Advertisement

ಸ್ವತಂತ್ರ ಧರ್ಮದ ಹೋರಾಟ ನಿಲ್ಲದು

12:27 PM Jun 11, 2019 | Suhan S |

ದಾವಣಗೆರೆ: ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಬೇಕು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.

Advertisement

ಸೋಮವಾರ ನಗರದ ಎಂ.ಸಿ.ಸಿ ಬಿ ಬ್ಲಾಕ್‌ನ ಸೋಮೇಶ್ವರ ದೇವಸ್ಥಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಸಂಬಂಧ ಈ ಹಿಂದೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಆದರೆ, ಕೇಂದ್ರ ಸರ್ಕಾರ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಶಿಫಾರಸ್ಸನ್ನು ತಿರಸ್ಕಾರ ಮಾಡದೇ, ಮಾನ್ಯತೆಯನ್ನೂ ನೀಡದೇ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಲಿಂಗಾಯತ ಸ್ವತಂತ್ರ ಧರ್ಮದ ಶಿಫಾರಸ್ಸಿಗೆ ಸಂಬಂಧಿಸಿದಂತೆ ಕೇಂದ್ರದ ಅಲ್ಪಸಂಖ್ಯಾತ ಇಲಾಖೆ ಸಚಿವರೊಂದಿಗೆ ಚರ್ಚಿಸಲಾಗಿತ್ತು. ಲೋಕಸಭಾ ಚುನಾವಣೆ ಹಿನ್ನೆಲೆ ಲಿಂಗಾಯತ ಧ‌ರ್ಮಕ್ಕೆ ಮಾನ್ಯತೆ ನೀಡಿದರೆ ಬೇರೆ ಅರ್ಥ ಬರಲಿದೆ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಸುಮ್ಮನಾಗಿದೆ. ಈಗ ಮತ್ತೆ ಸ್ವತಂತ್ರ ಲಿಂಗಾಯತ ಧರ್ಮಕ್ಕಾಗಿ ನಿರಂತರ ಹೋರಾಟ ಮಾಡಿದಾಗ ನ್ಯಾಯ ಸಿಗುವ ಭರವಸೆ ಇದೆ ಎಂದರು.

ಕರ್ನಾಟಕ ರಾಜ್ಯದ ಹೋರಾಟದ ಮಾದರಿಯಲ್ಲಿಯೇ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳು ಲಿಂಗಾಯತ ಪ್ರತ್ಯೇಕ ಧರ್ಮ ಜಾರಿ ಕುರಿತಂತೆ ಹಾಗೂ ನಾಗಮೋಹನ್‌ದಾಸ್‌ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಹೋರಾಟ ಮಾಡಲಿವೆ ಎಂದು ಹೇಳಿದರು.

1967ರಿಂದಲೂ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಆಗಬೇಕೆಂಬ ನಿಟ್ಟಿನಲ್ಲಿ ಹೋರಾಟ ಮಾಡಲಾಗುತ್ತಿದೆ. ರಾಜ್ಯದ 12ಕಡೆ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕ ಆರಂಭಗೊಂಡಿವೆ. ಲಿಂಗಾಯತ ಧರ್ಮ ಕುರಿತು ಮತ್ತೆ ಹೋರಾಟ ಗಟ್ಟಿಗೊಳಿಸುವ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಲೋಕಸಭೆಯಲ್ಲಿ ಅನುಮೋದನೆಗೆ ಒತ್ತಡ ಹೇರಿಕೆ ಇಲ್ಲವೇ ಕಾನೂನು ಹೋರಾಟ ಮಾಡಲಾಗುವುದು ಎಂದರು.

Advertisement

ಶರಣ ಬಸವಣ್ಣನವರ ಎಲ್ಲಾ ವಿಚಾರಕ್ಕೂ ದಾವಣಗೆರೆ ದೊಡ್ಡ ಶಕ್ತಿಕೇಂದ್ರವಾಗಿದೆ. ಕಳೆದ ವರ್ಷದಿಂದ ಜಾಗತಿಕ ಲಿಂಗಾಯತ ಮಹಾಸಭಾವು ತಾಲೂಕು, ಗ್ರಾಮ ಮಟ್ಟದಲ್ಲಿ ಶಾಖೆ ಆರಂಭಿಸಿ ಲಿಂಗಾಯತ ಧರ್ಮ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಸಂಘಟನೆ ಆರಂಭಗೊಂಡು ವರ್ಷವಾಗಿದ್ದು, ಜೂ.13ರಂದು ಅಧಿಕೃತವಾಗಿ ದಾವಣಗೆರೆಯಲ್ಲಿ ಜಿಲ್ಲಾ ಘಟಕ ಉದ್ಘಾಟನೆಯಾಗಲಿದೆ ಎಂದು ತಿಳಿಸಿದರು.

ಕಾರ್ನಾಡ್‌ ನಿಧನಕ್ಕೆ ಸಂತಾಪ: ಅನೇಕ ಸಾಹಿತಿಗಳು ತತ್ವ, ಸಿದ್ಧಾಂತಕ್ಕೆ ಪೂರಕವಾಗಿ ಬದುಕು ನಡೆಸುವುದು ತುಂಬಾ ವಿರಳ. ಆದರೆ, ಗಿರೀಶ್‌ ಕಾರ್ನಾಡ್‌ ತಮ್ಮದೇ ಆದ ಸಿದ್ಧಾಂತದಡಿ ಪ್ರಾಮಾಣಿಕವಾಗಿ ಜೀವನ ನಡೆಸಿದ್ದಾರೆ. ಕುವೆಂಪು ನಂತರದಲ್ಲಿ ನಾಡು ಕಂಡ ಶ್ರೇಷ್ಠ ಸಾಹಿತಿ ಗಿರೀಶ್‌ ಕಾರ್ನಾಡ್‌. ಅವರನ್ನು ಕಳೆದುಕೊಂಡು ಕನ್ನಡ ಸಾರಸ್ವತ ಲೋಕ ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್‌ ಮುಂತಾದ ಶರಣ ಪರಿಷತ್‌ ಸಂಘಟನೆಗಳ ಪರವಾಗಿ ಮೌನಾಚರಣೆ ಆಚರಿಸುವ ಮೂಲಕ ಸಂತಾಪ ಸೂಚಿಸಿದರು.

ಸುದ್ದಿಗೋಷ್ಠಿಯಲ್ಲಿ ದೇವಿಗೆರೆ ವೀರಭದ್ರಪ್ಪ, ಗೋವಿಂದರಾಜು, ಮರಳಸಿದ್ದಯ್ಯ ಬಸವನಾಳು, ಶಶಿಧರ್‌ ಬಸಾಪುರ, ಚನ್ನಬಸಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next