ವಿಜಯಪುರ: ಕಮಲೇಶಚಂದ್ರ ವರದಿ ಅನುಷ್ಠಾನ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ 11ನೇ ದಿನಕ್ಕೆ ಕಾಲಿರಿಸಿದೆ.
ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಅಖೀಲ ಭಾರತ ನ್ಯಾಷನಲ್ ಯುನಿಯನ್ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಎಸ್.ಬಿ. ಪಾಟೀಲ, ಅಂಚೆ ಇಲಾಖೆ ಹಾಗೂ ಇಲಾಖೆಯೇತರ ಎಂಬ ಬೇಧ-ಭಾವ ಸರಿಯಲ್ಲ ಎಂದು ಕಿಡಿ ಕಾರಿದರು.
ಗ್ರಾಮೀಣ ಅಂಚೆ ನೌಕರರಿಂದಲೇ ಗ್ರಾಮೀಣ ಪ್ರದೇಶದ ಮೂಲೆ ಮೂಲೆಗೆ ಅಂಚೆ ಸೇವೆ, ಪಿಂಚಣಿ ಸೇವೆ ತಲುಪಿಸುವಲ್ಲಿ ಇವರ ಪರಿಶ್ರಮ ದೊಡ್ಡದಿದೆ. ಆದರೂ ಕೇಂದ್ರ ಸರ್ಕಾರ ಇವರ ಶ್ರಮವನ್ನು ಅದರಲ್ಲೂ ಇಲಾಖೆಗೆ ಹೆಚ್ಚಿನ ಆದಾಯ ತರುವ ಗ್ರಾಮೀಣ ಅಂಚೆ ನೌಕರ ಸೇವೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪರಿಣಾಮವೇ ಹಳ್ಳಿ ಅಂಚೆಯಣ್ಣಗಳ ಬದುಕು ಸಂಕಷ್ಟದಲ್ಲಿದೆ. ಇನ್ನಾದರೂ ನ್ಯಾಯ ಸಮ್ಮತ ಬೇಡಿಕೆ ಈಡೇರಿಕೆಗೆ ಕೇಂದ್ರ ಸರ್ಕಾರ ತಕ್ಷಣ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಕಳೆದ ಹಲವು ದಿನಗಳಿಂದ ಅಂಚೆ ನೌಕರರು ನಡೆಸುತ್ತಿರುವ ಮುಷ್ಕರಿಂದಾಗಿ ಗ್ರಾಮೀಣ ಭಾಗದಲ್ಲಿ ಅಂಚೆ ಸೇವೆಗಳಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಸಾಮಾಜಿಕ ಭದ್ರತಾ ಯೋಜನೆ ಅಡಿ ವಿತರಿಸುವ ಪಿಂಚಣಿಗಳು ತಲುಪಲು ಸಾಧ್ಯವಾಗುತ್ತಿಲ್ಲ, ಮಹತ್ವದ ಪತ್ರಗಳು ಸಹ ಗ್ರಾಮೀಣರ ಕೈಗೆ ದೊರಕುತ್ತಿಲ್ಲ. ಗ್ರಾಮೀಣ ಅಂಚೆ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ ಎಂದು ಸಾರ್ವಜನಿಕರು ಗೊಣಗುತ್ತಿದ್ದಾರೆ.
ಐ.ಎನ್. ಬಿದರಕುಂದಿ ಮಾತನಾಡಿದರು. ಸಾದೀಯಾ ತಾಜ್, ಎಸ್.ಎಂ. ತೊರವಿ, ಬಿ.ಎಂ. ಇವಣಗಿ, ಚಂದ್ರಶೇಖರ ಬಾಗೇವಾಡಿ, ಎಂ.ಡಿ. ಕಾಂಬಳೆ, ಶಿವಲೀಲಾ ತೋರತ, ವಿ.ವಿ. ಕುಲಕರ್ಣಿ, ಜಯಶ್ರೀ ಆಸಂಗಿ, ಐ.ಎಸ್. ಅವಟಿ, ಆಲಿಯಾ ತಾಜ್, ಶಿವಲೀಲಾ, ಎ.ಎಚ್. ಕುಲಕರ್ಣಿ, ಎಸ್.ಎಸ್. ತೋಟದ, ಎಸ್.ಕೆ. ಪಾಟೀಲ, ಆರ್.ಜಿ. ಕುಲಕರ್ಣಿ, ಎಂ.ಎನ್. ಮಠಪತಿ, ರಮೇಶ ರಾಠೊಡ, ಎಸ್.ಎಸ್. ದೇಶಟ್ಟಿ, ಎನ್.ಎಸ್. ನಾಗರಡ್ಡಿ, ಎ.ಎಸ್. ಪಾಂಡ್ರೆ, ಡಿ.ಎಸ್. ಕುಂಬಾರ, ಎಸ್.ಎಂ. ಕೋಳೂರ, ಬಿ.ಎನ್. ಕುಲಕರ್ಣಿ, ಆರ್.ಡಿ. ಕುಲಕರ್ಣಿ, ಪಿ.ಟಿ. ಕಬಾಡೆ, ಅಶೋಕ ನಾಟೀಕಾರ, ಎಸ್. ಕೆ. ಹೋಟ್ಕರ, ಜಿ.ಎಸ್. ಹಿರೇಮಠ ಇದ್ದರು.