Advertisement

ಶೈಕ್ಷಣಿಕ ವ್ಯವಸ್ಥೆಗೆ ಜಟಿಲ ಸಮಸ್ಯೆಯಾದ ಸೋಂಕಿನ ಭೀತಿ

12:51 AM Jun 07, 2020 | Sriram |

ಕೋವಿಡ್-19 ಸೋಂಕು ಹರಡುವ ಭೀತಿ ಜಗತ್ತಿನ ಎಲ್ಲ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಪ್ರಗತಿಗೆ ಹಿನ್ನಡೆಯನ್ನುಂಟು ಮಾಡಿರುವ ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಬದಲಾಗಿ ಇತರ ಕ್ಷೇತ್ರಗಳಲ್ಲಿ ಆರ್ಥಿಕ ನೆರವು, ಪರ್ಯಾಯ ವ್ಯವಸ್ಥೆ ಮೂಲಕ ಸಮಸ್ಯೆಯನ್ನು ಬಗೆಹರಿಸಬಹುದಾಗಿದ್ದರೂ ಶೈಕ್ಷಣಿಕ ವಿಚಾರದಲ್ಲಿ ಮಾತ್ರ ಇದೂ ಕೂಡ ಅಸಾಧ್ಯದ ಮಾತು. ಈ ಹಿನ್ನೆಲೆಯಲ್ಲಿ ಹಲವು ಸಂಗತಿಗಳು ಬಿಡಿಸಲಾಗದ ಕಗ್ಗಂಟಾಗಿ ಸರಕಾರದ ಶಿಕ್ಷಣ ಇಲಾಖೆ, ಖಾಸಗಿ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಚಿಂತೆಗೀಡು ಮಾಡಿವೆ.

Advertisement

ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯೇ ಇನ್ನೂ ಕೂಡ ನಡೆಯಬೇಕಾಗಿದೆ. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಚಟುವಟಿಕೆ ಆರಂಭವಾಗುವ ಕಾಲ ಈಗಾಗಲೇ ಬಂದಿದೆ. ಪ್ರಾಥಮಿಕ ಶಾಲೆಗಳ ತರಗತಿ, ಪಾಠ ಬೋಧನೆಯನ್ನು ಅಷ್ಟೇನೂ ಗಣನೆಗೆ ತೆಗೆದುಕೊಳ್ಳದಿದ್ದರೂ ಸರಿ. ಪ್ರೌಢ ಶಾಲೆಯ ತರಗತಿಗಳು, ಅದರಲ್ಲೂ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಕಲಿಕೆ, ಪಠ್ಯಕ್ರಮ ಪೂರ್ಣಗೊಳಿಸುವ ಕ್ರಮ ಹೇಗೆ ಎಂಬುದರ ಬಗ್ಗೆಯೇ ಗಂಭೀರ ಚಿಂತನೆ ನಡೆದಿದೆ.

ಆದರೆ ಸದ್ಯದ ಪರಿಸ್ಥಿತಿಯನ್ನು ಎದುರಿಸಿ ಈ ಗಂಭೀರ ಸಮಸ್ಯೆಗೆ ಪರಿಹಾರ ಮಾರ್ಗ ಕಂಡುಕೊಳ್ಳಬಹುದಾದ ಉಪಾಯ ಯಾರಿಗೂ ಹೊಳೆಯುತ್ತಿಲ್ಲ. ಆದರೆ ಈ ಸಮಸ್ಯೆಯನ್ನು ಹೀಗೆಯೇ ಹಗುರವಾಗಿ ಪರಿಗಣಿಸಿ ಪರಿಸ್ಥಿತಿ ಸುಧಾರಿಸುವುದನ್ನು ಎದುರು ನೋಡುತ್ತ ಕಾಲ ಕಳೆಯುತ್ತಿದ್ದರೆ ಇದೇ ಸಮಸ್ಯೆ ಮುಂದೆ ಕಠಿಣ ಸಮಸ್ಯೆಯಾಗಿ ಪರಿಣಮಿಸುವುದು ಶತಃಸಿದ್ಧ!

ಪ್ರಸ್ತುತ ಸ್ಥಿತಿ-ಗತಿ ಬಹಳ ಸೂಕ್ಷ್ಮವಾಗಿದೆ. ಪ್ರಾಥಮಿಕ ಶಾಲಾ ತರಗತಿಯನ್ನು ಹೊರತುಪಡಿಸಿ, ಪ್ರೌಢಶಾಲಾ ತರಗತಿಗಳನ್ನು ಆರಂಭಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಶೈಕ್ಷಣಿಕ ಚಟುವಟಿಕೆ ಆರಂಭಿಸುವ ಕುರಿತು ಯೋಚಿಸಿದರೆ, ಮಕ್ಕಳ ಪಾಲಕರಿಗೆ ಒಂದು ಆಯಾಮದಲ್ಲಿ ಸೋಂಕಿನ ಭೀತಿ ಕಾಡುತ್ತದೆ. ಈ ಕಾರಣದಿಂದ ಮಕ್ಕಳನ್ನು ಮನೆಯಲ್ಲೇ ಇಟ್ಟುಕೊಂಡು ಪರಿಸ್ಥಿತಿ ಸುಧಾರಿಸುವ ಕಾಲಕ್ಕೆ ಕಾಯುತ್ತ ಇದ್ದರೆ ಇಡೀ ಶೈಕ್ಷಣಿಕ ವರ್ಷದ ಚಟುವಟಿಕೆಯಲ್ಲಿ ವ್ಯತ್ಯಯವಾಗಿ, ಪುನಃ ತರಗತಿ, ಪಾಠ ಆರಂಭವಾಗುವ ಹೊತ್ತಿಗೆ ವಿದ್ಯಾರ್ಥಿಗಳ ಮಾನಸಿಕ ಪಲ್ಲಟವಾಗಿ ಒತ್ತಡ ಮತ್ತು ಆ ಸ್ಥಿತಿಗೆ ಹೊಂದಿಕೊಳ್ಳಲಾಗದಂತಹ ಸನ್ನಿವೇಶ ಸೃಷ್ಟಿಯಾಗಬಹುದು. ಆದ್ದರಿಂದ ಸದ್ಯದ ಸ್ಥಿತಿಯಲ್ಲಿ ಶಾಲೆ ತೆರೆದು ಪಾಠ ಆರಂಭಿಸಿದರೂ ಅಥವಾ ಬಂದ್‌ ಮಾಡಿ ಶೈಕ್ಷಣಿಕ ಚಟುವಟಿಕೆ ಆರಂಭಿಸದಿದ್ದರೂ “ಬಾಣಲೆಯಿಂದ ತಪ್ಪಿಸಿಕೊಂಡರೂ ಬೆಂಕಿಗೆ ಬಿದ್ದಂತೆ ಎನ್ನುವ ಸನ್ನಿವೇಶ ಇದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ, ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು, ಪಾಲಕರು ಕೇವಲ (ಸೋಂಕಿನ ಭಯ) ಜೀವ ಭಯ ಕುರಿತು ಚಿಂತಿಸದೇ ಭವಿಷ್ಯದ ಜೀವನ ರೂಪಿಸಲು ಪ್ರಮುಖ ಮೆಟ್ಟಿಲಾದ ಶಿಕ್ಷಣವೂ ಜೀವಕ್ಕೆ ಸಮಾನವಾದದು ಎಂಬುದನ್ನು ಅರಿತು, ವಿವೇಕ, ಧೈರ್ಯ ಮತ್ತು ಜಾಗರೂಕತೆಯಿಂದ ದಿಟ್ಟ ನಿರ್ಧಾರ ಕೈಗೊಳ್ಳಬೇಕಾಗಿದೆ. ಆ ನಿರ್ಧಾರ ಯಾರಿಗೆ ಎಷ್ಟು ಬಾಧಕವಾಗಬಹುದು ಎಂಬುದಕ್ಕಿಂತ ಸದ್ಯದ ಪರಿಸ್ಥಿತಿಯನ್ನು ಎಷ್ಟು ಸಮರ್ಪಕವಾಗಿ ನಿಭಾಯಿಸಬಹುದು ಎಂಬ ಸೂತ್ರವನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕಾಗಿದೆ.

ಇನ್ನು ಸರಕಾರ, ಶಿಕ್ಷಣ ಇಲಾಖೆಯ ದ್ವಿಮುಖ ನೀತಿ, ದಿನದಿನಕ್ಕೆ ಬದಲಾಗುವ ಮಾರ್ಗಸೂಚಿಗಳಿಂದ ಹಲವು ಗೊಂದಲಗಳು ಸೃಷ್ಟಿಯಾಗಿವೆ. ಪರಿಣಾಮ ಲೆಕ್ಕಿಸದೇ, ಪರಾಮರ್ಶೆಗೊಳಪಡಿಸದೇ ಪ್ರಕಟಿಸುವ ನಿರ್ಧಾರಗಳು ವಿದ್ಯಾರ್ಥಿಗಳು, ಪಾಲಕರನ್ನು ಗೊಂದಲಕ್ಕೆ ಸಿಲುಕಿಸಿವೆ. ಇನ್ನು ಈ ವಿಚಾರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ವರಸೆಯೇ ಬೇರೆ. ಅವರದೇನಿದ್ದರೂ, ಹೇಗಾದರೂ ಆಗಲಿ ಒಟ್ಟಿನಲ್ಲಿ ಪಠ್ಯಕ್ರಮ ಮುಗಿಸಿದರೆ ಆಯಿತು. ಪಾಲಕರು ಕಟ್ಟಬೇಕಿರುವ ಶುಲ್ಕವನ್ನು ಪೂರ್ಣ ಪ್ರಮಾಣದಲ್ಲಿ ಸಕಾಲಕ್ಕೆ ಕಟ್ಟಿದರೆ ಆಯಿತು. ವರ್ಷದ ಆರ್ಥಿಕ ಚಟುವಟಿಕೆಗೆ ಯಾವುದೇ ರೀತಿಯ ವ್ಯತ್ಯಯವಾಗಬಾರದು. ಇದು ಮೂಲ ಉದ್ದೇಶ. ಇದೇ ಕಾರಣಕ್ಕೇ ಇರಬಹುದು, ಈಗಾಗಲೇ ಸರಕಾರ, ಶಿಕ್ಷಣ ಇಲಾಖೆ ಆನ್‌ಲೈನ್‌ ತರಗತಿ ಬೇಡ ಎಂದು ಆದೇಶಿಸಿ ಸುತ್ತೋಲೆ ಹೊರಡಿಸಿದ್ದರೂ ಇದನ್ನು ನಿರ್ಲಕ್ಷಿಸಿ ಎಷ್ಟೋ ಖಾಸಗಿ ಪ್ರೌಢಶಾಲೆಗಳಲ್ಲಿ ಆನ್‌ಲೈನ್‌ ತರಗತಿಗಳನ್ನು ಆರಂಭಿಸಿ ಪಾಠ ಮಾಡಲಾಗುತ್ತಿದೆ.

Advertisement

ಖಾಸಗಿ ಶಿಕ್ಷಣ ಸಂಸ್ಥೆಗಳ ಇಂತಹ ದಿಢೀರ್‌ ಕ್ರಮದಿಂದಾಗಿ ವಿದ್ಯಾರ್ಥಿಗಳು, ಪಾಲಕರು ಗೊಂದಲಕ್ಕೊಳಗಾಗಿದ್ದಾರೆ. ಆನ್‌ಲೈನ್‌ ಪಾಠ ಮಕ್ಕಳಿಗೆ ಎಷ್ಟರಮಟ್ಟಿಗೆ ಫ‌ಲಿಸಬಹುದು, ಕಲಿಗೆ ಎಷ್ಟರ ಮಟ್ಟಿಗೆ ಪೂರಕವಾಗಬಹುದು ಎಂಬುದು ದುಗುಡ ಹುಟ್ಟಿಸಿದೆ. ಇದೂ ಅಲ್ಲದೇ, ಎಷ್ಟೋ ವಿದ್ಯಾಥಿಗಳಿಗೆ ನೆಟ್‌ವರ್ಕ್‌, ಡಾಟಾದಂತ ತಾಂತ್ರಿಕ ಸಮಸ್ಯೆಯಿಂದ ಪಾಠವನ್ನು ಸರಿಯಾಗಿ ಮತ್ತು ಪೂರ್ಣ ಪ್ರಮಾಣದಲ್ಲಿ ಸಂವಹನ ಮಾಡಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಆದರೆ ಶಿಕ್ಷಣ ಸಂಸ್ಥೆಯವರಿಗೆ ಈ ಸಮಸ್ಯೆ ಮುಖ್ಯವೇ ಅಲ್ಲ. ನಾವು ಮಾಡುವುದನ್ನು ಮಾಡುತ್ತೇವೆ. ಅದನ್ನು ಕೇಳುವುದು ಬಿಡುವುದು, ಸ್ವೀಕರಿಸುವುದು ತಿರಸ್ಕರಿಸುವುದು ನಿಮಗೆ ಬಿಟ್ಟಿದ್ದು ಎನ್ನುವ ಧಾಟಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಇಂತಹ ಉಢಾಪೆ ವರ್ತನೆ, ವಿದ್ಯಾರ್ಥಿಗಳು, ಪಾಲಕರ ಈ ಅಸಹಾಯಕತೆ ಶೈಕ್ಷಣಿಕ ಕ್ಷೇತ್ರದಲ್ಲಿ ವ್ಯತಿರಿಕ್ತ ಪರಿಣಾಮ ಬೀರಿ ಮುಂದಿನ ದಿನಗಳಲ್ಲಿ ಎಂತಹ ಕಠಿಣ ಸಮಸ್ಯೆಗಳು ಎದರಾಗಲಿ ವೆಯೋ ಎಂಬುದನ್ನು ಯಾರೂ ಊಹಿಸಲೂ ಸಾಧ್ಯವಿಲ್ಲ. ಆದ್ದರಿಂದ ಸರಕಾರದ ನಿರ್ದೇಶನ, ಮಾರ್ಗಸೂಚಿಯನ್ನು ನಿರ್ಲಕ್ಷಿಸಿ ಯಾವುದೇ ಖಾಸಗಿ ಶಾಲೆಯಲ್ಲಿ ಆನ್‌ಲೈನ್‌ ಪಾಠ ಆರಂಭಿಸದಿರುವಂತೆ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.

ಶಿಕ್ಷಣವೆಂಬುದು ಯಾವ ಕಾಲಕ್ಕೂ ವ್ಯಾಪಾರದ ಸರಕಲ್ಲ; ಅದು ಆಗಲೂ ಕೂಡದು. ಈಗ ಆಗಿರುವ ಅಪಾಯ ಅದೇನೆ! ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್-19 ಸೋಂಕು ಹರಡುವ ಭಯ ಶೈಕ್ಷಣಿಕ ಕಾಲ ಕ್ರಮದಲ್ಲಿ ವ್ಯತ್ಯಯ ತಂದೊಡ್ಡುವ ಆತಂಕವಿರಬಹುದು. ಯಾವುದಾದರೊಂದು ಮೂಲದಿಂದ ಇದಕ್ಕೆ ಪರಿಹಾರ ಸಿಕ್ಕೀತು. ಆದರೆ ಶಿಕ್ಷಣ ವ್ಯಾಪಾರೀಕರಣ ಮತ್ತು ಅಸಮತೋಲನವೆಂಬುದು ಇಂತಹ ಸಂದರ್ಭದಲ್ಲಿ ಎಂತಹ ಅದ್ವಾನಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ತಾಜಾ ಉದಾಹರಣೆಗಳು ಕಣ್ಣಮುಂದೆಯೇ ಇವೆ.

ಈ ನಿಟ್ಟಿನಲ್ಲಿ ದೇಶದ ಎಲ್ಲ ಭಾಗಗಳಲ್ಲಿ ಎಲ್ಲ ವರ್ಗದವರಿಗೆ ಸಮಾನ ಶಿಕ್ಷಣ ಒದಗಿಸುವ ವ್ಯವಸ್ಥೆ ಜಾರಿಗೆ ತರುವುದು ನಮ್ಮ ಸರಕಾರಗಳಿಗೇಕೆ ಇಷ್ಟವಿಲ್ಲವೋ!? ಇಷ್ಟ ಬಂದವರು ಮನ ಬಂದಂತೆ (ಸರಕಾರದ ನಿಯಮಾನುಸಾರ) ಶಿಕ್ಷಣ ಸಂಸ್ಥೆಗಳನ್ನು ತೆರೆದು, ತಮಗೆಷ್ಟು ಬೇಕೊ ಅಷ್ಟು ಶುಲ್ಕ ವಸೂಲಿ ಮಾಡಿ, ತಮಗೆ ತೋಚಿದಂತೆ ಶಿಕ್ಷಣ ನೀಡುವ ವ್ಯವಸ್ಥೆ ಯಾಕಾದರೂ ಸರಕಾರಗಳಿಗೆ ಸಹ್ಯವಾಗಿದೆಯೋ ಅರ್ಥವಾಗುತ್ತಿಲ್ಲ. ಅಷ್ಟಕ್ಕೂ ಶಿಕ್ಷಣವನ್ನು ವ್ಯಾಪಾರವಾಗಿಸುವ (ಈಗಾಗಲೇ ಆಗಿರುವ) ಲಾಭಕೋರ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಇದರ ಹಿಂದೆ ಕೆಲಸ ಮಾಡಿಡುವುದು ಸತ್ಯವೆ! ಇಂತಹ ಶಕ್ತಿಗಳನ್ನು ಓಟ್‌ ಬ್ಯಾಂಕ್‌, ಮನಿ ಬ್ಯಾಂಕ್‌(!) ಮಾಡಿಕೊಳ್ಳುವ ಕೆಲ ಜನಪ್ರತಿನಿಧಿಗಳು ಅಧಿಕಾರಕ್ಕೆ ಬಂದಾಗ ಅವಕ್ಕೆ ಅನುಕೂಲ ಒದಗಿಸುವುದು ಸಾಮಾನ್ಯವೆ. ದೇಶದಲ್ಲಿ ಹೀಗೆ ಲಾಭಕ್ಕಾಗಿ ತಲೆ ಎತ್ತಿರುವ ಸಾವಿರಾರು ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಶೈಕ್ಷಣಿಕ ವ್ಯವಸ್ಥೆ ಇಂದು ಹೇಳಿದಷ್ಟು ಶುಲ್ಕ ಕಟ್ಟುವುದೇ ಕಲಿಕೆ ಎಂಬಂತಾಗಿದೆ.

ಎಲ್ಲ ವರ್ಗದ ಜನರೂ ತಮ್ಮ ದುಡಿಮೆಯ ಆದಾಯದ ಒಂದು ಭಾಗವನ್ನು ಇದಕ್ಕಾಗಿ ಮೀಸಲಿರಿಸಬೇಕಾಗಿದೆ. ಇದು ವ್ಯಾಪಾರವಲ್ಲದೇ ಇನ್ನೇನು. ಬರೀ ವ್ಯಾಪಾರವಾಗಿದ್ದರೆ ಸರಿಯೇನೊ, ಕಳ್ಳ ವ್ಯಾಪಾರವಾಗಿಯೂ ಬೆಳೆಯುತ್ತಿರುವುದು ದೇಶದ ದುರಂತಗಳಲ್ಲೊಂದು! ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ ದೇಶದಲ್ಲಿ ತಿಂಗಳುಗಟ್ಟಲೆ ಲಾಕ್‌ಡೌನ್‌ ವಿಧಿಸಿದ ಪರಿಣಾಮ ಈ ಸಂದರ್ಭದ ಆರ್ಥಿಕ ಅಸಮತೋಲನವನ್ನು ನೀಗಿಸಲು ಕೇಂದ್ರ ಸರಕಾರ 20 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜ್‌ ಘೋಷಿಸಿದೆ. ಇದು ದೇಶ ಮುನ್ನಡೆಸುವ ವಿಷಯ ನಿಜ. ಆದರೆ ಅನಾದಿ ಕಾಲಕ್ಕೂ ದೇಶವನ್ನು ಉನ್ನತೀಕರಿಸುವ ಶಕ್ತಿಯಾದ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಿ, ಎಲ್ಲ ವರ್ಗದವರಿಗೆ ಉತ್ಕೃಷ್ಟ ಶಿಕ್ಷಣ ದೊರೆಯುವ ರೀತಿಯಲ್ಲಿ ನೀತಿಗಳನ್ನು ಸಮತೂಕವಾಗಿಸಿ ಸೂಪಿಸಿಲು ಸಾಧ್ಯವಿಲ್ಲವೇ? “ಒಂದು ದೇಶ ಒಂದು ಶಿಕ್ಷಣ ನೀತಿ “ಒಂದು ದೇಶ ಎಲ್ಲರಿಗೂ ಸಮಾನ ಶಿಕ್ಷಣ “ದೇಶದ ಎಲ್ಲರಿಗೂ ಬಯಸಿದ ಶಿಕ್ಷಣ ಎನ್ನುವ ಘೋಷ ವ್ಯಾಕ್ಯಗಳಡಿ, ವ್ಯಾಪಾರ-ಲಾಭದ ಉದ್ದೇಶ ಹೊರತಾಗಿಸಿ ಶಿಕ್ಷಣ ವ್ಯವಸ್ಥೆ ರೂಪಿಸಲು ಸಾಧ್ಯವಿಲ್ಲವೇ?… ಸಾಧ್ಯವಿದೆ! ಸರಕಾರಕ್ಕೆ ಇಚ್ಛಾಶಕ್ತಿ, ಮಹತ್ವಾಕಾಂಕ್ಷೆ ಬೇಕು. ಅಷ್ಟೇ ಅಲ್ಲ ಶಿಕ್ಷಣವನ್ನು ವ್ಯಾಪಾರದಿಂದ ಬೇರ್ಪಡಿಸುವ ಛಾತಿ ಬೇಕು. ಇದು ಸಾಧ್ಯ ಎಂದಾದರೆ, ಇಂದಿಗೂ ಉನ್ನತ, ಉತ್ಕೃಷ್ಟ ಶಿಕ್ಷಣ ತಮಗೆ ಗಗನ ಕುಸುಮ ಎಂದುಕೊಂಡಿರುವ ಅದೆಷ್ಟೋ ಕೆಳ, ಮಧ್ಯಮ ವರ್ಗದವರ ಕನಸುಗಳು ನನಸಾದಾವು. ದೇಶದ ಭವಿಷ್ಯ ಉಜ್ವಲಗೊಂಡೀತು!

ಇದು ಶೈಕ್ಷಣಿಕ ಕ್ಷೇತ್ರದ ಕಸ ಹೊಡೆಯುವ ವಿಚಾರ. ಆದರೆ ಸದ್ಯ ಸೋಂಕಿನ ಸವಾಲು ಮೀರಿ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆ ಯನ್ನು ವ್ಯತ್ಯಯವಾಗದಂತೆ ಆರಂಭಿಸುವ, ಪೂರ್ಣಗೊಳಿಸುವ ಕುರಿತು ಸಂಬಂಧಿಸಿದ ಎಲ್ಲರೂ ಭಿನ್ನಾಭಿಪ್ರಾಯ ಬದಿಗೊತ್ತಿ ಏಕಚಿತ್ತದಿಂದ ಚಿಂತಿಸಿ, ಸಮರ್ಪಕ, ನ್ಯಾಯಯುತ ಮಾರ್ಗ ಕಂಡುಕೊಳ್ಳಬೇಕಾದ್ದು ತುರ್ತು.

-ಕುಮಾರ ಬೇಂದ್ರೆ

Advertisement

Udayavani is now on Telegram. Click here to join our channel and stay updated with the latest news.

Next