Advertisement

ಮತ್ತೆ ಗರಿಗೆದರಿತು‌ ಲಿಂಗಾಯತ ಧರ್ಮ ಹೋರಾಟ; ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಆಗ್ರಹ

09:38 PM Jul 09, 2023 | Team Udayavani |

ಧಾರವಾಡ: ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ನೀಡುವಂತೆ ಆಗ್ರಹಿಸಿ ರಾಜ್ಯ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಲಿಂಗಾಯತ ಮಠಾಧಿಪತಿ ಒಕ್ಕೂಟದಿಂದ ಮನವಿ ಸಲ್ಲಿಸಲಾಗುವುದು ಎಂದು ಗದುಗಿನ ತೋಂಟದಾರ್ಯ ಡಾ.ಸಿದ್ದರಾಮ ಸ್ವಾಮೀಜಿ ಹೇಳಿದರು.

Advertisement

ನಗರದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮವನ್ನಾಗಿ ಮಾಡಲು ನಾವು ಸರ್ಕಾರಗಳಿಗೆ ಯಾವುದೇ ಗಡುವು ನೀಡುವುದಿಲ್ಲ. ಬದಲಾಗಿ ಹೋರಾಟ ಮಾಡುತ್ತೇವೆ. ಇಂದು ಸಿಖ್ ಹಾಗೂ ಜೈನ ಧರ್ಮಗಳು ಸ್ವತಂತ್ರ ಧರ್ಮಾಗಿರುವುದಕ್ಕೆ ಹೋರಾಟವೇ ಕಾರಣ. ಸತ್ಯಕ್ಕೆ ನ್ಯಾಯ ಸಿಗುವ ಭರವಸೆ ನಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರದ ಎಲ್ಲ ದಾಖಲೆಗಳಲ್ಲಿ ಲಿಂಗಾಯತ ಎಂಬ ಶಬ್ದ ಮಾತ್ರ ಬಳಕೆಯಲ್ಲಿದೆ. ಎಲ್ಲಿಯೂ ವೀರಶೈವ ಲಿಂಗಾಯತ ಎಂಬ ಪದವಿಲ್ಲ. ವೀರಶೈವವೂ ಕೂಡ ಲಿಂಗಾಯತ ಧರ್ಮದ ಒಂದು ಒಳಪಂಗಡ. ಕೆಲವರು ವೀರಶೈವ ಲಿಂಗಾಯತ ಶಬ್ದ ಬಳಸಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಹೀಗಾಗಿ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವನ್ನಾಗಿ ಘೋಷಿಸಬೇಕು. ಈ ಕುರಿತಂತೆ ಶಾಸಕರು, ಸಚಿವರು ಹಾಗೂ ರಾಜ್ಯ ಲೋಕಸಭಾ ಸದಸ್ಯರಿಗೆ ಮನವಿ ಮೂಲಕ ಆಗ್ರಹಿಸಲಾಗುವುದು ಎಂದರು.

2008 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲಿಂಗಾಯತ ಹೋರಾಟಕ್ಕೆ ಮಣಿದು ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನದಾಸ ನೇತೃತ್ವದ ಸಮಿತಿಯನ್ನು ನೇಮಿಸಿತ್ತು. ಈ ಸಮಿತಿಯು ಸಮಗ್ರ ಅಧ್ಯಯನ ನಡೆಸಿ ವಿಸತವಾದ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಬಳಿಕ ರಾಜ್ಯ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಿ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಅಭಿಪ್ರಾಯ ಪಡೆದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ ದುರ್ದೈವದಿಂದ ಕೇಂದ್ರ ಸರ್ಕಾರದ ಆ ಕುರಿತು ಯಾವುದೇ ಸಮಾಲೋಚನೆ ಮಾಡದೇ ಸಂಬಂಧಿಸಿದ ಇಲಾಖೆಗಳ ಅಭಿಪ್ರಾಯ ಸಂಗ್ರಹಿಸದೆ ಪ್ರಸ್ತಾವನೆಯನ್ನು ವಾಪಸ್ ಕಳಿಸಿತ್ತು. ಈ ಹಿನ್ನೆಲೆಯಲ್ಲಿ ಈಗ ಸಭೆ ಸೇರಿದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಮಹಾಸ್ವಾಮಿಗಳು ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಿದ್ಧಪಡಿಸಿದ ಪ್ರಸ್ತಾವನೆಯನ್ನು ಸೂಕ್ತ ಆಧಾರಗಳು ಹಾಗೂ ತಿದ್ದುಪಡಿಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಈ ಚಿಂತನ ಮಂಥನ ಸಭೆಯ ಮೂಲಕ ಆಗ್ರಹಿಸುತ್ತೇವೆ ಎಂದು ತಿಳಿಸಿದರು.

ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ನೀಡಲು ರಾಜ್ಯದ ಸಂಸದರನ್ನು ಸಂಪರ್ಕಿಸುತ್ತೇವೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ವ್ಯಕ್ತಿಗಳನ್ನು ಹೆದರಿಸುವುದಕ್ಕಾಗಿ ಈ ರೀತಿ ಮಾಡುತ್ತಿಲ್ಲ. ನ್ಯಾಯೋಚಿತವಾದ ಬೇಡಿಕೆಯನ್ನು ಈಡೇರಿಸುವಂತೆ ಹೋರಾಡುತ್ತಿದ್ದೇವೆ. ಈ ಬಗ್ಗೆ ಕಾನೂನು ಹೋರಾಟ ನಡೆಸಲು ಈಗಾಗಲೇ ಚಿಂತನೆಯೂ ಸಾಗಿದೆ ಎಂದರು.

Advertisement

ಈ ಸಂದರ್ಭದಲ್ಲಿ ಲಿಂಗಾಯತ ಮಠಾಽಪತಿಗಳ ಒಕ್ಕೂಟದ ಅಧ್ಯಕ್ಷರಾದ ಭಾಲ್ಕಿ ಮಠದ ಬಸವಲಿಂಗ ಪಟ್ಟದದೇವರು, ಕೂಡಲಸಂಗಮ ಧರ್ಮ ಪೀಠದ ಡಾ.ಗಂಗಾಮಾತಾಜಿ, ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ದರಾಜ ಯೋಗೇಂದ್ರ ಸ್ವಾಮೀಜಿ, ಇಳಕಲ್ಲಿನ ಗುರುಮಹಾಂತ ಸ್ವಾಮೀಜಿ, ಮೈಸೂರಿನ ಚಿದಾನಂದ ಸ್ವಾಮೀಜಿ, ಅಥಣಿ ಪ್ರಭು ಚನ್ನಬಸವ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಇದ್ದರು.

ಚಿಂತನಾ ಶಿಬಿರ: ಈ ಪತ್ರಿಕಾಗೋಷ್ಠಿಗೂ ಮುನ್ನ ಇಲ್ಲಿಯ ಕಲ್ಯಾಣನಗರದ ಶ್ರೀ ಸಿದ್ದರಾಮೇಶ್ವರ ಮಾರ್ಗದರ್ಶಿಯ ಸಭಾಂಗಣದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಡಾ.ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷತೆಯಲ್ಲಿ ಲಿಂಗಾಯತ ಧರ್ಮ ಚಿಂತನಾ ಶಿಬಿರ ಜರುಗಿತು. ಈ ಶಿಬಿರದಲ್ಲಿ ಪಾಲ್ಗೊಂಡ ಮಠಾಧಿಶರು, ಲಿಂಗಾಯತ ಪ್ರತ್ಯೇಕ ಧರ್ಮದ ಮಹತ್ವ ಪ್ರತಿಪಾದಿಸಿದರು. ಇದಲ್ಲದೇ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಬಗ್ಗೆ ಅನಿಸಿಕೆ ಹಂಚಿಕೊಂಡರು. ಇದಾದ ಬಳಿಕ ಮಠಾಧೀಶರಿಂದ ಸಂವಾದ ಕೈಗೊಳ್ಳಲಾಯಿತು.

ಲಿಂಗಾಯತ ಸ್ವತಂತ್ರ ಧರ್ಮ ಮಾಡುವುದರಿಂದ ಹಿಂದೂತ್ವಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಹಾಗಂತ ನಾವೇನೂ ಹಿಂದೂ ವಿರೋಧಿಗಳಲ್ಲ. ಹಿಂದೂ ವೈದಿಕ ಧರ್ಮವಾಗಿದ್ದು, ವೇದ, ಉಪನಿಷತ್ತು ಹಾಗೂ ಭಗವದ್ಗೀತೆಯಲ್ಲಿ ಎಲ್ಲಿಯೂ ಹಿಂದೂ ಪದವನ್ನು ಪ್ರಸ್ತಾಪಿಸಿಲ್ಲ. ಹೀಗಾಗಿ ಹಿಂದೂ ಎಂಬುದು ಜೀವನ ಮಾರ್ಗ. ಲಿಂಗಾಯತವನ್ನು ಸ್ವತಂತ್ರ ಧರ್ಮ ಮಾನ್ಯತೆ ನೀಡುವುದರಿಂದ ಹಿಂದೂತ್ವಕ್ಕೆ ಯಾವ ತೊಂದರೆಯೂ ಆಗದು.

-ಗದುಗಿನ ತೋಂಟದಾರ್ಯ ಡಾ.ಸಿದ್ದರಾಮ ಸ್ವಾಮೀಜಿ

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ನೂರಕ್ಕೂ ಅಧಿಕ ಸ್ವಾಮೀಜಿಗಳ ನೇತೃತ್ವದಲ್ಲಿ ರವಿವಾರ ಧಾರವಾಡದಲ್ಲಿ ಸಭೆ ಕೈಗೊಂಡು, ಚಿಂತನ-ಮಂಥನದ ಬಳಿಕ ಒಮ್ಮತದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವನ್ನು ನಿರಂತರವಾಗಿ ಮುಂದುವರೆಸುತ್ತೇವೆ. ಕರ್ನಾಟಕ ರಾಜ್ಯದಲ್ಲಿ ಇರುವ ಲಿಂಗಾಯತ ಧರ್ಮದ ಎಲ್ಲ ಒಳಪಂಗಡಗಳನ್ನು ಕೇಂದ್ರ ಸರಕಾರವು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಸೇರಿಸಬೇಕು. ಇದರ ಜತೆಗೆ ಲಿಂಗಾಯತ ಸ್ವತಂತ್ರ್ಯ ಧರ್ಮದ ಮಾನ್ಯತೆ ನೀಡಬೇಕು.

-ಡಾ.ಬಸವಲಿಂಗ ಪಟ್ಟದ್ದೇವರು, ಹಿರೇಮಠ, ಸಂಸ್ಥಾನ ಭಾಲ್ಕಿ, ಅಧ್ಯಕ್ಷರು, ಲಿಂಗಾಯತ ಮಠಾಧಿಪತಿಗಳ ಒಕ್ಕೂಟ

ಲಿಂಗಾಯತ ಧರ್ಮದಲ್ಲಿ ನೂರಾರು ಒಳಪಂಗಡಗಳು ಇರುವುದು ವಾಸ್ತವ ಸಂಗತಿ. ಈಗಾಗಲೇ ಕೆಲ ಪಂಗಡಗಳನ್ನು ಹಿಂದುಳಿದ ವರ್ಗಗಳ ಪಂಗಡಗಳಲ್ಲಿ ಸೇರಿಸಲಾಗಿದೆ. ಆದರೆ ಲಿಂಗಾಯತ ಧರ್ಮದ ಒಳ ಪಂಗಡಗಳು ಆರ್ಥಿಕವಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿವೆ. ಹೀಗಾಗಿ ಲಿಂಗಾಯತ ಧರ್ಮದ ಎಲ್ಲ ಒಳಪಂಗಡಗಳನ್ನು ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಸೇರಿಸಬೇಕು ಎಂದು ಗದುಗಿನ ತೋಂಟದಾರ್ಯ ಡಾ.ಸಿದ್ದರಾಮ ಸ್ವಾಮೀಜಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next