ಬೆಂಗಳೂರು: ನಗರದಲ್ಲಿ ಶಾಲಾ-ಕಾಲೇಜುಗಳು ಆರಂಭಗೊಂಡು ಹೆಚ್ಚು-ಕಡಿಮೆ 20 ದಿನಗಳಾಗಿವೆ. ಆದರೆ, ಇದುವರೆಗೆ ಒಬ್ಬೇ ಒಬ್ಬ ವಿದ್ಯಾರ್ಥಿಗೂ ಪಾಸು ವಿತರಣೆ ಆಗಿಲ್ಲ!
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವ್ಯಾಪ್ತಿಯಲ್ಲಿ ಸುಮಾರು ನಾಲ್ಕು ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಅಂದಾಜು 20 ಸಾವಿರ ಅರ್ಜಿಗಳು ಸಲ್ಲಿಕೆ ಆಗಿವೆ. ವಿದ್ಯಾರ್ಥಿ ಗಳಿಗೆ ಪಾಸ್ ವಿತರಣೆಯಾಗಿಲ್ಲದ ಕಾರಣ ಶಾಲಾ- ಕಾಲೇಜುಗಳಿಗೆ ತೆರಳಲು ಪರದಾಡುತ್ತಿದ್ದಾರೆ.
ಈ ಹಿಂದಿನ ವರ್ಷ ಪಾಸು ಹೊಂದಿದವರಿಗೆ ಈ ವಿಳಂಬ ಧೋರಣೆಯಿಂದ ಅಷ್ಟಾಗಿ ಸಮಸ್ಯೆ ಆಗಿಲ್ಲ. ಆದರೆ, ಹೊಸದಾಗಿ ಅಂದರೆ ಶಾಲೆಯಿಂದ ಕಾಲೇಜಿಗೆ ಶಿಫ್ಟ್ ಆಗಿರುವ ಅಥವಾ ಮನೆ ಸ್ಥಳಾಂತರ ಮತ್ತಿತರ ಕಾರಣಗಳಿಂದ ಇದೇ ಮೊದಲ ಬಾರಿಗೆ ಪಾಸು ಪಡೆಯ ಬಯಸುವ ವಿದ್ಯಾರ್ಥಿಗಳು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ.
ಅತ್ತ ಉಚಿತ ಪಾಸು ಇಲ್ಲ. ಇತ್ತ ರಿಯಾಯ್ತಿ ಪಾಸುಗಳೂ ಇಲ್ಲ. ನಿತ್ಯ ಬಸ್‌ನಲ್ಲಿ ಹಣ ಪಾವತಿಸಿ ಪ್ರಯಾಣಿಸುವಂತಾಗಿದೆ. ಇದರ ಮೊತ್ತ ಈಗಾಗಲೇ ಸಾವಿರ ರೂ. ದಾಟಿದ್ದು, ಇದು ಸಾರಿಗೆ ಸಂಸ್ಥೆ ನೀಡುವ ವಾರ್ಷಿಕ ರಿಯಾಯ್ತಿ ಬಸ್ ಪಾಸಿನ ಮೊತ್ತಕ್ಕೆ ಸಮವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಇಬ್ಬರ ನಡುವೆ ಕೂಸು ಬಡವಾಯ್ತು: ಈ ವರ್ಷದಿಂದ ಬಿಎಂಟಿಸಿಯು ಮಹತ್ವಾಕಾಂಕ್ಷಿ ಸ್ಮಾರ್ಟ್‌ಕಾರ್ಡ್ ವಿತರಣಾ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದ್ದು, ನೂತನ ವ್ಯವಸ್ಥೆಯ ಪ್ರಕಾರ ಇನ್ನು ಮುಂದೆ ಮಕ್ಕಳಿಗೆ ಆಯಾ ಶಾಲೆಗಳ ಮೂಲಕವೇ ಪಾಸುಗಳ ವಿತರಣೆ ಆಗುತ್ತದೆ. ಆದರೆ, ಶಾಲಾ-ಕಾಲೇಜು ಆಡಳಿತ ಮಂಡಳಿಗಳು ಈ ಜವಾಬ್ದಾರಿ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದು, ಪೂರಕವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಬಿಎಂಟಿಸಿ ಮತ್ತು ಶಾಲಾ-ಕಾಲೇಜುಗಳ ನಡುವಿನ ಸಮನ್ವಯದ ಕೊರತೆಯಿಂದ ವಿದ್ಯಾರ್ಥಿಗಳು, ಪೋಷಕರು ಶಿಕ್ಷೆ ಅನುಭವಿಸುವಂತಾಗಿದೆ.
12 ಸಾವಿರ ಶಿಕ್ಷಣ ಸಂಸ್ಥೆಗಳು: ಬೆಂಗಳೂರು ವ್ಯಾಪ್ತಿಯಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಸೇರಿ ಒಟ್ಟಾರೆ 12 ಸಾವಿರ ಶಿಕ್ಷಣ ಸಂಸ್ಥೆಗಳಿವೆ. ಈ ಬಾರಿ ಉಚಿತ ಪಾಸು ವಿತರಣೆ ಮಾತುಗಳು ಕೇಳಿಬರುತ್ತಿರುವುದರಿಂದ ಆಕಾಂಕ್ಷಿಗಳ ಸಂಖ್ಯೆ ಕೂಡ ಹೆಚ್ಚಿದೆ. ಹೀಗಿರುವಾಗ, ಪಾಸುಗಳನ್ನು ವಿತರಿಸದಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದಿನಂತೆ ಬಿಎಂಟಿಸಿ ನಿಯಂತ್ರಣ ಕೊಠಡಿಗಳಲ್ಲಿ ಪಾಸಿಗಾಗಿ ವಿಚಾರಿಸಿದರೆ, ಶಿಕ್ಷಣ ಸಂಸ್ಥೆಗಳತ್ತ ಮುಖಮಾಡುತ್ತಾರೆ. ಇನ್ನು ಶಿಕ್ಷಣ ಸಂಸ್ಥೆಗಳು ತಮಗೆ ಇನ್ನೂ ಮಾಹಿತಿ ಇಲ್ಲ ಎಂದು ಹೇಳುತ್ತಿವೆ. ಈ ಮಧ್ಯೆ ವಿದ್ಯಾರ್ಥಿಗಳು ಅಲೆದಾಡುವಂತಾಗಿದೆ. ಶಾಲೆಗಳನ್ನೂ ತಪ್ಪಿಸುವಂತಿಲ್ಲ;ತಿಂಗಳುಗಟ್ಟಲೆ ಹಣ ಪಾವತಿಸಿ ಹೋಗುವುದು ಕಷ್ಟ ಆಗುತ್ತಿದೆ ಎಂದು ಕಾಲೇಜು ವಿದ್ಯಾರ್ಥಿ ಮನೋಜ್ ಅಸಹಾಯಕತೆ ತೋಡಿಕೊಳ್ಳುತ್ತಾರೆ.
ಹದಿನೈದು ದಿನಗಳಿಂದ ಪ್ರತಿ ದಿನ ಶಾಲೆಗೆ ಹೋಗಿಬರಲು 30-40 ರೂ. ಖರ್ಚಾಗುತ್ತಿದ್ದು, ಪಾಸಿನ ಮೊತ್ತಕ್ಕಿಂತ ಹೆಚ್ಚು ಹಣ ಖರ್ಚಾಗಿದೆ.
ಅನಿತಾ , ವಿದ್ಯಾರ್ಥಿನಿ