Advertisement

Food Poisoning: ಮಗು ಸಾವು, ಅಪ್ಪ- ಅಮ್ಮ ಅಸ್ವಸ್ಥ

10:14 AM Oct 08, 2024 | Team Udayavani |

ಬೆಂಗಳೂರು: ವಿಷ ಆಹಾರ ಸೇವಿಸಿ 5 ವರ್ಷದ ಬಾಲಕ ಮೃತಪಟ್ಟು, ಆತನ ತಂದೆ-ತಾಯಿ ಅಸ್ವಸ್ಥಗೊಂಡಿರುವ ಘಟನೆ ಕೆ.ಪಿ.ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಕೆ.ಪಿ.ಅಗ್ರಹಾರದ ಭುವನೇಶ್ವರಿನಗರ ನಿವಾಸಿ ಧೀರಜ್‌ (5) ಮೃತ ಬಾಲಕ. ಈತನ ತಂದೆ ಬಾಲರಾಜ್‌ ಮತ್ತು ತಾಯಿ ನಾಗಲಕ್ಷ್ಮೀ ಸಹ ವಿಷ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ತಂದೆ ಬಾಲರಾಜ್‌ ಸ್ವಿಗ್ಗಿ ಡೆಲಿವರಿ ಕೆಲಸ ಮಾಡುತ್ತಿದ್ದು, ತಾಯಿ ನಾಗಲಕ್ಷ್ಮೀ ಗೃಹಣಿಯಾಗಿದ್ದಾರೆ. ಇಬ್ಬರು ಮಕ್ಕಳ ಜತೆ ದಂಪತಿಭುವನೇಶ್ವರಿನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಭಾನುವಾರ ರಾತ್ರಿ ಬಾಲರಾಜ್‌ ದಂಪತಿ ಹಾಗೂ ಪುತ್ರ ಧೀರಜ್‌ ಊಟ ಮುಗಿಸಿ ನಿದ್ದೆಗೆ ಜಾರಿದ್ದಾರೆ. ಸೋಮವಾರ ಮುಂಜಾನೆ ಮೂವರಿಗೂ ಹೊಟ್ಟೆ ನೋವು ಕಾಣಿಸಿಕೊಂಡು ತೀವ್ರ ಅಸ್ವಸ್ಥರಾಗಿ ಚೀರಾಡಿದ್ದಾರೆ.

ಅವರ ಚೀರಾಟದ ಶಬ್ದ ಕೇಳಿದ ಸ್ಥಳೀಯರು ಕೂಡಲೇ ಮೂವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಸಿದ್ದಾರೆ. ಈ ವೇಳೆ ಪರೀಕ್ಷಿಸಿದ ವೈದ್ಯರು ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆಯೇ ಧೀರಜ್‌ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಇನ್ನು ತೀವ್ರ ಫ‌ುಡ್‌ ಪಾಯ್ಸನ್‌ನಿಂದಾಗಿ ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಬಾಲರಾಜ್‌ ಮತ್ತು ನಾಗಲಕ್ಷ್ಮೀಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಹೀಗಾಗಿ ಘಟನೆ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ ಫ‌ುಡ್‌ ಪಾಯಿಸನ್‌ನಿಂದ ಘಟನೆ ನಡೆದಿದೆ. ಅದು ಮನೆಯ ಆಹಾರವೇ, ಅಥವಾ ಹೊರಗಿನಿಂದ ತರಿಸಿರುವ ಆಹಾರವೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಫ್ರಿಡ್ಜ್ ಆಹಾರದಿಂದಲೇ ಅಸ್ವಸ್ಥ ಸಾಧ್ಯತೆ: 

Advertisement

ಬಾಲರಾಜ್‌ ದಂಪತಿ ತಮ್ಮ ಮಕ್ಕಳ ಪೈಕಿ ಮಗಳನ್ನು ಕೆಲ ದಿನಗಳ ಹಿಂದೆ ಅಜ್ಜಿ ಮನೆಗೆ ಕಳುಹಿಸಿದ್ದರು. ಹೀಗಾಗಿ ಮನೆಯಲ್ಲಿ ಮೂವರು ಮಾತ್ರ ಇದ್ದರು. ಪಿತೃಪಕ್ಷಕ್ಕೆ ಮಾಡಿದ್ದ ಆಹಾರವನ್ನು ಫ್ರಿಡ್ಜ್ ನಲ್ಲಿ ಇರಿಸಲಾಗಿತ್ತು. ಅದೇ ಆಹಾರವನ್ನು ಭಾನುವಾರ ರಾತ್ರಿ ಮೂವರೂ ಸೇವಿಸಿದ್ದರು. ಬಳಿಕ ಮೂವರು ಅಸ್ವಸ್ಥಗೊಂಡಿದ್ದಾರೆ ಎಂಬುದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ.

ಆನ್‌ಲೈನ್‌ನಲ್ಲಿ ಬಂದ ಕೇಕ್‌ ಕೂಡ ಸೇವನೆ:

ಮತ್ತೂಂದೆಡೆ ಫ‌ುಡ್‌ ಡೆಲಿವರಿ ಕೆಲಸ ಮಾಡುವ ಬಾಲರಾಜ್‌, ಗ್ರಾಹರೊಬ್ಬರು ಆನ್‌ಲೈನ್‌ ಕೇಕ್‌ ಆರ್ಡರ್‌ ಮಾಡಿ, ಕೆಲ ಹೊತ್ತಿನ ಬಳಿಕ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಅದನ್ನು ಮನೆಗೆ ತಂದು ಫ್ರಿಡ್ಜ್ನಲ್ಲಿ ಇರಿಸಿದ್ದರು. ಭಾನುವಾರ ರಾತ್ರಿ ಊಟ ಮಾಡುವಾಗ ಪತ್ನಿ, ಪುತ್ರನ ಜತೆಗೆ ಆ ಕೇಕ್‌ ಸಹ ಸೇವಿಸಿದ್ದರು. ಬಳಿಕ ಮೂವರೂ ಅಸ್ವಸ್ಥರಾಗಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆಯೂ ಇನ್ನು ಸ್ಪಷ್ಟತೆ ಇಲ್ಲ ಎಂದು ಮೂಲಗಳು ತಿಳಿಸಿವೆ.

ವಿಷ ಆಹಾರ ಸೇವನೆಯಿಂದ ಘಟನೆ:

ಮಗು ಸೇರಿದಂತೆ ಮೂವರನ್ನು ಪ್ರಾಥಮಿಕವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ವೈದ್ಯರು, ವಿಷ ಆಹಾರ ಸೇವನೆಯಿಂದ ಅಸ್ವಸ್ಥರಾಗಿದ್ದಾರೆ. ಈ ಪೈಕಿ ಧೀರಜ್‌ ಮೃತಪಟ್ಟಿರುವುದು ಖಚಿತಪಟ್ಟಿದೆ. ಮೂವರು ಸೇವಿಸಿದ್ದ ಆಹಾರಗಳ ಮಾದರಿಯನ್ನು ಸಂಗ್ರಹಿಸಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ಕೆ.ಪಿ. ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಆಹಾರ ಸೇವನೆಯಿಂದ 5 ವರ್ಷದ ಬಾಲಕ ಧೀರಜ್‌ ಮೃತಪಟ್ಟಿರುವುದು ಆಸ್ಪತ್ರೆ ನೀಡಿರುವ ಎಂಎಲ್‌ಸಿ ವರದಿಯಲ್ಲಿ ದೃಢಪಟ್ಟಿದೆ. ಹಳಸಿದ ಆಹಾರ ಸೇವನೆ ಬಳಿಕ ಅದು ವಿಷ ಆಹಾರವಾಗಿ ದಂಪತಿ ಅಸ್ವಸ್ಥತೆಗೆ ಕಾರಣವಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.-ಗಿರೀಶ್‌, ಎಸ್‌.  ಪಶ್ಚಿಮ ವಿಭಾಗದ ಡಿಸಿಪಿ

Advertisement

Udayavani is now on Telegram. Click here to join our channel and stay updated with the latest news.

Next