ಬೆಂಗಳೂರು: ತಂದೆ ಮೇಲಿನ ದ್ವೇಷಕ್ಕೆ ಮೂರು ವರ್ಷದ ಮಗುವನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದ್ದು, ಅಪಹರಣಕ್ಕೊಳಗಾಗಿದ್ದ ಮಗುವನ್ನು ಉತ್ತರಪ್ರದೇಶದ ಮುರಾದಾಬಾದ್ನಲ್ಲಿ ರಕ್ಷಿಸಿದ ಹೆಣ್ಣೂರು ಪೊಲೀಸರು ಸುರಕ್ಷಿತವಾಗಿ ಪೋಷಕರಿಗೊಪ್ಪಿಸಿದ್ದಾರೆ.
ಆದರೆ, ಕಾರ್ಯಾಚರಣೆ ವೇಳೆ ಪೊಲೀಸರನ್ನು ಕಂಡ ಆರೋಪಿ ಶಂಶಾದ್ ಎಂಬಾತ ಮಗುವನ್ನು ತಳ್ಳಿ ಪರಾರಿಯಾಗಿದ್ದು, ಆತನ ಪತ್ತೆ ಕಾರ್ಯ ಮುಂದುವರಿದಿದೆ. ಹಣದ ವಿಚಾರ ಸಂಬಂಧ ನಿಂದಿಸಿದ್ದರು ಎಂದು ದ್ವೇಷ ಸಾಧಿಸುತ್ತಿದ್ದ ಆರೋಪಿ ಶಂಶಾದ್ ಏ.11ರಂದು ತನ್ನ ಸ್ನೇಹಿತ ಇಬಾದ್ ರೆಹಮತ್ ಅವರ ಮೂರು ವರ್ಷದ ಮಗನನ್ನು ಆಟವಾಡಿಸುವ ನೆಪದಲ್ಲಿ ಅಪಹರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪೈಂಟಿಂಗ್ ವೃತ್ತಿಯವರಾದ ಉತ್ತರಪ್ರದೇಶ ಮೂಲದ ಇಬಾದ್ ರೆಹಮತ್ ಮತ್ತು ಆರೋಪಿ ಶಂಶಾದ್ ಸ್ನೇಹಿತರಾಗಿದ್ದು, ಹೆಣ್ಣೂರು ವ್ಯಾಪ್ತಿಯಲ್ಲಿ ವಾಸ್ತವ್ಯ ಹೂಡಿದ್ದು, ಪೈಂಟಿಂಗ್ ಗುತ್ತಿಗೆ ಪಡೆದು ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಆಯೂಬ್ ಎಂಬುವರ ಮನೆಯ ಪೈಂಟಿಂಗ್ ಗುತ್ತಿಗೆ ಪಡೆದು ಕೆಲಸ ಮುಗಿಸಿದ್ದು, ಪೈಂಟಿಂಗ್‌ಗಾಗಿ ಶಂಶಾದ್ ಮನೆ ಮಾಲೀಕ ಅಯೂಬ್ ಅವರಿಂದ 20 ಸಾವಿರ ರೂಪಾಯಿ ಪಡೆದಿದ್ದ.
ಆದರೆ, ತಾನು ಕೇವಲ 10 ಸಾವಿರ ರೂ. ಮಾತ್ರ ಪಡೆದುಕೊಂಡಿರುವುದಾಗಿ ಇಬಾದ್ ರೆಹಮತ್‌ಗೆ ಸುಳ್ಳು ಹೇಳಿದ್ದ. ಇದರಿಂದ ಅನುಮಾನಗೊಂಡ ಇಬಾದ್, ಮನೆ ಮಾಲೀಕ ಅಯೂಬ್ ಅವರನ್ನು ವಿಚಾರಿಸಿದಾಗ 20 ಸಾವಿರ ರೂ. ಕೊಟ್ಟಿರುವುದು ತಿಳಿದಿದೆ. ಇದರಿಂದ ಆಕ್ರೋಶಗೊಂಡ ಇಬಾದ್ ಸ್ನೇಹಿತ ಶಂಶಾದ್‌ಗೆ ಕರೆ ಮಾಡಿ ನಿಂದಿಸಿದಲ್ಲದೆ, ಇನ್ನುಮುಂದೆ ಈ ರೀತಿ ಮಾಡದಂತೆ ಎಚ್ಚರಿಸಿದ್ದ. ಇದರಿಂದ ಕೋಪಗೊಂಡಿದ್ದ ಆರೋಪಿ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬಾದ್ ಮೇಲೆ ದ್ವೇಷ ಸಾಧಿಸುತ್ತಿದ್ದ ಆರೋಪಿ ಏ. 11ರಂದು ಕೆಲಸಕ್ಕೆ ಹೋಗದೆ ಮನೆಯಲ್ಲಿ ಇದ್ದ. ಕೆಲ ಹೊತ್ತಿನ ಬಳಿಕ ಇಬಾದ್ ಮನೆ ಬಳಿ ಹೋಗಿ ಮನೆಯಲ್ಲಿದ್ದ ಆತನ ಇಬ್ಬರು ಮಕ್ಕಳನ್ನು ಆಟವಾಡಿಸುವ ನೆಪದಲ್ಲಿ ಕರೆದುಕೊಂಡು ಹೋಗಿದ್ದ. ಕೆಲ ಹೊತ್ತಿನ ಬಳಿಕ ಮತ್ತೆ ವಾಪಸಾದ ಆತ ಹೆಣ್ಣು ಮಗುವನ್ನು ಮನೆ ಬಳಿ ಬಿಟ್ಟು ಗಂಡು ಮಗುವನ್ನು ಕರೆದೊಯ್ದಿದ್ದಾನೆ. ಹೀಗೆ ಶಂಶಾದ್‌ನೊಂದಿಗೆ ಹೋದ ಮಗು ಎಷ್ಟು ಹೊತ್ತಾದರೂ ವಾಪಸಾಗದ ಕಾರಣ ಗಾಬರಿಗೊಂಡ ಪೋಷಕರು ಹೆಣ್ಣೂರು ಠಾಣೆಗೆ ದೂರು ನೀಡಿದ್ದರು.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಶಂಶಾದ್ ಬಳಸುತ್ತಿದ್ದ ಮೊಬೈಲ್‌ನ ಸಿಡಿಆರ್(ಕಾಲ್ ಡಿಟೇಲ್ಸ್) ಪಡೆದು ಪರಿಶೀಲನೆ ನಡೆಸಿದಾಗ ಮೊದಲಿಗೆ ಯಶವಂತಪುರದಲ್ಲಿ ಪತ್ತೆಯಾಗಿದೆ. ಬಳಿಕ ದಾವಣಗೆರೆ, ಹುಬ್ಬಳ್ಳಿಯಲ್ಲಿ ಮೊಬೈಲ್‌ನ ನೆಟ್‌ವರ್ಕ್ ದೊರಕಿತ್ತು. ಕೊನೆಗೆ ಉತ್ತರಪ್ರದೇಶದ ಮುರದಾಬಾದ್‌ಗೆ ನಿಜಾಮುದ್ದೀನ್ ಎಕ್ಸ್ ಪ್ರಸ್ ಮೂಲಕ ಹೋಗಿರುವ ಮಾಹಿತಿ ಬಂದಿತ್ತು.
ಈ ನಡುವೆ ಆರೋಪಿ ಮಗುವಿನ ಪೋಷಕರಿಗೆ ಕರೆ ಮಾಡಿ, 50 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ. ಈ ಮಾಹಿತಿ ಪಡೆದ ಪೊಲೀಸರು, ಹಣದೊಂದಿಗೆ ಬರುತ್ತಿರುವುದಾಗಿ ಹೇಳಿ ಮುರದಾಬಾದ್‌ನ ಮಲ್ಲಕ್‌ಪುರಕ್ಕೆ ತೆರಳಿ ಶಂಶಾದ್‌ನನ್ನು ತಾವಿದ್ದಲ್ಲಿ ಕರೆಸಿಕೊಂಡರು. ಆದರೆ, ನಿಗದಿತ ಸ್ಥಳಕ್ಕೆ ಆಗಮಿಸಿದಾಗ ಇಬಾದ್ ಜತೆ ಪೊಲೀಸರನ್ನು ಕಂಡ ಆರೋಪಿ ಶಂಶಾದ್ ಮಗುವನ್ನು ತಳ್ಳಿ ಅಲ್ಲಿಂದ ಪರಾರಿಯಾಗಿದ್ದಾನೆ.