ಬೆಂಗಳೂರು: ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಶುಲ್ಕದ ವಿವರಗಳನ್ನೊಳಗೊಂಡ ಫಲಕವನ್ನು ಶಾಲೆಯ ಮುಂದೆ ಅಳವಡಿಸುವ ಸಂಬಂಧ ತನ್ನದೇ ಆದೇಶ ಪಾಲಿಸದ ಶಿಕ್ಷಣ ಇಲಾಖೆಯನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಜ.23ರೊಳಗೆ ರಾಜ್ಯದ ಎಲ್ಲ ಖಾಸಗಿ ಶಾಲೆಗಳ ಮುಂದೆ ಫಲಕ ಅಳವಡಿಸಲು ತಾಕೀತು ಮಾಡಿತು.
ಈ ಕುರಿತಂತೆ ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾ. ದಿನೇಶ್ ಮಹೇಶ್ವರಿ ಹಾಗೂ ನ್ಯಾ. ಅರವಿಂದ ಕುಮಾರ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು. ಈ ವೇಳೆ ಶುಲ್ಕದ ವಿವರಗಳ ಫಲಕ ಅಳವಡಿಸುವ ಕುರಿತ 2015ರ ಏ.13ರಂದು ಹೊರಡಿಸಿರುವ ಸುತ್ತೋಲೆಯಲ್ಲಿನ ಅಂಶಗಳನ್ನು ಪಾಲಿಸದ 2,129 ಶಾಲೆಗಳಲ್ಲಿ ಅದನ್ನು ಜಾರಿಗೊಳಿಸುವ ಬಗ್ಗೆ ಎಲ್ಲ ಉಪ ನಿರ್ದೇಶಕರು ಕ್ರಮ ಕೈಗೊಳ್ಳಬೇಕು.
ಆ ಬಗ್ಗೆ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಬೇಕು. ಇಲ್ಲದಿದ್ದರೆ ಜ.23ರಂದು ಶಿಕ್ಷಣ ಇಲಾಖೆಯ ಆಯುಕ್ತರು ಖುದ್ದು ಹಾಜರಾಗಿ ವಿವರಣೆ ನೀಡಬೇಕಾಗುತ್ತದೆ ಎಂದು ನ್ಯಾಯಪೀಠ ತಾಕೀತು ಮಾಡಿತು. ಸರ್ಕಾರದ ಪರ ವಕೀಲರು ವಾದ ಮಂಡಿಸಿ, ನಿಯಮದಂತೆ ಎಲ್ಲ ಶಾಲೆಗಳು ಕಡ್ಡಾಯವಾಗಿ ಶುಲ್ಕದ ಫಲಕ ಹಾಕುವಂತೆ ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ 15,706 ರಾಜ್ಯ ಪಠ್ಯಕ್ರಮ, 754 ಸಿಬಿಎಸ್‌ಇ ಮತ್ತು 277 ಐಸಿಎಸ್‌ಇ ಶಾಲೆಗಳಿವೆ. ಅವುಗಳಲ್ಲಿ 13,727 ರಾಜ್ಯಪಠ್ಯಕ್ರಮ, 639 ಸಿಬಿಎಸ್‌ಇ ಮತ್ತು 242 ಐಸಿಎಸ್‌ಇ ಶಾಲೆಗಳಲ್ಲಿ ಫಲಕಗಳನ್ನು ಅಳವಡಿಸಲಾಗಿದೆ. ಇನ್ನು 2129 ರಲ್ಲಿ ಫಲಕಗಳನ್ನು ಅಳವಡಿಸಿಲ್ಲ. ಆ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಗಾ ವಹಿಸುತ್ತಿದ್ದಾರೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಶಿಕ್ಷಣ ಇಲಾಖೆ ತಾನೇ ಹೊರಡಿಸಿದ ಆದೇಶವನ್ನು ಪಾಲಿಸುವುದಿಲ್ಲ ಎಂದರೆ ಹೇಗೆ? ಈ ವಿಚಾರದಲ್ಲಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಶುಲ್ಕದ ವಿವರಗಳ ಫಲಕ ಅಳವಡಿಸದ ಯಾವ ಶಾಲೆಯೂ ಇರದಂತೆ ನೋಡಿಕೊಳ್ಳಿ ಎಂದು ಸರ್ಕಾರದ ಪರ ವಕೀಲರಿಗೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.