Advertisement

ನನ್ನೂರಿನ ಸಾಮರಸ್ಯದ ಹಬ್ಬ

06:00 AM Nov 16, 2018 | |

ದೀಪಾವಳಿ ಅಂದ ಕೂಡಲೇ ಮೊದಲು ನೆನಪಾಗುವುದು ದೀಪಗಳು ತಾನೆ? ಮನೆಯಿಡೀ ದೀಪ ಬೆಳಗಿ ಅಲಂಕರಿಸಿ ಸಂಭ್ರಮ ಪಡುವುದು ರೂಢಿ. ನಮ್ಮ ಮನೆಯಲ್ಲಷ್ಟೇ ದೀಪ ಹಚ್ಚಿಟ್ಟರೆ ಸಾಕೆ? ಅಂತನ್ನುವುದು ಅಧಿಕ ಪ್ರಸಂಗದ ಪ್ರಶ್ನೆ ಅಂತ ಅನಿಸಿದರೂ ಆ ದಿಶೆಯಲ್ಲಿ ಯೋಚಿಸುವಂತೆ ಮಾಡಿದ್ದು ನನ್ನೂರಿನ ದೀಪಾವಳಿ ಆಚರಣೆ.

Advertisement

ತಲಪಾಡಿಯ ಒಳಗೆ ದೇವಿನಗರ ಅಂತ ಹೆಸರಿರುವ ನನ್ನೂರಿನ ದೀಪಾವಳಿಗೆ  ಸಾಮರಸ್ಯದ ದೀಪಾವಳಿ ಅಂತ ಚಂದದ ಹೆಸರಿದೆ. ಗೂಗಲ್‌ ಮ್ಯಾಪ್‌ಗ್ೂ ನಿಲುಕದ ಪುಟ್ಟ ಊರಾದರೂ ನನ್ನೂರಿನ ದೀಪಾವಳಿ ಆಚರಣೆ ವಿಶೇಷವಾದದ್ದು. ಎಲ್ಲವೂ ಪ್ಯಾಕ್‌ ಆಗಿ ಬರುವ ಈ ರೆಡಿಮೇಡ್‌ ಯುಗದಲ್ಲಿಯೂ ಎಲ್ಲರೂ ಪುರುಸೊತ್ತು ಮಾಡಿ ಸೇರಿ ಹಣತೆಗಳನ್ನು ಹೊರತೆಗೆದು ತೊಳೆದು, ಎಣ್ಣೆ ತುಂಬಿ ಬತ್ತಿ ಹಾಕಿ, ಒಟ್ಟು ಸೇರಿ ದೀಪ ಹಚ್ಚುವುದು ಇಲ್ಲಿ ರೂಢಿ. ದೀಪ ನಮ್ಮ ಮನೆಗಳನ್ನು ಬೆಳಗಿದರಷ್ಟೇ ಸಾಲದು-ನಮ್ಮ ಊರು ಕೇರಿಗಳನ್ನೂ ಬೆಳಗಬೇಕು; ಬೆಳಕು ಹಚ್ಚುತ್ತಿರುವಷ್ಟು ಹೊತ್ತು ನಾವು ವಾಟ್ಸಾಪ್‌, ಫೇಸ್‌ಬುಕ್‌ಗಳಿಂದ ದೂರವಾಗಿ ಒಂದಷ್ಟು ಕುಶಲ ಮಾತಾಡಬೇಕು- ಸರಳತೆಗೆ ಹೆಸರಾದ ಮಹಾದೇವನ ಮಂದಿರದಲ್ಲಿ ದೀಪ ಹಚ್ಚುವ ನನ್ನೂರಿನ ಸಾಮರಸ್ಯದ ದೀಪಾವಳಿಯ ಹಿಂದಿರುವ ಚಿಕ್ಕ ಚೊಕ್ಕ ಆಶಯ ಇದು. ಚಿಕ್ಕಪುಟ್ಟ ಮಕ್ಕಳಿಂದ ಹಿಡಿದು ಮುದುಕರವರೆಗೂ, ಮರುದಿವಸ ಪರೀಕ್ಷೆ ಇರುವ ಚಿಂತೆಯುಳ್ಳವರಿಂದ ಹಿಡಿದು, ಇಡೀ ದಿನ ಮನೆಯಲ್ಲಿರುವವರವರೆಗೆ, ಅವಸರದ ಮಹಾನುಭಾವರಿಂದ ಹಿಡಿದು ಆಮೆಗತಿಯ ಸಮಾಧಾನಿಗಳವರೆಗೆ- ಎಲ್ಲರೂ ಮಂದಿರದ ಸುತ್ತಮುತ್ತ, ಮೇಲೆ ಕೆಳಗೆ ಓಡಾಡಿ ದೀಪ ಹಚ್ಚುವಾಗ, ಮೊಬೈಲ್‌ ಫೋನ್‌ಗಳು ನಮ್ಮನ್ನು ದೂರ ಮಾಡುತ್ತವೆ ಎಂಬುವುದು ಮರೆತು ಹೋಗುತ್ತದೆ; ಮನೆಯನ್ನು ಮರೆತು, ಮಂದಿರವನ್ನು-ಆ ಮೂಲಕ ಇಡೀ ಊರನ್ನು ಕುರಿತು ಯೋಚಿಸುವಂತಾಗುತ್ತದೆ. ಬೆಳಕು ಒಬ್ಬರಿಂದ ಒಬ್ಬರಿಗೆ ಹಂಚಲ್ಪಡುತ್ತದೆ; ಇದುವರೆಗೂ ಮಾತನಾಡದವರು ಯಾರೋ “ನಿಮ್ಮ ಬಟ್ಟೆ ಜೋಪಾನ!’ ಅಂತ ಕಾಳಜಿ ತೋರುತ್ತಾರೆ ; ಯಾರದೋ ಮಗು ದಾರಿ ತಪ್ಪಿ ಬಳಿಗೆ ಬಂದಾಗ ಅದನ್ನು ಜಾಗ್ರತೆಯಿಂದ ಅದರ ಅಮ್ಮನ ಬಳಿ ಒಯ್ಯುವ ಜವಾಬ್ದಾರಿ ಹೆಗಲಿಗೇರುತ್ತದೆ. ಮಂದಿರದ ಎದುರಿಗಿಟ್ಟ ಪುಟ್ಟ ರಂಗೋಲಿಯಲ್ಲಿ ಎಲ್ಲೋ ಆಗಿರುವ ಗುರುತಿಸಲಾಗದ ಸಣ್ಣ ತಪ್ಪು ಕಂಡು ಹಿಡಿಯಲು, ಎಲ್ಲರೂ ಸೇರಿ ತಲೆಕೆಡಿಸಿಕೊಳ್ಳುತ್ತಾರೆ! ಕತ್ತಲೇರುತ್ತಿದ್ದಂತೆ ದೀಪಗಳು ತಮ್ಮ ಆಡಳಿತ ಶುರು ಮಾಡುತ್ತದೆ, ಯಕ್ಷಲೋಕ ಸೃಷ್ಟಿಯಾದಂತಾಗುತ್ತದೆ.

ವಿದ್ಯುತ್‌ ದೀಪಗಳಿಲ್ಲದ ಕಾಲದ ಕುರಿತು ನಮಗೆ ಕೇಳಿ ಗೊತ್ತಷ್ಟೆ. ವಿದ್ಯುತ್‌ ದೀಪಗಳು ಎಲ್ಲವನ್ನೂ ಸ್ಪಷ್ಟವಾಗಿ ಇದ್ದದ್ದನ್ನು ಇದ್ದಂತೆಯೇ ತೋರಿಸಿ ನಮ್ಮೊಳಗಿನ ಆಶ್ಚರ್ಯವನ್ನೇ ಸುಟ್ಟು ಹಾಕಿವೆ. ವಿದ್ಯುತ್‌ ದೀಪಗಳನ್ನೆಲ್ಲ ಆರಿಸಿ ಸಾವಿರದಷ್ಟು ದೀಪಗಳನ್ನು ಬೆಳಗಿದಾಗ ಮಾತ್ರ ಒಮ್ಮೆಲೆ ಮಹಾದೇವ ನೆಲೆಸಿದ ಕೈಲಾಸವೇ ಧರೆಗಿಳಿದು ಬಂದಂತಾಯಿತು! ಆ ಮಬ್ಬು ಕತ್ತಲಲ್ಲಿ ಮಿಣಮಿಣ ಮಿನುಗುವ ದೀಪಗಳನ್ನು ನೋಡುತ್ತ ನಿಂತಿರುವುದೇ ಸುಖ. ವಿಜ್ಞಾನ ನಮಗೆ ಎಲ್ಲವನ್ನೂ ಕೊಟ್ಟಿದೆ- ಕಣ್ಣು ಕೋರೈಸುವ ಬೆಳಕಿನಲ್ಲಿ ಎಲ್ಲವೂ ಸ್ಪಷ್ಟವಾಗಿಯೇ ತೋರುತ್ತದೆ ; ಆದರೆ, ಕೆಲವೊಮ್ಮೆ ಮಬ್ಬು ಬೆಳಕಿನ ಭಾವುಕತೆಯೇ ಇಷ್ಟವಾಗುತ್ತದೆ. ಆಡಂಬರಗಳನ್ನು ಒಲ್ಲದ ಶಿವ ಮೆಚ್ಚುವ ಕಾಯಕ ಇದೇ ಇರಬಹುದು- ಜನರು ತಮ್ಮ ಅಂತಸ್ತು, ಒಣ ಜಂಭಗಳನೆಲ್ಲಾ ಮರೆತು, ಕತ್ತಲೆಯ ಮೂಲೆ ಮೂಲೆಗೂ ಹೋಗಿ ದೀಪ ಹಚ್ಚುವ, ಬೆಳಕು ಹಂಚುವ ಕಾಯಕ ಮಾಡುವುದು. 

ಕತ್ತಲನ್ನು ಹೊಡೆದೋಡಿಸುವುದಷ್ಟೇ ದೀಪ ಹಚ್ಚುವ ಕಾಯಕದ ಉದ್ದೇಶವಲ್ಲ , ನಮ್ಮೊಳಗಿನ ಅಂತರವನ್ನೂ ಒ¨ªೋಡಿಸಬೇಕು. ದೀಪಾವಳಿಯ ದಿನ ಮಾತು ಮರೆತು ದಿವಾಳಿಯಾದ ಸ್ಥಿತಿ ನಮ್ಮದಾಗಬಾರದು. ಅದಕ್ಕೆ ನಮ್ಮೂರಿನಲ್ಲಿ ನಾವೆಲ್ಲ ಸೇರಿ ಸಾಮರಸ್ಯದ ದೀಪ ಹಚ್ಚುತ್ತೇವೆ; ಒಟ್ಟು ಸೇರಿ ದೀಪಾವಳಿ ಆಚರಿಸುತ್ತೇವೆ. ಅಷ್ಟು ಹೊತ್ತು ವಿದ್ಯುತ್‌ ದೀಪಗಳನ್ನು ಆರಿಸಿದ್ದರಿಂದ ಎಷ್ಟು ಶಕ್ತಿ ಉಳಿತಾಯವಾಯಿತೋ ಗೊತ್ತಿಲ್ಲ. ಆದರೆ, ಹಣತೆ ಹಚ್ಚುವ ಕೆಲಸ ನಮ್ಮೊಳಗೆ ಸಾಮರಸ್ಯದ ಬೆಳಕು ತುಂಬಿದ್ದು ಮಾತ್ರ ಸುಳ್ಳಲ್ಲ.

ಕಂಬಗಳ ಮರೆಯಲ್ಲಿ , ಗೋಡೆಯಂಚಲ್ಲಿ, ಗೋಪುರದ ಮೇಲೆ
ಸಾವಿರದ ಸಂಖ್ಯೆಯಲಿ ಹಚ್ಚಿಟ್ಟ ಹಣತೆಗಳು
ಶಿವನ ಪೂಜೆಗೆ ಚಿನ್ನಸಂಪಿಗೆಯ ತಂದ ಹೂವಾಡಗಿತ್ತಿಯರ ಹಾಗೆ !
ಸಾಮರಸ್ಯದ ದೀಪಾವಳಿ ನನ್ನೂರಿನಲ್ಲಿ ವರ್ಷ ವರ್ಷ ನಡೆಯುತ್ತಿರುತ್ತದೆ- ನಮ್ಮೊಳಗಿನ ಸಾಮರಸ್ಯದ ಕುರುಹಾಗಿ!

Advertisement

ಯಶಸ್ವಿನಿ
ದ್ವಿತೀಯ ಎಮ್‌ ಎಸ್ಸಿ., ಸಂಖ್ಯಾಶಾಸ್ತ್ರ ವಿಭಾಗ ಮಂಗಳೂರು ವಿ. ವಿ. 

Advertisement

Udayavani is now on Telegram. Click here to join our channel and stay updated with the latest news.

Next