ಪಿಯಾಂಗ್‌ಚಾಂಗ್ (ದ.ಕೊರಿಯಾ): 23ನೇ ಚಳಿಗಾಲದ ಒಲಿಂಪಿಕ್ಸ್ ನಡೆಯುತ್ತಿರುವ ದಕ್ಷಿಣ ಕೊರಿಯಾದ ಪಿಯಾಂಗ್ ಚಾಂಗ್ ಸಮೀಪ 4.2ರ ತೀವ್ರತೆಯ ಭೂಕಂಪ ಸಂಭವಿಸಿದ ಪರಿಣಾಮ ಹಲವು ಸ್ಪರ್ಧೆಗಳನ್ನು ಗುರುವಾರಕ್ಕೆ ಮುಂದೂಡಲಾಗಿದೆ. ಭಾನುವಾರ ಭಾರೀ ಗಾಳಿ, ವಿಪರೀತ ಚಳಿಯಿತ್ತು. ಅದರ ಜೊತೆಗೆ ಭೂಕಂಪವೂ ಸಂಭವಿಸಿದ್ದರಿಂದ ಸ್ಪರ್ಧಿಗಳು ಕ್ರೀಡಾಗ್ರಾಮದೊಳಗೆ ಉಳಿಯುವಂತಾಯಿತು. ಪ್ರೇಕ್ಷಕರಿಗೆ ಮನವಿ ಮಾಡಿದ ಸಂಘಟಕರು ಮನೆಯಿಂದ ಹೊರಬರದಂತೆ ಮೊಬೈಲ್ ಸಂದೇಶ ಕಳುಹಿಸಿದ್ದಾರೆ.
ಸ್ಕೀಯಿಂಗ್ ಸ್ಪರ್ಧೆ ನಡೆಸುವುದು ಅಪಾಯಕಾರಿ ಎಂದರಿತ ಸಂಘಟಕರು ಅದನ್ನು ಮುಂದೂಡಿದರು. ವೇಗವಾಗಿ ಜಾರುವ ಹಿಮಬಂಡೆಗಳಲ್ಲಿ ವಿಪರೀತ ಗಾಳಿಯ ಪ್ರಭಾವವೂ ಇದ್ದಿದ್ದರಿಂದ ಸಂಘಟಕರು ಮುನ್ನೆಚ್ಚರಿಕೆ ವಹಿಸಿದರು.
ಆದರೆ ಸ್ಪರ್ಧಿಗಳಿಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲವೆಂದು ಸಂಘಟಕರು ಧೈರ್ಯ ಹೇಳಿದ್ದಾರೆ. ಅತ್ಯಂತ ತತೀವ್ರವಾದ ಅಂದರೆ 7.2ರ ಕಂಪನ ಸಂಭವಿಸಿದರೂ ಕ್ರೀಡಾಗ್ರಾಮಕ್ಕೆ ಅಪಾಯವಿಲ್ಲ. ಆ ರೀತಿ ನಿರ್ಮಿಸಲಾಗಿದೆ. ಆದ್ದರಿಂದ ಕೂಟ ನಿರ್ವಿಘ್ನವಾಗಿ ನಡೆಯಲಿದೆ ಎಂದಿದ್ದಾರೆ.
ಈ ಬಾರಿಯ ಚಳಿಗಾಲದ ಒಲಿಂಪಿಕ್ಸ್ ಇತಿಹಾಸದಲ್ಲೇ ಅತಿ ಕನಿಷ್ಠ ತಾಪಮಾನ ಹೊಂದಿರುವ ಕೂಟಗಳಲ್ಲೊಂದೆಂದು ದಾಖಲಾಗಿದೆ. ಉದ್ಘಾಟನಾ ಸಮಾರಂಭದ ವೇಳೆ ವಿಪರೀತ ಚಳಿ ಇದ್ದಿದ್ದರಿಂದ ಜಪಾನ್ ದೇಶದ ಸ್ಪರ್ಧಿಗಳು ಮೆರವಣಿಗೆಗೆ ಬರದೇ ಕೊಠಡಿಯಲ್ಲೇ ಉಳಿದಿದ್ದರೆನ್ನುವುದು ಇಲ್ಲಿ ಗಮನಾರ್ಹ.