್ಥಿತಿಯಲ್ಲಿ ಅತಿಕ್ರಮಣದಾರರು ಜೀವನ ನಡೆಸಿದ್ದಾರೆ. ಅತಿಕ್ರಮಣದಾರರು ಒಂದಾಗುತ್ತಿಲ್ಲ. ಚುನಾವಣೆ ಬಂದಾಗ ಧರ್ಮ, ಜಾತಿ, ಹಣಕ್ಕೆ ಮರುಳಾಗುತ್ತಾರೆ. ಮತ್ತೆ ಗೋಳಾಡುತ್ತಾರೆ. ಇವರನ್ನು ಕಟ್ಟಿಕೊಂಡು ಹೋರಾಡುವ ರವೀಂದ್ರನಾಥ ನಾಯ್ಕರು ದಣಿದಿದ್ದಾರೆ. ಅತಿಕ್ರಮಣದಾರರನ್ನು ಹೊರದಬ್ಬಿದರೆ ಅವರಿಗೆ ಅರಬ್ಬೀ ಸಮುದ್ರವೇ ಗತಿ. ವಾಸ್ತವಿಕ ಸ್ಥಿತಿ ಇದು, ಪರಿಹಾರ ಮರೀಚಿಕೆ.

 

-ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next