ಪಠಾಣ್‌ಕೋಟ್ ದಾಳಿಗೂ ಸಂಚು ಹೂಡಿದ್ದ ಜೈಶ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್, ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಸಿಬಂದಿ ಮೇಲೆ ಆತ್ಮಾಹುತಿ ದಾಳಿ ನಡೆಸುವಂತೆ ಆಸ್ಪತ್ರೆಯಿಂದಲೇ ಆದೇಶ ನೀಡಿದ್ದ ಎಂದು ಮೂಲಗಳು ತಿಳಿಸಿವೆ. ಪಾಕಿಸ್ಥಾನದ ರಾವಲ್ಪಿಂಡಿ ಸೇನಾ ಆಸ್ಪತ್ರೆಯಲ್ಲಿ ಕಳೆದ 4 ತಿಂಗಳಿಂದ ಈತ ಚಿಕಿತ್ಸೆ ಪಡೆಯುತ್ತಿದ್ದಾನೆ. ಭಾರತದ ವಿರುದ್ಧ ದಾಳಿ ನಡೆಸುವ ಉಗ್ರ ಸಂಘಟನೆಗಳ ಒಕ್ಕೂಟ ಯುನೈಟೆಡ್ ಜಿಹಾದ್ ಕೌನ್ಸಿಲ್‌ನ ಕಳೆದ ಆರು ಸಭೆಗಳಿಗೂ, ಅನಾರೋಗ್ಯದ ಕಾರಣದಿಂದ ಈತ ಹಾಜರಾಗಿರಲಿಲ್ಲ. ಆದರೆ ಪುಲ್ವಾಮಾ ಘಟನೆಗೂ ಕೇವಲ 8 ದಿನಗಳ ಮುನ್ನ, ಕ್ಷೀಣ ಧ್ವನಿಯಲ್ಲಿ ಒಂದು ಆಡಿಯೋ ಸಂದೇಶವನ್ನು ಕಳುಹಿಸಿದ್ದ.
ಟ್ರಾಲ್‌ನಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಸೇನೆ ನಡೆಸಿದ್ದ ದಾಳಿಯಲ್ಲಿ ಅಜರ್ ಸಂಬಂಧಿ ಉಸ್ಮಾನ್‌ನನ್ನು ಹತ್ಯೆಗೈದಿದ್ದಕ್ಕೆ ಪ್ರತೀಕಾರ ತೀರಿಸಿ ಎಂದು ಉಗ್ರರಿಗೆ ಸೂಚನೆ ನೀಡಿದ್ದ ಎನ್ನಲಾಗಿದೆ. ಈ ಯುದ್ಧದಲ್ಲಿ ಸಾವಿಗಿಂತ ಶ್ರೇಷ್ಠ ಇನ್ನೊಂದಿಲ್ಲ ಎಂದು ಸಂದೇಶದಲ್ಲಿ ಹೇಳಿದ್ದ.
ಮೂಲಗಳ ಪ್ರಕಾರ ಯುಜಿಸಿಯ ಇತರ ಸಂಘಟನೆಗ ಳೊಂದಿಗೆ ಮಸೂದ್ ದಾಳಿಯ ಮಾಹಿತಿ ಹಂಚಿಕೊಂಡಿರಲಿಲ್ಲ. ಗೌಪ್ಯವಾಗಿ ಇದನ್ನು ನಡೆಸಿದ್ದ ಎನ್ನಲಾಗಿದೆ. ಕಾಶ್ಮೀರದಲ್ಲಿ 60 ಜೈಶ್ ಉಗ್ರರಿದ್ದು, ಈ ಪೈಕಿ 35 ಉಗ್ರರು ಪಾಕಿಸ್ಥಾನ ಮೂಲದವರಾಗಿದ್ದು, ಉಳಿದವರು ಸ್ಥಳೀಯರು. ಈ ಎಲ್ಲ ಉಗ್ರರೂ ಈಗ ಉಮೈರ್, ಇಸ್ಮಾಯಿಲ್ ಮತ್ತು ಅಬ್ದುಲ್ ರಾಶಿದ್ ಘಾಜಿ ನೇತೃತ್ವದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಗುಪ್ತಚರ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯುಜೆಸಿ ಸಭೆಗೆ ಅಜರ್ ಹಾಜರಾಗದ್ದರಿಂದ, ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಸಲಾಹುದ್ದೀನ್ ನೇತೃತ್ವ ವಹಿಸಿದ್ದ. ಈ ಹಿಂದೆ ಜ.19ರಂದು ಸಭೆ ನಡೆದಿದ್ದು, ಒಳನುಸುಳುವಿಕೆಗೆ ಹೊಸ ಲಾಂಚ್‌ಪ್ಯಾಡ್‌ಗಳನ್ನು ರಚಿಸುವ ಕುರಿತು ಚರ್ಚೆ ನಡೆಸಲಾಗಿತ್ತು. ಇನ್ನೊಂದು ಸಭೆಯು ಪಾಕ್ ಆಕ್ರಮಿತ ಕಾಶ್ಮೀರದ ಮುಜಾಪ#ರಾಬಾದ್‌ನಲ್ಲಿರುವ ಟೌನ್ ಹಾಲ್‌ನಲ್ಲಿ ನಡೆದಿದ್ದು, ಐಇಡಿ ಬಳಸಿ ಸ್ಫೋಟ ನಡೆಸುವ ಕುರಿತು ಚರ್ಚೆ ನಡೆಸಲಾಗಿತ್ತು ಎನ್ನಲಾಗಿದೆ.
ಇದೇವೇಳೆ, ಪುಲ್ವಾಮಾ ಉಗ್ರರ ದಾಳಿ ಘಟನೆಗೆ ಪಾಕಿಸ್ಥಾನದ ಕುಮ್ಮಕ್ಕಿದೆ ಎಂದು ಉಲ್ಲೇಖೀಸಿ ಭಾರತ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪಾಕಿಸ್ಥಾನ, ಜೈಷ್ ಸಂಘಟನೆಯನ್ನು 2002ರಲ್ಲೇ ತನ್ನ ನೆಲದಲ್ಲಿ ನಿಷೇಧಿಸಲಾಗಿದೆ. ಕಾನೂನಾತ್ಮಕವಾಗಿ ಯಾವ ಕ್ರಮಗಳನ್ನು ಕೈಗೊಳ್ಳಬೇಕಿದೆಯೋ ಆ ಕ್ರಮಗಳನ್ನು ಆಗಿನಿಂದ ಕೈಗೊಳ್ಳುತ್ತಲೇ ಇದ್ದೇವೆ ಎಂದಿದೆ.