Advertisement
ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆಯಾಗಬೇಕೆಂಬ ಉದ್ದೇಶದಿಂದ ಪ್ರತಿ ಚುನಾವಣೆಯಲ್ಲಿ ರಾಯಭಾರಿಯನ್ನು ನೇಮಿಸುವ ಪದ್ಧತಿ ಜಾರಿಗೆ ಬಂದು ಕೆಲವು ವರ್ಷಗಳೇ ಆಗಿವೆ. ಸಾಮಾನ್ಯವಾಗಿ ಜನಪ್ರಿಯ ವ್ಯಕ್ತಿಗಳನ್ನು ರಾಯಭಾರಿಗಳನ್ನಾಗಿ ನೇಮಿಸಲಾಗುತ್ತದೆ. ಇಂತಹ ಜನಪ್ರಿಯ ವ್ಯಕ್ತಿಗಳು ಹೆಚ್ಚಾಗಿ ಇರುವುದು ಸಿನೆಮಾ ಮತ್ತು ಕ್ರೀಡಾ ಕ್ಷೇತ್ರದಲ್ಲಿ. ಈ ಸಲ ರಾಜ್ಯದ ಚುನಾವಣೆಗೆ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅಂಬಾಸಿಡರ್ ಆಗಿದ್ದಾರೆ. ಐಕಾನ್‌ಗಳು ಎಂದು ಅರಿಯಲ್ಪಡುವ ಈ ವ್ಯಕ್ತಿಗಳಿಂದ ಹೇಳಿಸಿದರೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬರಬಹುದು ಎಂಬ ಲೆಕ್ಕಾಚಾರವಿದು. ಈ ಪ್ರಯತ್ನ ತುಸು ಫಲನೀಡಿದ್ದರೂ ಪೂರ್ಣವಾಗಿ ಯಶಸ್ಸಾಗಿದೆ ಎನ್ನುವಂತಿಲ್ಲ. ಇದೀಗ ಚುನಾವಣಾ ಆಯೋಗ ಚುನಾವಣೆಗೆ ಸಾಂಸ್ಕೃತಿಕ ಸ್ಪರ್ಷ ನೀಡುವ ಮೂಲಕ ಅದನ್ನು ನಿಜವಾಗಿಯೂ ಹಬ್ಬವನ್ನಾಗಿ ಮಾಡಲು ಮುಂದಾಗಿದೆ. ಮತಗಟ್ಟೆಗಳನ್ನು ಜನಪದೀಯ ಥೀಂ ಇಟ್ಟುಕೊಂಡು ಅಲಂಕರಿಸುವುದು ಇಂತಹ ಪ್ರಯತ್ನಗಳಲ್ಲಿ ಒಂದು. ಕೆಲವು ಮತಗಟ್ಟೆ ಗಳನ್ನು ವಿವಿಧ ಬುಡಕಟ್ಟು ಜನಾಂಗದವರ ಕಸುಬು, ಜನಜೀವನ, ಜನಪದೀಯ ಸೊಗಡನ್ನು ಬಿಂಬಿಸುವಂತೆ ಅಲಂಕರಿಸಲಾಗುತ್ತದೆ. ಈ ಮೂಲಕ ಬುಡಕಟ್ಟು ಜನಾಂಗದವರ ಸಂಸ್ಕೃತಿಗೆ ರಾಜಕೀಯದ ಮುಖ್ಯ ವಾಹಿನಿ ಯಲ್ಲೊಂದು ಮಹತ್ವದ ಸ್ಥಾನವನ್ನೂ ನೀಡಿದ ಹಾಗಾಯಿತು. ಜತೆಗೆ ಈ ಸಂಸ್ಕೃತಿಯ ಪರಿಚಯವನ್ನು ಉಳಿದವರಿಗೆ ಮಾಡಿದಂತಾಯಿತು ಎಂಬ ಆಶಯ ಇದರ ಹಿಂದಿನದ್ದು. ಅಂತೆಯೇ ಚುನಾವಣೆಗೆ ಯಕ್ಷಗಾನದ ಮಾಧ್ಯಮ, ಹಾಡು,ನಾಟಕ ಇತ್ಯಾದಿಗಳನ್ನು ಬಳಸಿಕೊಳ್ಳು ವುದು ಕೂಡ ಸಾಂಸ್ಕೃತಿಕ ಸ್ಪರ್ಷ ನೀಡುವ ಪ್ರಯತ್ನಗಳೇ. ರಾಜ್ಯದ ಎಲ್ಲ 224 ವಿಧಾನಸಭೆ ಕ್ಷೇತ್ರಗಳ ಹೆಸರುಗಳನ್ನು ಕ್ರಮಬದ್ಧವಾಗಿ ತಪ್ಪಿಲ್ಲದೆ ಹೇಳುವ ಆರು ವರ್ಷದ ಬಾಲಕನನ್ನು ಚುನಾವಣಾ ರಾಯಭಾರಿಯನ್ನಾಗಿ ನೇಮಿಸಿದ್ದನ್ನು ಕೂಡಾ ಈ ದೃಷ್ಟಿಯಲ್ಲಿ ನೋಡಬೇಕು.
Advertisement
ಪ್ರಜಾತಂತ್ರದ ಹಬ್ಬ: ಸಾಂಸ್ಕೃತಿಕ ಸ್ಪರ್ಶ ಸ್ವಾಗತಾರ್ಹ
07:00 AM Apr 14, 2018 | |
Advertisement
Udayavani is now on Telegram. Click here to join our channel and stay updated with the latest news.