ಕಲಬುರಗಿ: ಎರಡು ದಿನಗಳ ಕಾಲ ಕಲಬುರಗಿ ಮತ್ತು ಹೈದ್ರಾಬಾದ್‌ನಲ್ಲಿ ಮೂರ್ನಾಲ್ಕು ಆಸ್ಪತ್ರೆಗಳಿಗೆ ಅಲೆದರೂ ಯಾರೂ ಅವರನ್ನು ದಾಖಲಿಸಿಕೊಳ್ಳಲಿಲ್ಲ… ವೈದ್ಯರು ಸೂಕ್ತ ಸಮಯಕ್ಕೆ ಸ್ಪಂದಿಸಿ ಚಿಕಿತ್ಸೆ ನೀಡಿದ್ದರೆ ನಮ್ಮ ತಂದೆ ಬದುಕುಳಿಯುತ್ತಿದ್ದರು..! ಇದು ಕೊರೊನಾ ಸೋಂಕಿನಿಂದ ಮೃತಪಟ್ಟ 76 ವರ್ಷದ ವ್ಯಕ್ತಿಯ ಮಗನ ದೂರು.
ಶ್ವಾಸಕೋಶ ಹಾಗೂ ಇತರ ಕಾಯಿಲೆಗಳಿಂದ ಬಳಲುತ್ತಿದ್ದ ನಗರದ ಎಂ.ಎಸ್.ಕೆ.ಮಿಲ್ ಬಡಾವಣೆ ನಿವಾಸಿಯ ಸಾವಿಗೆ ಕೊರೊನಾ ಸೋಂಕು ಕಾರಣವೆಂದು ದೃಢಪಟ್ಟಿದೆ. ದೇಶದಲ್ಲಿ ಈ ಸೋಂಕಿಗೆ ಇದೇ ಮೊದಲ ಬಲಿಯಾಗಿದ್ದರಿಂದ ಎಲ್ಲೆಡೆ ಸಂಚಲನ, ಆತಂಕ ಉಂಟಾಗಿದೆ. ಈ ನಡುವೆ ತಮ್ಮ ತಂದೆ ಸಾವಿಗೆ ಆರೋಗ್ಯ ಇಲಾಖೆಯ ನಿರ್ಲಕ್ಷವೇ ಕಾರಣ ಎಂದು ಅವರ ಮಗ ವೈದ್ಯರ ಕಡೆ ಬೊಟ್ಟು ಮಾಡಿ ತೋರಿಸಿದ್ದು, ಚರ್ಚೆಗೆ ಗ್ರಾಸವಾಗಿದೆ. ಆದರೆ, ಈತನ ಆರೋಪವನ್ನು ಜಿಲ್ಲಾಡಳಿತ ತಳ್ಳಿ ಹಾಕಿದೆ.
ಮಗ ಹೇಳಿದ್ದೇನು?: ಉಮ್ರಾ ಯಾತ್ರೆಗೆಂದು ಸೌದಿ ಅರೇಬಿಯಾಗೆ ಹೋಗಿದ್ದ ತಂದೆ, ಫೆ.29ರಂದು ಮನೆಗೆ ಮರಳಿದ್ದರು. ನಾಲ್ಕೈದು ದಿನಗಳ ನಂತರ ಅವರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿತ್ತು. ಮಾ.8ರಂದು ಮಧ್ಯರಾತ್ರಿ ಆರೋಗ್ಯ ಮತ್ತಷ್ಟು ಹದಗೆಟ್ಟಿತು. ಮರುದಿನ ಬೆಳಗ್ಗೆ ವೈದ್ಯರೊಬ್ಬರನ್ನು ಮನೆಗೆ ಕರೆಸಿ ತಪಾಸಣೆ ಮಾಡಿಸಲಾಯಿತು. ಅವರು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು.
ತಕ್ಷಣವೇ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋದೆವು. ಅಲ್ಲಿ ರೋಗಿಯನ್ನು ನೋಡಿದ ಬಳಿಕ, ಬೆಡ್‌ಗಳು ಇಲ್ಲ ಎಂದು ಸಾಗ ಹಾಕಿದರು. ನಂತರ, ಮತ್ತೆ ಎರಡು ಆಸ್ಪತ್ರೆಗೆ ಹೋದಾಗಲೂ ಸೇರಿಸಿಕೊಳ್ಳಲಿಲ್ಲ. ಕೊನೆಗೆ, ಒಂದು ಖಾಸಗಿ ಆಸ್ಪತ್ರೆಯವರು ದಾಖಲಿಸಿಕೊಂಡರು. ಆದರೆ, ಅವರು ಕೂಡ ಕೆಲ ಹೊತ್ತಿನ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದ್‌ಗೆ ಕರೆದುಕೊಂಡು ಹೋಗುವಂತೆ ಒತ್ತಾಯಿಸಿದರು.
ಅಲ್ಲದೇ, ಆಗ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕು ಪತ್ತೆಗಾಗಿ ಪ್ರತ್ಯೇಕ ವಾರ್ಡ್ ಸ್ಥಾಪಿಸಿದ್ದನ್ನು ನಮಗೆ ಹೇಳಲಿಲ್ಲ. ಹೀಗಾಗಿ, ನಾವು ಮಾ.10ರಂದು ನಸುಕಿನಲ್ಲಿ ಹೈದ್ರಾಬಾದ್‌ಗೆ ಕರೆದುಕೊಂಡು ಹೋದೆವು. ಅಲ್ಲೂ ಮೂರ್ನಾಲ್ಕು ಆಸ್ಪತ್ರೆಗಳಲ್ಲಿ ತಂದೆಗೆ ಚಿಕಿತ್ಸೆ ನೀಡುವಂತೆ ಕೇಳಿಕೊಂಡರೂ ದಾಖಲಿಸಿಕೊಳ್ಳಲಿಲ್ಲ. ಆದ್ದರಿಂದ ತಂದೆಯನ್ನು ಕರೆದುಕೊಂಡು ಮಧ್ಯಾಹ್ನ ಎರಡು ಗಂಟೆವರೆಗೆ ಆ್ಯಂಬುಲೆನ್ಸ್‌ನಲ್ಲಿಯೇ ಸುತ್ತಾಡಿದೆವು.
ಹೈದ್ರಾಬಾದ್‌ನಿಂದ ವಾಪಸ್ ಅವರನ್ನು ಕಲಬುರಗಿಗೆ ಕರೆದುಕೊಂಡು ಬರುವಾಗ ಮಾರ್ಗ ಮಧ್ಯೆಯೇ ಮೃತಪಟ್ಟರು. ಕರ್ನಾಟಕದ ಗಡಿ ಭಾಗಕ್ಕೆ ಬರುತ್ತಿದ್ದಾಗ ಆರೋಗ್ಯ ಇಲಾಖೆಯ ಅಧಿಕಾರಿಗಳು ಮೃತದೇಹವನ್ನು ವಶಕ್ಕೆ ಪಡೆದು, ಜಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಬಂದರು ಎಂದು ತಿಳಿಸಿದ್ದಾರೆ.
ಕೊರೊನಾ ಸೋಂಕಿನಿಂದ ಮೃತರ ಸಹೋದರರೊಬ್ಬರು ಹೈದ್ರಾಬಾದ್‌ನಲ್ಲಿ ನೆಲೆಸಿದ್ದಾರೆ. ಈ ಮೊದಲು ಕೂಡ ಚಿಕಿತ್ಸೆಗೆಂದು ಆಗಾಗ ಹೈದ್ರಾಬಾದ್‌ಗೆ ಹೋಗುತ್ತಿದ್ದರು. ಮಾ.9ರಂದು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಾದಾಗ ವೈದ್ಯರ ಸಲಹೆ ಮೀರಿ ಕುಟುಂಬಸ್ಥರು ರೋಗಿಯನ್ನು ಹೈದ್ರಾಬಾದ್‌ಗೆ ಸಾಗಿಸಿದ್ದರು. ಆಗ ಕೊರೊನಾ ಸೋಂಕು ಇದೆಯೋ, ಇಲ್ಲವೋ ಎನ್ನುವ ಮಾಹಿತಿ ಕೂಡ ನಮಗೆ ಸಿಕ್ಕಿರಲಿಲ್ಲ. ಆದರೂ, ಮುನ್ನೆಚ್ಚರಿಕೆ ಕ್ರಮವಾಗಿ ಆ್ಯಂಬುಲೆನ್ಸ್ ವಾಹನದ ಸಂಖ್ಯೆ ಕಲೆ ಹಾಕಲಾಗಿತ್ತು.
-ಶರತ್ ಬಿ. ಜಿಲ್ಲಾಧಿಕಾರಿ, ಕಲಬುರಗಿ