ನರಗುಂದ: ಇದೇ ಆ.15ರೊಳಗೆ ‘ಮಹದಾಯಿ ರೈತರ ನಡಿಗೆ ರಾಜಭವನ ಕಡೆಗೆ’ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ತಿಳಿಸಿದ್ದಾರೆ.
ಮಹದಾಯಿ ಹೋರಾಟ ವೇದಿಕೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದಕ್ಕಾಗಿ ಸುಮಾರು 500ರಿಂದ ಒಂದು ಸಾವಿರದಷ್ಟು ರೈತರೊಂದಿಗೆ ರೈಲ್ವೆ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಾಗುವುದು ಎಂದರು.
ರಾಜ್ಯಪಾಲರ ಭೇಟಿಗೆ ಅವಕಾಶ ಒದಗಿಸಿಕೊಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಜು.16ರಂದೇ ವೇದಿಕೆಯಲ್ಲಿ ಖುದ್ದಾಗಿ ಮನವಿ ಪತ್ರ ನೀಡಲಾಗಿದ್ದು, ಜು.30ರಂದು ಮತ್ತೂಂದು ಬಾರಿ ಮನವಿ ಸಲ್ಲಿಸಲಾಗಿದೆ. ಇದುವರೆಗೆ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ. ಆದ್ದರಿಂದ ಈ ನಿರ್ಧಾರ ಕೈಗೊಂಡಿದ್ದೇವೆ ಎಂದರು.
‘ಬೆಂಗಳೂರು ಚಲೋ’ಗೆ ಮಹದಾಯಿ ಹೋರಾಟದ ವೃದ್ಧರು ಹಾಗೂ ಮಹಿಳೆಯರು ಬರುವುದು ಬೇಡ ಎಂದು ನಿರ್ಣಯ ಕೈಗೊಳ್ಳಲಾಗಿದೆ. ಈ ಚಲೋಗೆ ಯಾವುದೇ ರಾಜಕೀಯ ಪಕ್ಷಗಳ ಮುಖಂಡರು ಪಕ್ಷದ ಚೌಕಟ್ಟಿನಲ್ಲಿ ಬೆಂಬಲಿಸುವುದು ಬೇಡ. ಸಮಸ್ತ ರೈತ ಬಾಂಧವರು ಕೈಜೋಡಿಸಬೇಕು ಎಂದರು.
ಆದೇಶ ಪ್ರಶ್ನಿಸುವ ಹಕ್ಕಿಲ್ಲ: ನ್ಯಾಯಾಧಿಕರಣ ಮಹದಾಯಿ ನದಿ ನೀರು ಹಂಚಿಕೆ ಮಾಡಿದ್ದನ್ನು ಪ್ರಶ್ನಿಸುವ ಹಕ್ಕು ಯಾವ ರಾಜ್ಯಕ್ಕೂ ಇಲ್ಲ. ಹಂಚಿಕೆಯಾದ ನೀರಿನ ಸದ್ಬಳಕೆಗೆ ಕ್ರಿಯಾಯೋಜನೆ ರೂಪಿಸಿದ ಬಳಿಕ ಹೆಚ್ಚಿನ ನೀರಿನ ಬೇಡಿಕೆಗಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದು. ಹೀಗಾಗಿ ಯೋಜನೆ ಅನುಷ್ಠಾನಕ್ಕೆ ಯಾವುದೇ ಅಡೆತಡೆಯಿಲ್ಲ. ಕೇಂದ್ರ ಸರ್ಕಾರ ಕೂಡಲೇ ಅಧಿಸೂಚನೆ ಹೊರಡಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಡಿಪಿಆರ್ ಸಲ್ಲಿಸಿದ ಮಾಹಿತಿಯಿದೆ. ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರ ಮತ್ತು ನಾಡಿನ ಎಲ್ಲ ಸಂಸದರು ಪಕ್ಷಭೇದ ಮರೆತು ಕೇಂದ್ರಕ್ಕೆ ಒತ್ತಡ ಹೇರಬೇಕು. ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳು ಸೇರಿದಂತೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇದ್ದುದರಿಂದ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುತುವರ್ಜಿ ವಹಿಸಬೇಕು ಎಂದು ಆಗ್ರಹಿಸಿದರು.