Advertisement

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

04:21 PM Apr 26, 2024 | Team Udayavani |

ಮಹಾನಗರ: ಮಕ್ಕಳಿಗೆ ಶೈಕ್ಷಣಕ ವರ್ಷ ಮುಗಿದು ಬೇಸಗೆ ರಜೆ ಆರಂಭವಾಗಿ ಎರಡು ವಾರಗಳು ಕಳೆದಿವೆ. ಆದರೆ ಮೈದಾನಗಳು, ಗದ್ದೆ, ಬಯಲುಗಳು, ಓಣಿ-ಕೇರಿಗಳಲ್ಲಿ ಮಕ್ಕಳ ಕಲರವ ಮಾತ್ರ ಕೇಳಿಸುತ್ತಿಲ್ಲ!

Advertisement

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಬಿಸಿಲ ಝಳ ಹೆಚ್ಚಾಗಿದ್ದು, ರಜೆಯಲ್ಲಿ ಮಕ್ಕಳನ್ನು ಮನೆಯಿಂದ ಹೊರಗೆ ಬಾರದಂತೆ ತಡೆಯುತ್ತಿದೆ. ಇದರಿಂದಾಗಿ ಮಕ್ಕಳು ಮೈದಾನಗಳ ಬದಲು ಮನೆಯಲ್ಲೇ ರಜೆ ಕಳೆಯುವಂತಾಗಿದೆ. ಬ್ಯಾಟ್‌-ಬಾಲ್‌
ಹಿಡಿದುಕೊಂಡು ಮೈದಾನಕ್ಕೆ ಹೋಗುತ್ತಿದ್ದ ವಿದ್ಯಾರ್ಥಿಗಳು ಮನೆಯಲ್ಲೇ ಟಿ.ವಿ. ನೋಡುತ್ತಾ, ಒಳಾಂಗಣ ಆಟಗಳನ್ನು
ಆಡುತ್ತಾ ಕಾಲ ಕಳೆಯುವಂತಾಗಿದೆ.

ಸಾಮಾನ್ಯವಾಗಿ ಬೇಸಗೆ ರಜೆ ಆರಂಭವಾಯಿತೆಂದರೆ ಮೈದಾನಗಳು ಮಕ್ಕಳಿಂದ ತುಂಬಿರುತಿತ್ತು. ಬೆಳಗ್ಗೆ ಆರಂಭವಾದರೆ ಮಧ್ಯಾಹ್ನದವರೆಗೂ ಆಡವಾಡುವುದು, ಸಂಜೆ ಮತ್ತೆ ಬಂದು ಆಟ, ಹೀಗೆ ದಿನವಿಡೀ ಆಟವಾಡುವುದೇ ಮಕ್ಕಳ ಕೆಲಸವಾಗಿರುತಿತ್ತು. ಆದರೆ ಪ್ರಸ್ತುತ ಮೈದಾನಗಳೆಲ್ಲ ಖಾಲಿಯಾಗಿ ಕಂಡು ಬರುತ್ತಿವೆ. ಆಡಲೇಬೇಕು ಎನ್ನುವವರು ಮಾತ್ರ ಮನೆಯಲ್ಲಿ ಅಂಗಳದ ಸಣ್ಣ ಜಾಗದಲ್ಲಿ ಆಡುತ್ತಿದ್ದಾರೆ. ಕ್ರಿಕೆಟ್‌ ಕೋಚಿಂಗ್‌ ಶಿಬಿರಗಳು ಬಿಸಿಲಿನ ಬದಲು ಬೆಳಗ್ಗೆ – ಸಂಜೆಯ ನೆರಳಿನಲ್ಲೇ ಆಯೋಜಿಸಲಾಗುತ್ತಿದೆ. ನಗರ ಪ್ರದೇಶದಲ್ಲಿ ಮಾತ್ರವಲ್ಲ, ಗ್ರಾಮೀಣ ಭಾಗದಲ್ಲೂ ಇದೇ ಪರಿಸ್ಥಿತಿ ಇರುವುದು ವಿಪರ್ಯಾಸ.

ಮುಂಜಾನೆಯಿಂದಲೇ ಸೆಖೆ ಬೆಳಗ್ಗೆ 8-9 ಗಂಟೆಯಿಂದಲೇ ಆರಂಭವಾಗುವ ಉರಿ ಸೆಖೆ ಸಂಜೆ 6 ಗಂಟೆಯ ವರೆಗೂ ಅನುಭವವಾಗುತ್ತದೆ. ಇದರಿಂದಾಗಿ ಸ್ವಲ್ಪ ಆಟವಾಡಿದರೂ ದಣಿವು ಹೆಚ್ಚಾಗುತ್ತದೆ. ನೀರು ಕುಡಿಯದಿದ್ದರೆ ನಿರ್ಜಲೀಕರಣ ಸಮಸ್ಯೆಯೂ ಹೆಚ್ಚಾಗಿ ತಲೆ ತಿರುಗುವುದು ಮೊದಲಾದವುಗಳು ಉಂಟಾಗುತ್ತವೆ. ಹಾಗಾಗಿ ಬಹುತೇಕ ಮಕ್ಕಳು ಮೈದಾನದ ಬದಲು ಮನೆಯನ್ನೇ ಆಟದ ಮೈದಾನವನ್ನಾಗಿ ಮಾಡಿಕೊಂಡಿದ್ದಾರೆ. ಹೆತ್ತವರೂ ಮಕ್ಕಳನ್ನು ಬಿಸಿಲಿಗೆ ಹೋಗಲು ಬಿಡುತ್ತಿಲ್ಲ.

ಬಿಸಿಲಲ್ಲಿ ಆಟವಾಡುವವರು ಮುನ್ನೆಚ್ಚರಿಕೆ ವಹಿಸಿ 
*ಮೈದಾನಗಳಲ್ಲಿ ಬಿಸಿಲಿಗೆ ಆಟ ಆಡುವಾಗ ತಲೆಗೆ ಟೋಪಿ, ಫುಲ್‌ ಕೈಯ ಟಿ-ಶರ್ಟ್‌ ಪ್ಯಾಂಟ್‌ ಧರಿಸಬೇಕು.
*ನಿರ್ಜಲೀಕರಣ ಸಮಸ್ಯೆ ಉಂಟಾಗುವುದರಿಂದ ಸಾಕಷ್ಟು ನೀರು ಕುಡಿಯಬೇಕು.
*ಹಣ್ಣಿನ ರಸ – ಲಿಂಬೆ ಪಾನಕ, ಮಜ್ಜಿಗೆ, ಎಳನೀರು ಸೇವನೆ ಉತ್ತಮ.
*ಒಂದೆರಡು ಗಂಟೆ ಆಟವಾಡಿದ ಬಳಿಕ ವಿಶ್ರಾಂತಿ ತೆಗೆದುಕೊಳ್ಳಬೇಕು.
*ಬಿಸಿಲಿಗಿಂತ ನೆರಳು ಇರುವ ಪ್ರದೇಶವನ್ನೇ ಆಟಕ್ಕೆ ಆಯ್ಕೆ ಮಾಡುವುದು ಉತ್ತಮ.

Advertisement

ಸ್ವಿಮ್ಮಿಂಗ್‌ ಪೂಲ್‌ಗ‌ಳು ಫುಲ್‌
ಬೇಸಗೆ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯ ಈಜು ಕೊಳಗಳಿಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಬೆಳಗ್ಗೆ- ಸಂಜೆಯ ಅವಧಿಯಲ್ಲಿ ಸ್ವಿಮ್ಮಿಂಗ್‌ ಪೂಲ್‌ಗ‌ಳು ರಶ್‌ ಆಗಿದ್ದು, ಸಾಮಾನ್ಯ ದಿನಗಳಲ್ಲಿ ಬರುವುದಕ್ಕಿಂತ ದುಪ್ಪಟ್ಟು ಜನರು ಈಜುಕೊಳಕ್ಕೆ ಬರುತ್ತಿದ್ದಾರೆ. ಸ್ವಿಮ್ಮಿಂಗ್‌ ಕ್ಯಾಂಪ್‌ಗ್ಳಿಗೂ ಬೇಡಿಕೆ ಹೆಚ್ಚಾಗಿದ್ದು, ಒಂದಷ್ಟು ಹೊತ್ತಾದರೂ ನೀರಿನಲ್ಲಿ ತಂಪಾಗಿರಬಹುದು ಎನ್ನುವ ಉದ್ದೇಶದಿಂದ ಮಕ್ಕಳು ಶಿಬಿರಗಳಿಗೆ ಸೇರಿಕೊಳ್ಳುತ್ತಿದ್ದಾರೆ.

*ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next