Advertisement
2013ಕ್ಕಿಂತ ಈ ಬಾರಿ ಶೇ. 3.25ರಷ್ಟು ಅಧಿಕ ಮತದಾನವಾಗಿದೆ. ಜಿಲ್ಲೆಯಲ್ಲಿ ಒಟ್ಟು 8 ಕ್ಷೇತ್ರಗಳಿದ್ದು, ಎಲ್ಲ ಕ್ಷೇತ್ರಗಳ ಬಹುತೇಕ ಬೂತ್‌ಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭಗೊಂಡಾಗಿನಿಂದಲೇ ಮತ ದಾರರು ಬಹಳ ಉತ್ಸುಕತೆಯಿಂದ ಸರದಿಯಲ್ಲಿ ನಿಂತಿದ್ದ ದೃಶ್ಯ ಬಹುತೇಕ ಎಲ್ಲ ಮತಗಟ್ಟೆಗಳಲ್ಲಿಯೂ ಕಂಡು ಬಂದಿತ್ತು. ಕೆಲವು ಮತಗಟ್ಟೆಗಳಲ್ಲಿ ಮುಂಜಾನೆ 6.45ರ ವೇಳೆಗೇ ಮತದಾರರು ತಮ್ಮ ಹಕ್ಕು ಚಲಾಯಿಸುವುದಕ್ಕೆ ಬಂದು ಕಾದು ಕುಳಿತದ್ದು ವಿಶೇಷ.
Related Articles
ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆ ತನಕ ನಡೆದಿದ್ದು, ಜಿಲ್ಲೆಯ ಯಾವುದೇ ಮತಗಟ್ಟೆಯಲ್ಲಿಯೂ ಅಹಿತಕರ ಘಟನೆ ಆಗಿರುವ ಬಗ್ಗೆ ವರದಿಯಾಗಿಲ್ಲ. ಶಾಂತಿಯುತ ಮತದಾನ ನಡೆಸುವಲ್ಲಿ ಒಂದು ಕಡೆ ಮತದಾರರು ಪೂರ್ಣ ಸಹಕಾರ ನೀಡಿದ್ದರೆ, ಇನ್ನೊಂದೆಡೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಡ ಪರಿಣಾಮಕಾರಿಯಾಗಿ ಬಂದೋಬಸ್ತ್ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ನಿಷೇಧಾಜ್ಞೆ ಅಂತ್ಯಮುಕ್ತ ಹಾಗೂ ಶಾಂತಿಯುತ ಮತದಾನ ನಡೆಸುವ ದೃಷ್ಟಿಯಿಂದ ಗುರುವಾರ (ಮೇ 10) ಸಂಜೆ 6 ಗಂಟೆಯಿಂದಲೇ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಜಿಲ್ಲಾದ್ಯಂತ ಸಿಆರ್‌ಪಿಸಿ ಸೆಕ್ಷನ್ 144 ಅನ್ವಯ ಜಾರಿಗೊಳಿಸಿದ್ದ ನಿಷೇಧಾಜ್ಞೆಯನ್ನು ಶನಿವಾರ ಸಂಜೆ 6 ಗಂಟೆ ವೇಳೆಗೆ ಮುಕ್ತಾಯವಾಗಿದೆ. ಮದ್ಯ ಮಾರಾಟ ನಿಷೇಧವು ಮಧ್ಯ ರಾತ್ರಿ 12 ಗಂಟೆ ವೇಳೆಗೆ ಕೊನೆಗೊಂಡಿದೆ. ಮತದಾರರಿಗೆ ವರದಾನವಾದ ಹವಾಮಾನ
ಮೂರ್ನಾಲ್ಕು ದಿನಗಳ ಹಿಂದೆ ಜಿಲ್ಲೆಯಲ್ಲಿ ಸುಡು ಬಿಸಿಲಿನ ತಾಪವಿದ್ದು, ಜನರು ಮನೆಯಿಂದ ಹೊರಗೆ ಕಾಲಿಡಲು ಭಯ ಪಡುವ ಪರಿಸ್ಥಿತಿ ಇತ್ತು. ಆದರೆ ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮಳೆ ಬಂದಿದೆ. ಶುಕ್ರವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಇದರಿಂದಾಗಿ ಶನಿವಾರ ಮಧ್ಯಾಹ್ನದವರೆಗೆ ತಂಪು ವಾತಾವರಣವಿತ್ತು. ಇದರಿಂದ ಮತದಾರರಿಗೂ ಸೆಕೆ ಯಿಂದ ಅಷ್ಟೊಂದು ಕಿರಿಕಿರಿಯಾಗಿರಲಿಲ್ಲ. ಜತೆಗೆ ಮತದಾನದ ದಿನವಾದ ಶನಿವಾರ ಮಧ್ಯಾಹ್ನದ ಅನಂತರ ಜಿಲ್ಲೆಯಲ್ಲಿ ಭಾರೀ ಮಳೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದರೂ ಸಂಜೆ 6 ಗಂಟೆವರೆಗೆ ಮಳೆ ಬಾರದ್ದು ಮತದಾರರಿಗೆ ವರದಾನವಾಗಿದ್ದು, ಎಲ್ಲಿಯೂ ಮತದಾನಕ್ಕೆ ಮಳೆ ಅಡ್ಡಿಪಡಿಸಿಲ್ಲ. ಮತದಾನ ಪ್ರಮಾಣ ಹೆಚ್ಚಳಕ್ಕೆ ಇದೂ ಒಂದು ಕಾರಣವಾಗಿದೆ. ಶೇ. 3.25 ಹೆಚ್ಚಳ
ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಒಟ್ಟು ಮತದಾನದ ಶೇಕಡಾವಾರು ಪ್ರಮಾಣದಲ್ಲಿ 3.25 ಹೆಚ್ಚಳವಾಗಿದೆ. 2013ರ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಶೇ. 74.48 ಮತದಾನವಾಗಿತ್ತು. ಮೇ 15: ಅಭ್ಯರ್ಥಿಗಳ ಭವಿಷ್ಯ
ಮತದಾರರು ನೀಡಿದ ತೀರ್ಪು ಮತ ಯಂತ್ರಗಳಲ್ಲಿ ಭದ್ರವಾಗಿದ್ದು, ಕಣದಲ್ಲಿದ್ದ 58 ಮಂದಿಯ ಭವಿಷ್ಯ ಮೇ 15ರಂದು ಪ್ರಕಟವಾಗಲಿದೆ. ಬಸ್ ವಿಳಂಬ
ಜಿಲ್ಲೆಯ ಮತದಾರರಾಗಿದ್ದು, ದೂರದ ಮುಂಬಯಿ ಮತ್ತು ಬೆಂಗಳೂರಿನಲ್ಲಿದ್ದವರು ಬಸ್, ರೈಲುಗಳಲ್ಲಿ ಆಗಮಿಸಿದ್ದರು. ಬಸ್‌ಗಳಲ್ಲಿ ಪ್ರಯಾಣಿಕರ ಒತ್ತಡ ಜಾಸ್ತಿ ಇದ್ದ ಕಾರಣ ಶನಿವಾರ ಬೆಳಗ್ಗೆ ಬಸ್‌ಗಳು
ವಿಳಂಬವಾಗಿ ಮಂಗಳೂರಿಗೆ ತಲುಪಿದವು. ಜನರಿಲ್ಲ: ಮಾಲ್, ಅಂಗಡಿ ಬಂದ್
ಮಂಗಳೂರಿನಲ್ಲಿ ವಾಹನ ಮತ್ತು ಜನ ಸಂಚಾರ ವಿರಳವಾಗಿತ್ತು. ಜನ ಸಂಚಾರ ಕಡಿಮೆಯಾಗಿದ್ದರಿಂದ ಪ್ರಮುಖ ಮೂರು ಮಾಲ್‌ಗಳು ಸಹಿತ ಹಲವು ಅಂಗಡಿಗಳನ್ನು ಮುಚ್ಚಲಾಗಿತ್ತು. ಸಂಜೆ ವೇಳೆಗೆ ಕೆಲವು ಅಂಗಡಿಗಳು ತೆರೆದಿದ್ದವು. ನಗರದಲ್ಲಿ ಕನಿಷ್ಠ-ಗ್ರಾಮೀಣದಲ್ಲಿ ಗರಿಷ್ಠ
ಬೆಳ್ತಂಗಡಿ ಕ್ಷೇತ್ರದಲ್ಲಿ ಒಟ್ಟು ಶೇ.81.40, ಮೂಡಬಿದಿರೆಯಲ್ಲಿ ಶೇ.75.41, ಮಂಗಳೂರು ದಕ್ಷಿಣದಲ್ಲಿ ಶೇ.67.47, ಮಂಗಳೂರು ಉತ್ತರ ಕ್ಷೇತ್ರದಲ್ಲಿ ಶೇ.74.55, ಮಂಗಳೂರು ಕ್ಷೇತ್ರದಲ್ಲಿ ಶೇ.75.73, ಬಂಟ್ವಾಳ ಕ್ಷೇತ್ರದಲ್ಲಿ ಶೇ.81.89, ಪುತ್ತೂರು ಕ್ಷೇತ್ರದಲ್ಲಿ ಶೇ.81.70 ಹಾಗೂ ಸುಳ್ಯ ಕ್ಷೇತ್ರದಲ್ಲಿ ಶೇ.83.00 ಮತದಾನ ದಾಖಲಾಗಿದೆ. ಮತದಾನ ಪ್ರಮಾಣ ನೋಡಿದರೆ, ಅತೀ ಹೆಚ್ಚು ಮತದಾನ ಸುಳ್ಯ ಕ್ಷೇತ್ರದಲ್ಲಿ ಹಾಗೂ ಅತೀ ಕಡಿಮೆ ಮತದಾನ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಆಗಿದೆ.