Advertisement
ಹಿರಿಯ ನಿರ್ದೇಶಕ ಭಗವಾನ್ ಅವರು ಎರಡು ದಶಕಗಳ ಬಳಿಕ ನಿರ್ದೇಶಿಸಿರುವ ಚಿತ್ರವಿದು. ಅದರಲ್ಲೂ ಅವರ ವೃತ್ತಿ ಜೀವನದ 50 ನೇ ಚಿತ್ರ ಎಂಬುದು ವಿಶೇಷ. ಆ ವಿಶೇಷತೆ ಅವರ “ಆಡುವ ಗೊಂಬೆ’ಯಾಟದಲ್ಲಿ ಒಂದಷ್ಟು ಇದೆ ಎಂಬುದೇ ಸಮಾಧಾನ. ಚಿತ್ರ ನೋಡಿದವರಿಗೆ ಹಾಗೊಮ್ಮೆ ಅವರ ನಿರ್ದೇಶನದ ಹಳೆಯ ಚಿತ್ರಗಳ ಛಾಯೆ ಕಾಣಿಸಬಹುದು. ಹಾಗಂತ, ನಿರ್ದೇಶಕರು ಹಳೆಯ ಕಥೆಗೆ ಮಾರು ಹೋಗಿದ್ದಾರೆ ಅಂತಲ್ಲ.
Related Articles
Advertisement
ಮುಂದೇನಾಗುತ್ತೆ ಎಂಬ ಸಣ್ಣ ಪ್ರಶ್ನೆಯಿಂದಲೇ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ಅದರ ಜೊತೆಗೆ ಆಯ್ಕೆ ಮಾಡಿಕೊಂಡಿರುವ ಪಾತ್ರಗಳು ಸಹ, ನಿರ್ದೇಶಕರ ಕಲ್ಪನೆಗೆ ಮೋಸ ಮಾಡಿಲ್ಲ. ಹಾಗಾಗಿ, ತೆರೆಯ ಮೇಲೆ ಆಡುವ ಪಾತ್ರಗಳ ಆಟ ನೋಡುಗರಿಗೆ ಎಲ್ಲೂ ಬೋರ್ ಎನಿಸದಷ್ಟರ ಮಟ್ಟಿಗೆ ಚಿತ್ರವಿದೆ. ಅಲ್ಲಲ್ಲಿ ವೇಗ ಕಡಿಮೆಯಾಯ್ತು ಅನ್ನುವ ಹೊತ್ತಿಗೆ ಚೆಂದದ ಹಾಡುಗಳು ಕಾಣಿಸಿಕೊಂಡು ಒಂದಷ್ಟು ವೇಗಮಿತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ.
ಅಲ್ಲಲ್ಲಿ ತಪ್ಪುಗಳಿದ್ದರೂ ಸಂಕಲನದ ಕೆಲಸ ಆ ಸಣ್ಣಪುಟ್ಟ ತಪ್ಪುಗಳನ್ನು ಬದಿಗೊತ್ತಿ ನಿಲ್ಲಿಸುತ್ತದೆ. ಅಪ್ಪ ಅಮ್ಮನ ಪ್ರೀತಿ ಕಾಣದ ಮಾಧವನಿಗೆ ಅಕ್ಕ ಮತ್ತು ಭಾವನೇ ತನ್ನ ಪ್ರಪಂಚ. ದೆಹಲಿಯಲ್ಲಿ ಕೆಲಸ ಅರಸಿ ಹೊರಟ ಮಾಧವ ಅಲ್ಲಿ ಹುಡುಗಿಯೊಬ್ಬಳ ಪ್ರೀತಿಗೆ ಸಿಲುಕುತ್ತಾನೆ. ಅಷ್ಟರೊಳಗೆ ಅಕ್ಕನ ಮನೆಗೆ ಹಿಂದಿರುಗುವ ಮಾಧವನಿಗೆ, ತನ್ನ ಅಕ್ಕ, ಮೊದಲ ಮಗಳನ್ನು ಮದುವೆ ಆಗಬೇಕು ಎಂಬ ಆಸೆ ವ್ಯಕ್ತಪಡಿಸುತ್ತಾಳೆ. ಅಕ್ಕನ ಮಾತು ಮೀರದ ಮಾಧವ ಮದುವೆಗೆ ಒಪ್ಪುತ್ತಾನೆ. ಮದ್ವೆ ಹಿಂದಿನ ರಾತ್ರಿ ಮದುವೆ ಹೆಣ್ಣು ಮಾಯ.
ಮನೆಯ ಗೌರವ ಹಾಳಾಗುತ್ತೆ ಎಂದು ಭಯಪಡುವ ಮಾಧವನ ಅಕ್ಕ, ತನ್ನ ಎರಡನೆ ಮಗಳನ್ನು ಕೈ ಹಿಡಿಯುವಂತೆ ಮನವಿ ಮಾಡುತ್ತಾಳೆ. ಅಕ್ಕನ ಆಸೆಯಂತೆ ಮದುವೆ ನಡೆದು ಹೋಗುತ್ತೆ. ಆಮೇಲೆ ಅಕ್ಕನ ಎರಡನೇ ಮಗಳು ಸಹ ಮಾಧವನಿಗೆ ಕೈ ಕೊಡ್ತಾಳೆ. ಕೊನೆಗೊಂದು ಕೊಲೆಯ ಅಪವಾದಕ್ಕೆ ಮಾಧವ ಸಿಲುಕುತ್ತಾನೆ. ಇವೆಲ್ಲದರ ನಡುವೆ, ಅಕ್ಕನೇ ತಮ್ಮನ ವಿರುದ್ಧ ನಿಲ್ಲುತ್ತಾಳೆ. ಮುಂದೆ ಮಾಧವನ ಸ್ಥಿತಿ ಏನಾಗುತ್ತೆ, ಅಕ್ಕ, ಭಾವ ಅವನನ್ನು ಒಪ್ಪುತ್ತಾರಾ ಇಲ್ಲವಾ ಅನ್ನೋದೇ ಸಸ್ಪೆನ್ಸ್.
ಕುತುಹಲವಿದ್ದರೆ, ಭಗವಾನ್ ಗೊಂಬೆ ಆಟವನ್ನೊಮ್ಮೆ ನೋಡಲ್ಲಡ್ಡಿಯಿಲ್ಲ. ಸಂಚಾರಿ ವಿಜಯ್ ನಟನೆಯಲ್ಲಿ ಗಮನಸೆಳೆದರೆ, ಅನಂತ್‌ನಾಗ್, ಸುಧಾಬೆಳವಾಡಿ ಅವರು ಸಹ ನೆನಪಲ್ಲುಳಿಯುತ್ತಾರೆ. ಉಳಿದಂತೆ ರಿಶಿತಾ, ನಿರೂಷಾ, ದಿಶಾ ನಿರ್ದೇಶಕರ ಕಲ್ಪನೆಗೆ ಮೋಸ ಮಾಡಿಲ್ಲ. ಹೇಮಂತ್ ಕುಮಾರ್ ಸಂಗೀತದಲ್ಲಿ “ಪಿಸು ಮಾತಿಗೆ’ “ಆಡಿಸಿ ನೋಡು ಬೀಳಿಸಿ ನೋಡು ಗೊಂಬೆಗೆ ಏನಾಗದು’, “ಓ ಮದನಾ ಹರೆಯ ಅರಳುತ್ತಿದೆ..’ ಹಾಡುಗಳು ಗುನುಗುವಂತಿವೆ. ಹಿನ್ನೆಲೆ ಸಂಗೀತ ಪೂರಕವಾಗಿಲ್ಲ. ಜಬೇಜ್ ಕೆ.ಗಣೇಶ್ ಕ್ಯಾಮೆರಾದಲ್ಲಿ ಗೊಂಬೆಯಾಟದ ಸೊಗಸಿದೆ.
ಚಿತ್ರ: ಆಡುವ ಗೊಂಬೆನಿರ್ಮಾಣ: ಎ.ಶಿವಪ್ಪ, ಕೆ.ವೇಣುಗೋಪಾಲ
ನಿರ್ದೇಶನ: ದೊರೆ-ಭಗವಾನ್
ತಾರಾಗಣ: ಸಂಚಾರಿ ವಿಜಯ್, ಅನಂತ್‌ನಾಗ್, ಸುಧಾ ಬೆಳವಾಡಿ, ರಿಶಿತಾ ಮಲ್ನಾಡ್, ನಿರೂಷಾ ಶೆಟ್ಟಿ, ದಿಶಾ ಕೃಷ್ಣಯ್ಯ ಇತರರು. * ವಿಜಯ್ ಭರಮಸಾಗರ