ಗದಗ: ನಗರದ ಯಡಿಯೂರ ತೋಂಟದಾರ್ಯ ಮಠದಲ್ಲಿ ಏ.19ರಂದು ಮಹಾ ರಥೋತ್ಸವ ನಡೆಯಲಿದೆ. ತೋಂಟದಾರ್ಯ ಜಾತ್ರಾ ಮಹೋತ್ಸವ ಅಂಗವಾಗಿ ಏ.13 ರಿಂದ 21ರವರೆಗೆ ಧಾರ್ಮಿಕ, ಸಾಹಿತ್ಯಿಕ, ಆರೋಗ್ಯ ಮತ್ತು ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಾತ್ರಾ ಸಮಿತಿ ಪ್ರಮುಖ, ಇಂಜಿನಿಯರ್ ಮಲ್ಲಿಕಾರ್ಜುನ ಐಲಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.18 ರಂದು ಸಂಜೆ 7 ಗಂಟೆಗೆ ಆರಂಭಗೊಳ್ಳಲಿರುವ ಪುಸ್ತಕೋತ್ಸವವನ್ನು ಶಿವಮೊಗ್ಗ ಆನಂದಪುರಂನ ಮುರುಘಾಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು ಉದ್ಘಾಟಿಸುವರು. ಕಲಬುರಗಿ ಶ್ರೀಶೈಲ ಸಾರಂಗಮಠ ಜ.ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಸಾರಂಗಮಠ ಶ್ರೀಶೈಲ, ಅರಭಾವಿ ದುರದುಂಡೀಶ್ವರ ಸಿದ್ಧಸಂಸ್ಥಾನಮಠದ ಸಿದ್ಧಲಿಂಗ ಸ್ವಾಮೀಜಿ, ರಾಮದುರ್ಗ ಶಿವಮೂರ್ತೆಶ್ವರ ಮಠದ ಶಾಂತವೀರ ಸ್ವಾಮೀಜಿ ಸಮ್ಮುಖ ವಹಿಸುವರು ಎಂದು ತಿಳಿಸಿದರು.
ಇದೇ ವೇಳೆ ಲಿಂ.ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಕುರಿತ ಸಿದ್ಧರಾಮ ಕೇಸಾಪುರ ಅವರು ಹಾಡಿದ “ಧ್ವನಿ ಸುರಳಿ’ ಬಿಡುಗಡೆ ಮಾಡಲಾಗುತ್ತದೆ. ಇದೇ ವೇಳೆ ವಿವಿಧ ಲೇಖಕರು ಬರೆದಿರುವ ಸುಮಾರು 18 ಕೃತಿಗಳನ್ನು ಲೋಕಾರ್ಪಣೆ ಮಾಡಲಾಗುತ್ತದೆ. ಧಾರವಾಡದ ಡಾ.ಬಾಳಣ್ಣ ಶೀಗಿಹಳ್ಳಿ ಮತ್ತು ಪ್ರೊ. ಶಶಿಧರ ತೋಡಕರ ಗ್ರಂಥಗಳನ್ನು ಸಮೀಕ್ಷೆ ನಡೆಸುವರು. ಬಿ.ಸಿ.ರಾಯ್ ಪ್ರಶಸ್ತಿ ಪುರಸ್ಕೃತ ಧಾರವಾಡದ ಡಾ.ಬಿ.ಜಿ.ಸತ್ತೂರ ಅವರನ್ನು ಸನ್ಮಾನಿಸಲಾಗುತ್ತದೆ. ಬೆಂಗಳೂರಿನ ಸಿದ್ಧರಾಮ ಸುರೇಶ ಕೇಸಾಪುರ ಕಲರವ ತಂಡದಿಂದ ವಚನ ಸಂಗೀತ ನಡೆಯಲಿದೆ ಎಂದು ತಿಳಿಸಿದರು.
19 ರಂದು ಸಂಜೆ 6.30ಕ್ಕೆ ಚಿತ್ತಾ ನಕ್ಷತ್ರದಲ್ಲಿ ಮಹಾರಥೋತ್ಸವ ನಡೆಯಲಿದೆ. ಅದಕ್ಕೂ ಮುನ್ನ ಸಂಜೆ 4 ಗಂಟೆಗೆ ಎಸ್.ಎಸ್.ಕಳಸಾಪುರಶೆಟ್ಟರ ಅವರ ಮನೆಯಿಂದ ಶ್ರೀಗಳನ್ನು ಮೆರವಣಿಯಲ್ಲಿ ಶ್ರೀಮಠಕ್ಕೆ ಕರೆ ತರಲಾಗುತ್ತದೆ. ರಾತ್ರಿ 7.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ತಿಂಥಿಣಿ ಕಾಗಿನೆಲೆಪೀಠದ ಸಿದ್ಧರಾಮಾನಂದ ಪುರಿ ಸ್ವಾಮಿಗಳು ಸಾನ್ನಿಧ್ಯ ವಹಿಸುವರು.
ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮುಂಡರಗಿ ತೋಂಟದಾರ್ಯ ಶಾಖಾ ಮಠದ ನಿಜಗುಣಪ್ರಭು ಸ್ವಾಮೀಜಿ, ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ, ಸಂಡೂರಿನ ಪ್ರಭು ಸ್ವಾಮಿಗಳು, ಅರಸಿಕೆರೆ ಶಾಂತಲಿಂಗ ದೇಶಿಕೇಂದ್ರದ ಸ್ವಾಮೀಜಿ, ಕಲಬುರಗಿ ರೋಜಾ ಹಿರೇಮಠದ ಕೆಂಚಬಸವ ಶಿವಾಚಾರ್ಯರು ಸಮ್ಮುಖ ವಹಿಸುವರು. ಮೈಸೂರಿನ ಶರಣತತ್ವ ಚಿಂತಕ ಶಂಕರ ದೇವನೂರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಇದೇ ವೇಳೆ ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೆ 17ನೇ
ರ್‍ಯಾಂಕ್ ಪಡೆದ ರಾಹುಲ್ ಶರಣಪ್ಪ ಸಂಕನೂರ ಅವರನ್ನು ಸಮ್ಮಾನಿಸಲಾಗುತ್ತದೆ. ಧರೆಗೆ ದೊಡ್ಡವರು ಮಂಟೇಸ್ವಾಮಿ
ಜಾನಪದ ಕಾವ್ಯವಾಚನ ನಡೆಯಲಿದೆ.
20 ರಂದು ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಬೆಳಗ್ಗೆ 11 ಗಂಟೆಗೆ ಮಹಿಳಾ ಅನುಭವ ಗೋಷ್ಠಿ ಆಯೋಜಿಸಿದ್ದು, 12ನೇ ಶತಮಾನದ ಮಹಿಳಾ ವಿಮೋಚನೆಯ ಪರ್ವಕಾಲ ಎಂಬ ವಿಷಯವಾಗಿ ಹುಬ್ಬಳ್ಳಿಯ ನಿವೃತ್ತ ಕೆಎಎಸ್ ಅಧಿಕಾರಿ ಹನುಮಾಕ್ಷಿ ಗೋಗಿ ಮತ್ತು ಕಲಬುರಗಿ ವಿಚಾರವಾದಿ ಕೆ.ನೀಲಾ ಉಪನ್ಯಾಸ ನೀಡಲಿದ್ದು, ಸಿಂದಗಿಯ ಇಂದುಮತಿ ಸಾಲಿಮಠ ಅವರಿಂದ ಸಾಂಸ್ಕೃತಿ ಕಾರ್ಯಕ್ರಮ ನಡೆಯಲಿದೆ ಎಂದರು.
ಸಂಜೆ 4 ಗಂಟೆಗೆ ಬಸವೇಶ್ವರ ನಗರದ ಕುಬಸದ ಬಂಧುಗಳ ಮನೆಯಿಂದ ಪೂಜ್ಯರು ಶ್ರೀಮಠಕ್ಕೆ ಆಗಮಿಸಲಿದ್ದು, ಸಂಜೆ 6.30ಕ್ಕೆ ಲಘು ರಥೋತ್ಸವ ನಡೆಯಲಿದೆ. ಬಳಿಕ ನಡೆಯಲಿರುವ ಕಾರ್ಯಕ್ರಮದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಮುರುಘಾರಾಜೇಂದ್ರ ಸ್ವಾಮೀಜಿ, ಅಲ್ಲಮಪ್ರಭು ಸ್ವಾಮೀಜಿ, ಆಲಮೇಲ ಜಗದೇವ ಮಲ್ಲಿಬೊಮ್ಮ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಸದಾಶಿವ ದೇವರು ಸಮ್ಮುಖ ವಹಿಸುವರು. ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಎಸ್ಪಿ ಶ್ರೀನಾಥ ಜೋಶಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.
ಬಳಿಕ ಬೆಲ್ಲದ ಬಾಗೇವಾಡಿ ಮಹಾಂತೇಶ್ವರ ವಿರಕ್ತಮಠದ ಶಿವಾನಂದ ಸ್ವಾಮೀಜಿ, ಧಾರವಾಡದ ವರ್ಷದ ಶ್ರೇಷ್ಠ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಹಾಗೂ ಗೌರವ ಡಾಕ್ಟರೇಟ್ ಗೌರವಕ್ಕೆ ಪಾತ್ರರಾದ ಡಾ.ಆನಂದ ಪಾಂಡುರಂಗಿ ಅವರನ್ನು ಸನ್ಮಾನಿಸಲಾಗುತ್ತದೆ. 21ರಂದು ಜಾತ್ರಾ ಮಹೋತ್ಸವ ಸಮಾರೋಪಗೊಳ್ಳಲಿದೆ. ಅಮರೇಶ ಅಂಗಡಿ, ಬಸವರಾಜ ವಿ.ಬಿಂಗಿ, ಪ್ರಭುದೇವ ಹಿರೇಮಠ, ಶೇಖಣ್ಣ ಕವಳಿಕಾಯಿ ಸುದ್ದಿಗೋಷ್ಠಿಯಲ್ಲಿದ್ದರು.