ಬೆಂಗಳೂರು: ಸಹ ಜೀವನ (ಲಿವ್ ಇನ್ ರಿಲೇಶನ್ ಶಿಪ್) ನಡೆಸುತ್ತಿದ್ದ ಜೋಡಿ ಮಧ್ಯೆ ಜಗಳ ಉಂಟಾಗಿ ಇವರಿಗೆ ಜನಿಸಿದ 6 ವರ್ಷದ ಬಾಲಕನನ್ನು ಅಪಹರಿಸಿದ ತಂದೆ ಸೇರಿದಂತೆ ಮೂವರನ್ನು ಕೋಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಮೂಲದ ಹರಿಕೃಷ್ಣನ ಬಂಧಿತ.
ಕೊಲ್ಕಾತ್ತಾದ ಮಹಿಳೆ ಯೊಂದಿಗೆ ಹರಿಕೃಷ್ಣ ಹಲವು ವರ್ಷಗಳಿಂದ ಲಿನ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. 6 ವರ್ಷಗಳ ಹಿಂದೆ ಇಬ್ಬರಿಗೂ ಗಂಡು ಮಗು ಜನಿಸಿತ್ತು. ಈ ನಡುವೆ ಸಂಗಾತಿ ಜೊತೆಗೆ ಆರೋಪಿ ಹರಿಕೃಷ್ಣ ಜಗಳ ಮಾಡಿಕೊಂಡಿದ್ದ. ಮಗನ ವಿಚಾರವಾಗಿ ಹರಿಕೃಷ್ಣ ಹಾಗೂ ಮಗುವಿನ ತಾಯಿ ಕೋರ್ಟ್‌ಗೆ ಹೋಗಿದ್ದರು. ಕೋರ್ಟ್ ಷರತ್ತು ವಿಧಿಸಿ ಮಗನನ್ನು ತಾಯಿಗೆ ಒಪ್ಪಿಸಿತ್ತು. ಜೂ.16ರಂದು ಬೆಳಗ್ಗೆ ಪುತ್ರನನ್ನು ಪ್ರೇಯಸಿ ಶಾಲೆಗೆ ಬಿಡಲು ತೆರಳಿದ್ದಾಗ ಒಂದು ಆಟೋದಲ್ಲಿ ತಾನು ಹಾಗೂ ಇನ್ನೊಂದು ಆಟೋದಲ್ಲಿ ಇಬ್ಬರು ಮಹಿಳೆಯರ ಜತೆಗೆ ಹಿಂಬಾಲಿಸಿಕೊಂಡು ಬಂದಿದ್ದ. ಮಾರ್ಗಮಧ್ಯೆ ಕೊಡಿಗೆಹಳ್ಳಿ ಬಳಿ ಪ್ರೇಯಸಿ ಕೈಯಿಂದ ಮಗನನ್ನು ಕಸಿದುಕೊಂಡು ತಾನು ಬಂದಿದ್ದ ಆಟೋದಲ್ಲಿ ಪರಾರಿಯಾಗಿದ್ದ. ಮತ್ತೂಂದು ಆಟೋದಲ್ಲಿ ಬಂದಿದ್ದ ಮಹಿಳೆಯರು ಹಾಗೂ ಮಗುವಿನ ತಾಯಿ ಗಲಾಟೆ ಮಾಡಿಕೊಳ್ಳುತ್ತಿದ್ದರು. ಅದೇ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಹೊಯ್ಸಳ ಸಿಬ್ಬಂದಿ ಜಗಳ ಮಾಡುತ್ತಿರುವುದನ್ನು ಗಮನಿಸಿ ಬಾಲಕನ ತಾಯಿ ಸೇರಿದಂತೆ ಮೂವರೂ ಮಹಿಳೆಯರು ಹಾಗೂ ಆಟೋ ಚಾಲಕನನ್ನ ವಶಕ್ಕೆ ಪಡೆದು ಕೊಡಿಗೆಹಳ್ಳಿ ಠಾಣೆಗೆ ಕರೆ ತಂದಿದ್ದರು. ಹರಿಕೃಷ್ಣನ ಮಗನನ್ನು ಪೊಲೀಸರು ಆತನ ತಾಯಿಯ ಮಡಿಲಿಗೆ ಸೇರಿಸಿದ್ದಾರೆ.
ಮಗನನ್ನು ಕರೆದು ಊರೂರು ಸುತ್ತಾಟ: ಪೊಲೀಸರ ಕಣ್ತಪ್ಪಿಸಲು ಮಗನನ್ನು ಬಳ್ಳಾರಿ, ಕಲಬುರಗಿಗೆ ಕರೆದೊಯ್ದ ಹರಿಕೃಷ್ಣ ಆತನೊಂದಿಗೆ ಸುತ್ತಾಡುತ್ತಿದ್ದ. ಬಳಿಕ ಗೋವಾಗೆ ತೆರಳಿ ಅಲ್ಲಿ ಸುತ್ತಾಡುತ್ತಿದ್ದ. ಮತ್ತೂಂದೆಡೆ 2020ರಲ್ಲಿ ಹರಿಕೃಷ್ಣನ ತಂದೆಯ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ಹರಿಕೃಷ್ಣ ಆರೋಪಿಯಾಗಿದ್ದ ಎಂದು ತಿಳಿದು ಬಂದಿದೆ.