ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಗೌರಿ-ಗಣೇಶ ಮತ್ತು ಬಕ್ರೀದ್ ಹಬ್ಬದ ವೇಳೆ ಸಂಭವಿಸಬಹುದಾದ ಅಹಿತಕರ ಘಟನೆಗಳನ್ನು ದೊಡ್ಡದಾಗಿ ಬಿಂಬಿಸಿ ರಾಜಕೀಯ ಲಾಭ ಪಡೆದುಕೊಳ್ಳಲು ಕೆಲವರು ಯತ್ನಿಸುವ ಸಾಧ್ಯತೆಯಿದೆ. ಹೀಗಾಗಿ ಮುಂಜಾಗ್ರತೆ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗೌರಿ-ಗಣೇಶ ಮತ್ತು ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ವಿಧಾನಸೌಧದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿಗಳು, ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಹಬ್ಬದ ವೇಳೆ ಸಣ್ಣ ಅಹಿತಕರ ಘಟನೆಗಳನ್ನು ದೊಡ್ಡದಾಗಿ ಬಿಂಬಿಸಿ ರಾಜಕೀಯ ಲಾಭ ಪಡೆಯಲು ಕೆಲವರು ಪ್ರಯತ್ನಿಸಬಹುದು.
ಅಂತಹ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಗಣಪತಿ ಪ್ರತಿಷ್ಠಾಪನೆ, ಮೆರವಣಿಗೆ, ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ಶಾಂತಿ ಕದಡಬಹುದಾದ ಸಮಾಜ ಘಾತುಕ ವ್ಯಕ್ತಿಗಳ ಚಲನವಲನದ ಮೇಲೆ ನಿಗಾ ಇಡಬೇಕು. ಅಗತ್ಯವಿದ್ದರೆ ಬಂಧಿಸಬೇಕು ಎಂದು ಸೂಚಿಸಿದರು.
ಗಣಪತಿ ವಿಸರ್ಜನೆ ವೇಳೆ ಯಾವುದೇ ಅನಾಹುತ ಸಂಭವಿಸದಂತೆ ಮುಂಜಾಗ್ರತೆ ವಹಿಸಬೇಕು. ಕೆರೆ, ನದಿಯಲ್ಲಿ ಗಣಪತಿ ವಿಸರ್ಜಿಸುವಾಗ ಜೀವರಕ್ಷಕ ಸಾಧನಗಳು ಕಡ್ಡಾಯವಾಗಿ ಬಳಸುವಂತೆ ನೋಡಿಕೊಳ್ಳಬೇಕು. ಪೊಲೀಸ್ ಗಸ್ತು ಬಿಗಿಯಾಗಿರಬೇಕು. ಮತೀಯ ಶಕ್ತಿಗಳ ಮೇಲೂ ಕಣ್ಣಿಡಬೇಕು. ಎಲ್ಲೆಡೆ ಶಾಂತಿ ಸಭೆಗಳನ್ನು ನಡೆಸಬೇಕು ಎಂದರು.ಹಬ್ಬದ ಆಚರಣೆ ವೇಳೆ ಹಿರಿಯ ಅಧಿಕಾರಿಗಳು ಕೇಂದ್ರ ಸ್ಥಾನ ಬಿಡಬಾರದು.
ಉಸ್ತುವಾರಿ ಎಡಿಜಿಪಿಗಳು ತಮಗೆ ನಿಗದಿಪಡಿಸಿರುವ ಜಿಲ್ಲೆಗಳಿಗೆ ಭೇಟಿ ಕೊಡಬೇಕು. ಆಯಾ ಜಿಲ್ಲೆಯ ಕಮೀಷನರೇಟ್ ಉಸ್ತುವಾರಿ ಹೊಂದಿರುವ ಅಧಿಕಾರಿಗಳು ಆಗಾಗ್ಗೆ ಮೇಲ್ವಿಚಾರಣೆ ನಡೆಸುವ ಮೂಲಕ ಶಾಂತಿ ಕಾಪಾಡಬೇಕು. ತಮ್ಮ ಅಧೀನದ ಅಧಿಕಾರಿಗಳು, ಸಿಬ್ಬಂದಿ ಕರ್ತವ್ಯದ ಮೇಲಿರುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಹಿರಿಯ ಪೊಲೀಸ್ ಅಧಿಕಾರಿಗಳು ತಾವು ಈಗಾಗಲೇ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ವಿವರ ನೀಡಿದರು.