Advertisement
ಪುತ್ತೂರು: ಎರಡನೆಯ ಮಗಳ ಮುಖ ನೋಡಲು ಮೂರೇ ತಿಂಗಳಿರುವಾಗ ಯೋಧ ರಾಗಿದ್ದ ತಂದೆ ದೋಳ್ಪಾಡಿಯ ಪರಮೇಶ್ವರ ಗೌಡ ಅವರು ಭಾರತ ಮಾತೆಯ ರಕ್ಷಣೆ ಗೋಸ್ಕರ ಪ್ರಾಣ ಸಮರ್ಪಿಸಿ ಅಮರನಾದ ಕಥೆಯಿದು.
ದೋಳ್ಪಾಡಿ ಗ್ರಾಮದ ಕಟ್ಟ ನಿವಾಸಿ ಲಿಂಗಪ್ಪ ಗೌಡ ಮತ್ತು ಚೋಮಕ್ಕ ಅವರ ದ್ವಿತೀಯ ಪುತ್ರನಾಗಿರುವ ಪರಮೇಶ್ವರ ಗೌಡ 1963ರ ಎ. 7ರಂದು ಜನಿಸಿದರು. ಚಾರ್ವಾಕ, ಪುತ್ತೂರಿನ ಕೊಂಬೆಟ್ಟು ಸ.ಪ್ರೌ. ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಎನ್‌ಸಿಸಿ ಸೇರಿ ಕ್ಯಾಪ್ಟನ್ ಆಗಿದ್ದ ಅವರಿಗೆ ದೇಶ ಸೇವೆಯ ಬಗ್ಗೆ ವಿಶೇಷ ಆಸಕ್ತಿ ಮೂಡಿತ್ತು. 1983ರ ಜ. 27ರಂದು ಭಾರತೀಯ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್‌ನ 430ನೇ ಫೀಲ್ಡ್ ಕಂಪೆನಿಯ 203ನೇ ಎಂಜಿನಿಯ ರಿಂಗ್ ರೆಜಿಮೆಂಟಿನ ಯೋಧನಾಗಿ ಭೂ ಸೇನೆಗೆ ಆಯ್ಕೆಯಾದರು. ಬೆಂಗಳೂರಿನಲ್ಲಿ ತರಬೇತಿ ಪಡೆದು ಲೇಹ್, ಲಡಾಖ್, ಅಸ್ಸಾಂ, ರಾಜಸ್ಥಾನ, ಸೂರತ್‌ಗಢ ಮೊದಲಾದೆಡೆ ಸೇವೆ ಸಲ್ಲಿಸಿ ಭಡ್ತಿಗೊಂಡು ಹವಾಲ್ದಾರ್ ಆಗಿ ಜಮ್ಮುವಿನಲ್ಲಿ ಕರ್ತವ್ಯದಲ್ಲಿದ್ದರು.
Related Articles
1999ರಲ್ಲಿ ನಿವೃತ್ತಿ ಹೊಂದಬೇಕಿದ್ದರೂ ಭಾರತ- ಪಾಕಿಸ್ಥಾನದ ನಡುವೆ ಕಾರ್ಗಿಲ್ ಯುದ್ಧ ಪ್ರಾರಂಭ ಗೊಂಡ ಕಾರಣ ಸರಕಾರದ ನಿರ್ದೇಶನದಂತೆ ಸೈನ್ಯದಲ್ಲಿ ಸೇವೆ ಮುಂದುವರಿಸಿದರು. 2002 ಜೂ. 9ರಂದು ಜಮ್ಮುಕಾಶ್ಮೀರದ ಉಧಂಪುರ ಸಮೀಪದ ಕೆಹರಿಯಲ್ಲಿ ಪಾಕ್ ಶೆಲ್ ದಾಳಿಗೆ ಸಿಕ್ಕಿ ಪ್ರಾಣ ತ್ಯಾಗ ಮಾಡಿದರು. 18 ವರ್ಷಗಳ ದೇಶ ಸೇವೆಯಲ್ಲಿ “ಒಪಿ ವಿಜಯ್ ಮೆಡಲ್’ ಸಹಿತ ಹಲವು ಪ್ರಶಸ್ತಿಗಳು ಸಂದಿವೆ.
Advertisement
ಕರೆ ಬಂತು!ಪರಮೇಶ್ವರ ಹುತಾತ್ಮರಾದ ಸಂದರ್ಭದಲ್ಲಿ ಪತ್ನಿ ಪುಷ್ಪಾವತಿ 6 ತಿಂಗಳ ಗರ್ಭಿಣಿ. ಮೊದಲ ಮಗಳಿಗೆ 1.5 ವರ್ಷ. ಪತಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವಿಷಯ ಮನೆಗೆ ತಲುಪಿತ್ತು. ಎರಡೇ ದಿವಸದಲ್ಲಿ ಸೇನೆ, ಸರಕಾರದ ಸಕಲ ಗೌರವಗಳೊಂದಿಗೆ ಪಾರ್ಥಿವ ಶರೀರ ದೋಳ್ಪಾಡಿಗೆ ಬಂತು. ಮನೆ ಮಂದಿಯ ಜತೆಗೆ ಇಡೀ ಊರೇ ಕಣ್ಣಿರಿಟ್ಟಿತ್ತು ಎಂದು ಅಂದಿನ ದಿನಗಳನ್ನು ನೆನಪಿಸುತ್ತಾರೆ ಪತ್ನಿ ಪುಷ್ಪಾವತಿ. ಅಪ್ಪನ ಮುಖ ಕಂಡಿಲ್ಲ ಮಗಳು
ಅಂದು ತಂದೆ ಹುತಾತ್ಮನಾಗುವ ವೇಳೆಗೆ ತಾಯಿಯ ಗರ್ಭದೊಳಗಿದ್ದ ಅರ್ಪಿತಾ ಈಗ ತಾಯಿಗಿಂತ ಎತ್ತರಕ್ಕೆ ಬೆಳೆದು ನಿಂತಿದ್ದಾಳೆ. ಫೋಟೋದಲ್ಲಷ್ಟೇ ಅಪ್ಪನ ಮುಖ ನೋಡಿದ್ದ ಮಗಳಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ನೆನಪಿಗೆ ಅಪ್ಪನ ಸ್ಮಾರಕ ನಿರ್ಮಾಣ ಆಗುವುದಕ್ಕೆ ಖುಷಿಯಿದೆ. ಶೋಕೇಶ್ ಒಳಗಿರುವ ಸಮವಸ್ತ್ರಧಾರಿ ಅಪ್ಪನ ಭಾವಚಿತ್ರದ ಮೇಲೆ ಕೈಯ್ನಾಡಿಸುತ್ತಾ ದೇಶಕ್ಕಾಗಿ ನಮ್ಮಪ್ಪ ಹುತಾತ್ಮರಾದರು ಅನ್ನುವ ಅಭಿಮಾನ ವ್ಯಕ್ತಪಡಿಸುವ ಆಕೆಗೆ ತಾನೂ ಸೇನೆ ಸೇರಬೇಕೆಂಬ ಇಚ್ಛೆ ಇತ್ತು. ಆದರೆ ಅವಕಾಶ ಕೂಡಿ ಬರಲಿಲ್ಲ. ಪ್ರಸ್ತುತ ಬಿಎಸ್‌ಸಿ ಅಗ್ರಿಕಲ್ಚರ್ ವಿದ್ಯಾರ್ಥಿನಿ. ತಂದೆ ಹುತಾತ್ಮರಾಗುವಾಗ 1.5 ವರ್ಷವಾಗಿದ್ದ ಹಿರಿಯ ಪುತ್ರಿ ಅಖೀಲಾಗೂ ಅಪ್ಪನ ಮುಖ ನೋಡಿದ ನೆನಪಿಲ್ಲ. ಆಕೆಯೂ ಭಾವಚಿತ್ರದಲ್ಲೇ ಅಪ್ಪನನ್ನು ನೋಡಿ ನೆನಪಿಸಿಕೊಳ್ಳುತ್ತಾರೆ. ಪ್ರಸ್ತುತ ಪದವಿ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ. ಪತಿ ಹುತಾತ್ಮರಾಗುವ ವೇಳೆಗೆ ದೋಳ್ಪಾಡಿಯಲ್ಲಿ ಇದ್ದೆವು.
14 ವರ್ಷದ ಹಿಂದೆ ಪುತ್ತೂರಿನ ಮರೀಲಿನಲ್ಲಿ ಮನೆ ಮಾಡಿದ್ದೇವೆ. ದೋಳ್ಪಾಡಿಯಲ್ಲಿ 50 ಸೆಂಟ್ಸ್ ಜಾಗದಲ್ಲಿ ಸ್ವಲ್ಪ ಅಡಿಕೆ ಬೆಳೆಯುತ್ತದೆ. ಇಬ್ಬರು ಹೆಣ್ಣು ಮಕ್ಕಳು. ಅವರಿಗೆ ಉದ್ಯೋಗ ನೀಡುವ ಕೆಲಸವನ್ನು ಸರಕಾರ ಮಾಡಬೇಕು. ಯೋಧರ ವಿಶೇಷ ಸ್ಮಾರಕ ನಿರ್ಮಾಣದ ವಿಚಾರ ಖುಷಿ ತಂದಿದೆ. -ಪುಷ್ಪಾವತಿ, ದಿ| ಪರಮೇಶ್ವರ ಗೌಡ ಅವರ ಪತ್ನಿ. ಕಿರಣ್ ಪ್ರಸಾದ್ ಕುಂಡಡ್ಕ