Advertisement

ಇಂಡಿಯಲ್ಲಿಂದು ಕನ್ನಡಮ್ಮನ ಹಬ್ಬ

02:29 PM Jan 02, 2018 | |

ಇಂಡಿ: ಕರ್ನಾಟಕ ರಕ್ಷಣಾ ವೇದಿಕೆಯಿಂದ ಜ. 2ರಂದು ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದ ಪಕ್ಕದಲ್ಲಿ ಗಡಿನಾಡು ಕನ್ನಡಿಗರ ಮೂರನೇ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಪಟ್ಟಣದ ತುಂಬೆಲ್ಲ ಕನ್ನಡಾಂಬೆಯ ಮತ್ತು ಕನ್ನಡನಾಡ ಧ್ವಜ ರಾರಾಜಿಸುತ್ತಿವೆ. ಪಟ್ಟಣದ ಎಲ್ಲ ಮುಖ್ಯ ವೃತ್ತಗಳನ್ನು ಅಲಂಕರಿಸಿ ನಾಡು ನುಡಿಯ ಹಬ್ಬಕ್ಕೆ ಅದ್ಧೂರಿಯಾಗಿ ತಯಾರಿ ನಡೆಸಲಾಗುತ್ತಿದೆ.

Advertisement

ಇಂಡಿ ತಾಲೂಕು ಮಹಾರಾಷ್ಟ್ರಕ್ಕೆ ಅಂಟಿಕೊಂಡ ಗಡಿನಾಡು ತಾಲೂಕಾಗಿದ್ದು ಇಲ್ಲಿ ಮಹಾರಾಷ್ಟ್ರದವರ ಪ್ರಭಾವ ತುಸು
ಹೆಚ್ಚಾಗೇ ಕಾಣಬರುತ್ತದೆ. ಗಡಿ ತಾಲೂಕಿನಲ್ಲಿ ಕನ್ನಡ ನುಡಿ ಉಳಿಸಿ ಬೆಳೆಸುವಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಿರಂತರ
ತನ್ನ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ.

ತಾಲೂಕಿನಲ್ಲಿ ಅನೇಕ ಕಲಾವಿದರು, ಸಾಹಿತ್ಯಾಭಿಮಾನಿಗಳು, ಶರಣರು, ಆಗಿ ಹೋಗಿದ್ದಾರೆ. ರಕ್ಷಣಾ ವೇದಿಕೆಯ ಈ ಗಡಿನಾಡು ಕನ್ನಡಿಗರ ಸಮಾವೇಶ ಕಾರ್ಯಕ್ರಮದಲ್ಲಿ ಅಂತಹ ಮಹನೀಯರನ್ನು ಸ್ಮರಿಸುವ ಕಾರ್ಯ ಮಾಡಬೇಕು ಎಂಬುದು ಸಾಹಿತ್ಯಾಸಕ್ತರ
ಆಶಯವಾಗಿದೆ.

ತಾಲೂಕಿನ ಅಗರಖೇಡದ ಶ್ರೀರಂಗರು, ಹಲಸಂಗಿಯ ಮಧುರಚೆನ್ನರು, ಚಡಚಣದ ಸಿಂಪಿ ಲಿಂಗಣ್ಣನವರು, ಪಿ. ಧೂಲಾಸಾಹೇಬರು ಸೇರಿದಂತೆ ಇನ್ನಿತರ ಸಾಹಿತ್ಯದ ಕಣಜವಾದ ಮಹನೀಯರನ್ನು ಮತ್ತು ಕನ್ನಡ ಭಾಷೆ ಉಳಿವಿಗೆ ಕನ್ನಡ ಭಾಷೆಯಲ್ಲೇ ಪದ ಪ್ರಯೋಗ ಮಾಡಬೇಕೆಂದು ತಿಳಿ ಹೇಳುವ ಕೆಲಸವನ್ನು ಸಹ ಮಾಡಬೇಕೆಂಬುವುದು ಕನ್ನಡಾಭಿಮಾನಿಗಳ ಆಶಯ.

ಕಾರ್ಯಕ್ರಮದ ಸಾನ್ನಿಧ್ಯವನ್ನು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಿರಶ್ಯಾಡ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು, ಹಿರೇಮಣೂರದ ಪಂಡಿತ ಅನಂತಾಚಾರ್ಯರು, ಗೋಳಸಾರದ ಅಭಿನವ ಪುಂಡಲಿಂಗ ಮಹಾರಾಜರು ವಹಿಸಲಿದ್ದಾರೆ.

Advertisement

ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಲಿದ್ದು, ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅಧ್ಯಕ್ಷತೆ ವಹಿಸುವರು. ಕನ್ನಡಾಂಬೆಗೆ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಪುಷ್ಪಾರ್ಚನೆ ಸಲ್ಲಿಸಲಿದ್ದು ಮೆರವಣಿಗೆಗೆ ಮಹಾದೇವ ಭೈರಗೊಂಡ ಚಾಲನೆದ ನೀಡುವರು. ನೇತೃತ್ವವನ್ನು ಕರವೇ ತಾಲೂಕಾಧ್ಯಕ್ಷ ಬಾಳು ಮುಳಜಿ ವಹಿಸಲಿದ್ದಾರೆ. ವಿಶೇಷ ಸನ್ಮಾನಿತರಾಗಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ವಿಶೇಷ ಆಹ್ವಾನಿತರಾಗಿ ಸಿಂದಗಿ
ಶಾಸಕ ರಮೇಶ ಭೂಸನೂರ, ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ, ಬಿಜೆಪಿ ಮುಖಂಡ ಶಂಕರಗೌಡ ಪಾಟೀಲ, ಜಿಪಂ ಸದಸ್ಯ ಶಿವಯೋಗೆಪ್ಪ ನೇದಲಗಿ, ಚಿತ್ರ ನಟ ಶ್ರೀನಗರ ಕಿಟ್ಟಿ, ನಟಿ ಅಮೃತಾ ರಾವ್‌ ಆಗಮಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next