ಡಾ| ಗುರುರಾಜ ಭಟ್ಟರ ಮೊದಲ ಪುಸ್ತಕ “ಆಂಟಿಕ್ವಿಟೀಸ್ ಆಫ್ ಸೌತ್‌ಕೆನರಾ’ 1969 ರಲ್ಲಿ ಪ್ರಕಟವಾಯಿತು. 1975 ರಲ್ಲಿ ಅವರ ಮ್ಯಾಗ್ನಂ ಒಪೆಸ್ ಎಂದು ಪರಿಗಣಿಸಲ್ಪಡುವ “ಸ್ಟಡೀಸ್ ಇನ್ ತುಳುವ ಹಿಸ್ಟರಿ ಆಂಡ್ ಕಲ್ಚರ್’ ಪ್ರಕಾಶನಗೊಂಡಿತು.
Advertisement
ತುಳುನಾಡಿನ ಸುಮಾರು 2,000 ವರ್ಷಗಳ ಇತಿಹಾಸವನ್ನು ಕಟ್ಟಿಕೊಟ್ಟ ಮೇರು ಕೃತಿ. ಡಾ| ಭಟ್ಟರು ಗುರುವಾಗಿ, ಬೋಧಕನಾಗಿ ಇತಿಹಾಸ ವಿಷಯದತ್ತ ವಿದ್ಯಾರ್ಥಿಗಳನ್ನು ಆಕರ್ಷಿಸಿದವರು. ಓರ್ವ ವ್ಯಕ್ತಿಯಾಗಿ ಶ್ರಮಜೀವಿ, ಸುಸಂಸ್ಕೃತ ಸಮಾಜಕ್ಕೆ ಭೂಷಣಪ್ರಾಯರು. ಸಂಶೋಧನೆ ನೆಲೆಯಲ್ಲಿ ಅವರೋರ್ವ ಸಾಮಾಜಿಕ ಚರಿತ್ರೆಗಾರ.
“ರಾಷ್ಟ್ರದ ರಾಜಕೀಯದಲ್ಲಿ ಸ್ಥಿತ್ಯಂತರಗಳಾದಾಗ ವಾಸ್ತವ ಇತಿಹಾಸವು ಬದಲಾಗಿ, ಬದಲಾದದ್ದೇ ಇತಿಹಾಸವಾಗುತ್ತದೆ ಎಂಬುದೇ ಇತಿಹಾಸದ ಬಹುದೊಡ್ಡ ವ್ಯಂಗ್ಯ’ ಎಂದಿದ್ದರು. ಜಿಲ್ಲೆಯಲ್ಲಿನ ಹಿಂದೂ ದೇವಾಲಯ, ಅಲ್ಲಿ ದೊರಕಿದ ಶಾಸನ, ಸ್ಮಾರಕದ ಅವಶೇಷಗಳನ್ನು ಪರೀಕ್ಷಿಸಿ, ಇದು ಒಂದು ಜಿನ ದೇವಾಲಯ, ಭೈರವ ರಾಜನ ಆಳ್ವಿಕೆಯಲ್ಲಿ ಕಟ್ಟಿದ್ದು, ರಾಜಕೀಯ ಮೇಲಾಟಗಳು ನಡೆದಾಗ ಅದು ಹಿಂದೂ ದೇವಾಲಯವಾಗಿದ್ದಿರಬಹುದು ಎಂಬ ಅವರ ಹೇಳಿಕೆಗೆ ಆಕ್ರೋಶ ಉಂಟಾಗಿತ್ತು. ಅವೆಲ್ಲವನ್ನೂ ಗಂಭೀರವಾಗಿ ಪರಿಗಣಿಸದ ಭಟ್ಟರು ತಮ್ಮದು ಸಾಧಾರ ಪ್ರತಿಪಾದನೆ ಎಂದು ಹೇಳುತ್ತಾ ಮೌನಿಯಾಗುತ್ತಿದ್ದರು!
Related Articles
ಜಿಲ್ಲೆಯ ಯಾವ ದೇವಸ್ಥಾನಗಳಿಗೆ ಹೋದರೂ ಗುರುರಾಜ ಭಟ್ಟರ ನೆನಪು ಹಸುರು. ಭಟ್ಟರು ಇಲ್ಲಿಗೆ ಬಂದಿದ್ದರು ಎನ್ನುತ್ತಾರೆ ಅಲ್ಲಿನ ಜನ. ಅವರು ತುಳು ಅಪ್ಪೆಯನ್ನು ತುಳು ಜೋಕುಲೆಗೆ ಪರಿಚಯಿಸಿದ ತುಳು ಅಪ್ಪೆನ ಮೋಕೆದ ಮಗೆ! ಅವರ ಅವಿರತ ಸಂಶೋಧನೆಯ ಫಲವಾಗಿ ಇಂದು ನಮ್ಮ ಕೆನರಾ ಜಿಲ್ಲೆಗಳ ಚಾರಿತ್ರಿಕ, ಸಾಂಸ್ಕೃತಿಕ, ಧಾರ್ಮಿಕ ಇತಿಹಾಸದ ಪರಿಚಯವಾಗಿದೆ. ಚರಿತ್ರೆ ಸಾಯುವುದಿಲ್ಲ ಅಂತೆಯೇ ಚರಿತ್ರೆಕಾರನೂ. . . ಎಂಬ ಮಾತಿನಂತೆ ಗುರುರಾಜ ಭಟ್ಟರು ಚಿರಂಜೀವಿ. ಅವರು ಅಮರ, ಅವರ ಕೃತಿಗಳೂ ಅಮರ.
Advertisement
– ಜಲಂಚಾರು ರಘುಪತಿ ತಂತ್ರಿ