Advertisement

ಬೆಳಕಿನ ಹಬ್ಬವು ಜ್ಞಾನದ ಸಂಕೇತ: ಈಶಪ್ರಿಯತೀರ್ಥ ಶ್ರೀ

04:00 PM Oct 28, 2019 | Suhan S |

ಮುಂಬಯಿ, ಅ. 27: ದೀಪಾವಳಿ ಅನ್ನುವುದು ದೀಪಗಳ ಸಮೂಹ. ಸಾಲು ಸಾಲು ದೀಪಗಳ ಸರದಿಗಳಾಗಿಸಿ ದೀಪಗಳ ಮೂಲಕ ದೇವರನ್ನು ಕಾಣುವ ಹಬ್ಬವಾಗಿದೆ.

Advertisement

ಇಂತಹ ಬೆಳಗುವ ಹಬ್ಬವನ್ನು ನಾವು ದಿನನಿತ್ಯ ಆಚರಿಸುವ ಅಗತ್ಯವಿದೆ. ಪೂರ್ವಜರು ದೀಪವನ್ನು ಜ್ಞಾನಕ್ಕೆ ಹೋಲಿಸಿದ್ದಾರೆ. ಏಕೆಂದರೆ ಬೆಳಕು ಕಷ್ಟಮುಕ್ತಗೊಳಿಸಿ ದಾರಿ ತೋರಿಸುವ ಸಾಧನವಾಗಿದ್ದು, ಹೇಗೆ ದೀಪದ ಬೆಳಕಿಲ್ಲದೆ ಪ್ರಾಣಿ ಸಂಕುಲಕ್ಕೆ ಏನೂ ಕಾಣದೋ ಅಂತೆಯೇ ಬದುಕು ಕೂಡಾ ದೀಪವಿನಃ ಕತ್ತಲಾಗಿರುತ್ತದೆ ಎಂದು ಉಡುಪಿ ಶ್ರೀ ಅದಮಾರು ಮಠದ ಕಿರಿಯ ಪಟ್ಟಾಧೀಶರಾದ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ಹೇಳಿದರು.

ಉಡುಪಿ ಶ್ರೀ ಕೃಷ್ಣ ಮಠದ 32ನೇ ಆವೃತ್ತಿಯ ಉಡುಪಿ ಪರ್ಯಾಯ ಪಟ್ಟಾಧೀಶ ದೀಕ್ಷೆ ಸ್ವೀಕಾರ ಪೂರ್ವ ಪರ್ಯಾಯ ಸಂಚಾರ ನಿಮಿತ್ತ ಅಂಧೇರಿ ಪಶ್ಚಿಮದ ಎಸ್‌. ವಿ. ರೋಡ್‌ನ‌ ಇರ್ಲಾದ ಅದಮಾರು ಮಠದಲ್ಲಿ ವಾಸ್ತವ್ಯವಿರುವ ಶ್ರೀಗಳು ಅ. 27ರಂದು ಮಠದಲ್ಲಿನ ಶ್ರೀದೇವರಿಗೆ ಮತ್ತು ಭೂದೇವಿಗೆ ಎಣ್ಣೆ ಶಾಸ್ತ್ರದೂಂದಿಗೆ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರಕೃತಿ ಸೃಷ್ಟಿಯ ಹಿನ್ನಲೆಯಲ್ಲಿ ದೀಪವು ಜ್ಞಾನದ ಸಂಕೇತವಾಗಿದ್ದು ಅಜ್ಞಾನ ದೂರಗೊಳಿಸುವ ಶಕ್ತಿಯಾಗಿದೆ. ಈ ಹಬ್ಬವು ಜ್ಞಾನದ ಬೆಳಕಲ್ಲಿ ಬೆಳಕಿನ ಅನುಸಂಧಾನ ಮಾಡುವ ಸಂಭ್ರಮವಾಗಬೇಕು. ಹೊರಗಿಡುವದೀಪಗಳು ಬರೇ ಬಾಹ್ಯ ಆಚರಣೆಗಳಾಗಿದ್ದು, ಮನುಷ್ಯನ ಅಂತರಾತ್ಮದ ಆಚರಣೆಯು ಸಾತ್ಕರದ ದೀಪಾವಳಿಯಾಗಬೇಕು. ಅಂದರೆ ದೇವರನ್ನು ತಿಳಿದು ಬಾಳುವ ಬುದುಕೇ ದೀಪಾವಳಿ ಆಗಬೇಕು. ಹಿಂದೂ ಧರ್ಮದ ಜಾಗತಿಕ ಸಂದೇಶ ಸಂಭ್ರಮವೇ ದೀಪಾವಳಿ.

ದೀಪಾವಳಿಯು ಕೇವಲ ಬೆಳಕಿನ ಹಬ್ಬವಲ್ಲದೆ, ಪರಸ್ಪರ ಒಬ್ಬರಿಗೊಬ್ಬರು ಪ್ರೀತಿ, ವಾತ್ಸಲ್ಯ, ಗೌರವದೊಂದಿಗೆ ಬದುಕುವಂತಾಗಬೇಕು. ಸಾಂಪ್ರದಾಯಿಕ ಆಚರಣೆಗಳಿಂದ ನಮ್ಮ ನಾಡಿನ ಆಚಾರ, ವಿಚಾರಗಳು ಉಳಿಯಲು ಸಾಧ್ಯವಿದೆ. ಮುಖ್ಯವಾಗಿ ದೀಪಾವಳಿಯ ಮಹತ್ವವನ್ನು ಇಂದಿನ ಯುವ ಪೀಳಿಗೆಗೆ ತಿಳಿಯಪಡಿಸುವ ಜವಾಬ್ದಾರಿ ಹಿರಿಯರ ಮೇಲಿದೆ. ಅಜ್ಞಾನದ ತಿಮಿರನ್ನು ಕಳಚಿ, ಸುಜ್ಞಾನದ ಬೆಳಕನ್ನು ಹರಿಸುವಮೂಲಕ ಬಾಳನ್ನು ಬೆಳಗಿಸೋಣ. ಪರಸ್ಪರ ಸೋದರತ್ವದ ಮೂಲಕ ಬದುಕ ಸಾಗಿಸೋಣ ಎಂದು ನುಡಿದ ಶ್ರೀಗಳು, ರುಕ್ಮಿಣಿ ಸತ್ಯಭಾಮಸಹಿತ ಹಳೆ ಸಂಪ್ರದಾಯಿಕ ಅರ್ಚನೆಗೈದು ತೈಲದೀಪದ ನಡುವೆ ಶ್ರೀ ಕೃಷ್ಣ ದೇವರಿಗೆ ಪೂಜೆ ನೆರವೇರಿಸಿ ಶುಭಹಾರೈಸಿದರು.

ಧಾರ್ಮಿಕ ಕಾರ್ಯಕ್ರಮವಾಗಿ ಶ್ರೀಗಳಿಂದ ಅಲಂಕಾರ ಪೂಜೆ, ಸಹಸ್ರನಾಮಾರ್ಚನೆ, ತೀರ್ಥಪೂಜೆ, ಧೂಪಪೂಜೆ ಮತ್ತು ಮಹಾಪೂಜೆ ನಡೆಯಿತು. ಆನಂತರ ಆರತಿಗೈದು ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಿಸಿ ನೆರೆದ ನೆರೆದ ಸದ್ಭಕ್ತರಿಗೆ, ಮಂತ್ರಾಕ್ಷತೆ ನೀಡಿ ಅನುಗ್ರಹಿಸಿ ದೀಪಾವಳಿ ಸಂದೇಶವನ್ನಿತ್ತರು. ಕಾರ್ಯಕ್ರಮದಲ್ಲಿ ಪುರೋಹಿತರಾದ ವಾಸುದೇವ ಉಡುಪ, ಜನಾರ್ಧನ ಅಡಿಗ, ರಾಮ ವಿಠಲ ಕಲ್ಲೂರಾಯ, ಸರ್ವಜ್ಞ ಉಡುಪ, ಶಂಕರ ಕಲ್ಯಾಣಿತ್ತಾಯ, ರಾಘವೇಂದ್ರ ಉಡುಪ, ಅದಮಾರು ಮಠದ ಮುಂಬಯಿ ಶಾಖೆಯ ದಿವಾನ ಲಕ್ಷ್ಮಿನಾರಾಯಣ ಮುಚ್ಚಿಂತ್ತಾಯ, ವಾಣಿ ಆರ್‌.ಭಟ್‌, ಮಠದ ಮುಂಬಯಿ ಶಾಖಾ ವ್ಯವಸ್ಥಾಪಕ ಪಡುಬಿದ್ರಿ ವಿ. ರಾಜೇಶ್‌ ರಾವ್‌ ಉಪಸ್ಥಿತರಿದ್ದರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗಳಿಂದ ಆಶೀರ್ವಾದ ಪಡೆದರು.

Advertisement

 

 ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next