Advertisement

4 ವರ್ಷವಾದರೂ ನಿಲ್ಲದ ಪ್ರವಾಹ ಭೀತಿ; ಹಳ್ಳಿಗಳ ಸಂಪೂರ್ಣ ಸ್ಥಳಾಂತರ ಅಗತ್ಯ

12:52 PM Aug 17, 2022 | Team Udayavani |

ಬಾಗಲಕೋಟೆ: ತ್ರಿವಳಿ ನದಿಗಳ ನಾಡು ಬಾಗಲಕೋಟೆ ಜಿಲ್ಲೆಗೆ ಕಳೆದ ನಾಲ್ಕು ವರ್ಷಗಳಿಂದ ಪ್ರವಾಹ ಭೀತಿ ತಪ್ಪಿಲ್ಲ. ಮೂರೂ ನದಿ ಪಾತ್ರದ ಜನರು, ಮಳೆಗಾಲ ಆರಂಭವಾಯಿತೆಂದರೆ ಸಾಕು ಆತಂಕದಲ್ಲೇ ಬದುಕು ನಡೆಸುವ ಅನಿವಾರ್ಯತೆ ಇದೆ. ಹೀಗಾಗಿ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಗಂಭೀರ ಪ್ರಯತ್ನ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

Advertisement

ಹೌದು, ಜಿಲ್ಲೆಯ ಕೃಷ್ಣೆ, ಮಲಪ್ರಭೆ ಹಾಗೂ ಘಟಪ್ರಭಾ ನದಿ ಪಾತ್ರದ ಹಳ್ಳಿಗಳ ಜನರು, ನೀರಿನೊಂದಿಗೇ ಬದುಕು ನಡೆಸುವುದು ಜಿಲ್ಲೆಯ ಜನರ ಅನಿವಾರ್ಯತೆ. ಇದಕ್ಕೆ ಶಾಶ್ವತ ಪರಿಹಾರವೇ, ಆಲಮಟ್ಟಿ ಜಲಾಶಯವನ್ನು 524.256 ಮೀಟರ್‌ ಗೆ ಎತ್ತರಿಸುವ ಜತೆಗೆ ಮುಳುಗಡೆ ವ್ಯಾಪ್ತಿಗೆ ಬರುವ ಹಾಗೂ ನದಿ ಪಾತ್ರದ ಹಳ್ಳಿಗಳನ್ನು ಸಂಪೂರ್ಣ ಸ್ಥಳಾಂತರ ಮಾಡಬೇಕು ಎಂಬುದು ವಾಸ್ತವ ಸತ್ಯ.

ಆದರೆ, ಈಗಾಗಲೇ ಆಲಮಟ್ಟಿ ಜಲಾಶಯದ ಈಗಿನ 519.60 ಮೀಟರ್‌ ವ್ಯಾಪ್ತಿಯ ಮತ್ತು ನಾರಾಯಣಪುರ ಡ್ಯಾಂ ವ್ಯಾಪ್ತಿಯ ಮುಳುಗಡೆಯಾದ ಹಳ್ಳಿಗಳ ಜನರು, ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರಗೊಂಡಿಲ್ಲ. ಇದಕ್ಕೆ ಕಾರಣ, 519.60 ಮೀಟರ್‌ ವ್ಯಾಪ್ತಿಯಲ್ಲಿ ಸುಮಾರು 63ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮನೆ ಮುಳುಗಡೆಯಾದರೆ, ಹೊಲ ಮುಳುಗಿಲ್ಲ. ಹೊಲ ಮುಳುಗಡೆಯಾದರೆ, ಊರು ಮುಳುಗಿಲ್ಲ.

ಹೀಗಾಗಿ ಈ 63 ಹಳ್ಳಿಗಳ ಜನರು ಇಂದಿಗೂ ಆಯಾ ಮುಳುಗಡೆ ಗ್ರಾಮದಲ್ಲೇ ವಾಸಿಸುತ್ತಿದ್ದಾರೆ. ಈ ಸಮಸ್ಯೆ ಒಂದೆಡೆಯಾದರೆ, ಮುಳುಗಡೆ ಸಂತ್ರಸ್ತರಿಗಾಗಿ ನಿರ್ಮಿಸಿದ ಪುನರ್‌ ವಸತಿ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳೇ ಇಲ್ಲ. ಹೀಗಾಗಿ ಜನರು ಹಳ್ಳಿಗರು, ಪುನರ್‌ವಸತಿ ಕೇಂದ್ರಗಳತ್ತ ಮುಖ ಮಾಡದಿರಲು ಮುಖ್ಯ ಕಾರಣ ಎನ್ನಲಾಗಿದೆ.

ಮುಳುಗುವ ಹಳ್ಳಿಗಳು: ಜಿಲ್ಲೆಯ ಕೃಷ್ಣಾ ನದಿ ಪಾತ್ರದಲ್ಲಿ ಸುಮಾರು 3 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಹರಿದು ಬರುತ್ತಿದ್ದರೆ, ಸುಮಾರು 27ಕ್ಕೂ ಹೆಚ್ಚು ಹಳ್ಳಿಗಳು, ಭಾಗಶಃ ನೀರಿನಲ್ಲಿ ನಿಲ್ಲುತ್ತವೆ. ಅಂತಹ ಹಳ್ಳಿಗಳಲ್ಲಿ ಜಮಖಂಡಿ ತಾಲೂಕಿನ ಮೈಗೂರು, ಶೂರ್ಪಾಲಿ, ಮುತ್ತೂರ ಸಹಿತ ಹಲವು ಗ್ರಾಮಗಳಿವೆ. ಇನ್ನು ಘಟಪ್ರಭಾ ನದಿ ಪಾತ್ರದಲ್ಲಿ ಮಿರ್ಜಿ, ಸೋರಗಾಂವ, ಢವಳೇಶ್ವರ ಸಹಿತ ಹಲವು ಗ್ರಾಮಗಳ ಸುತ್ತಲೂ ನೀರು ಆವರಿಸಿಕೊಳ್ಳುತ್ತದೆ.

Advertisement

ಮತ್ತೆ ಕಟ್ಟೆಚ್ಚರ : ಮಂಗಳವಾರ ಕೃಷ್ಣಾ ನದಿಗೆ 2.10 ಲಕ್ಷ ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದರೆ, 1.70 ಲಕ್ಷ ಕ್ಯೂಸೆಕ್‌ ನೀರು ಹರಿದು ಬಿಡಲಾಗುತ್ತಿದೆ. ಕಳೆದ ವಾರ ಪ್ರವಾಹ ಬರುವ ಭೀತಿ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಬಿಡಲಾಯಿತು. ಹೀಗಾಗಿ ಹಿನ್ನೀರು ಪ್ರದೇಶ, ನದಿ ಪಾತ್ರದಲ್ಲಿ ಪ್ರವಾಹದಿಂದ ಹೆಚ್ಚಿನ ಹಾನಿ ಸಂಭವಿಸಲಿಲ್ಲ.

ಈ ಬಾರಿ ಆಲಮಟ್ಟಿ ಜಲಾಶಯದ ಅಧಿಕಾರಿಗಳು ನೀರು ಬಿಡುವ ವಿಷಯದಲ್ಲಿ ಮಹಾರಾಷ್ಟ್ರದ ಕೊಯ್ನಾ ಜಲಾಶಯದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನಿರ್ವಹಣೆ ಮಾಡಲಾಗಿದೆ. ಅಲ್ಲದೇ ನದಿ ಪಾತ್ರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿಯೊಂದು ಹಳ್ಳಿಯಲ್ಲೂ ಜಾಗೃತಿ ಮೂಡಲಾಗಿತ್ತು.

ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಮಳೆಯಿಂದ ಕೃಷಿ ಇಲಾಖೆಯಡಿ ಉದ್ದು, ಸೂರ್ಯಕಾಂತಿ, ಹೆಸರು, ಸೋಯಾಬಿನ್‌ ಸಹಿತ ಒಟ್ಟು 22,225 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, 2228.61 ಲಕ್ಷ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ತೋಟಗಾರಿಕೆ ಇಲಾಖೆಯಡಿ ಬರುವ ಬಾಳೆ, ಪಪ್ಪಾಯಿ ಬೆಳೆ 30.50 ಹೆಕ್ಟೇರ್‌ನ 5.34 ಲಕ್ಷದಷ್ಟು ಬೆಳೆ ಹಾನಿಯಾಗಿದೆ. ಲೋಕೋಪಯೋಗಿ ಇಲಾಖೆಯ 71.84 ಲಕ್ಷ ಹಾಗೂ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ 165.66 ಲಕ್ಷ ಮೊತ್ತದ ರಸ್ತೆ, ಸೇತುವೆ ಹಾನಿಯಾಗಿವೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧೀನದ 32 ಶಾಲೆಗಳ 89 ಶಾಲಾ ಕೊಠಡಿಗಳು ಹಾನಿಯಾಗಿದ್ದು, ಅಂದಾಜು 64 ಲಕ್ಷ ಹಾನಿ ಗುರುತಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 60 ಕಟ್ಟಡಗಳು, ಹೆಸ್ಕಾಂನ ಕಂಬ, ಟಿಸಿಗಳು, ಪಶು ಪಾಲನೆ, ಪಶು ಸಂಗೋಪನೆ ಇಲಾಖೆಯಡಿ ಸುಮಾರು 5 ಎಮ್ಮೆ, ಆಕಳು, 61 ಕುರಿಗಳು, ಕೈಮಗ್ಗ ಜವಳಿ ಇಲಾಖೆಯ 2 ಕೈಮಗ್ಗಗಳು, ಜಿಲ್ಲೆಯಾದ್ಯಂತ ಒಟ್ಟು 5 ಪೂರ್ಣ, 86 ಭಾಗಶಃ ಹಾಗೂ 443 ಸಿ ವರ್ಗದ ಮನೆಗಳು ಹಾನಿಯಾಗಿದ್ದು, ಇದಕ್ಕಾಗಿ 1.09 ಕೋಟಿ ಹಾನಿ ಅಂದಾಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next