ಮೈಸೂರು: ಚಳವಳಿ ಹಾಗು ರಾಜಕಾರಣದ ನಡುವೆ ಸಂಬಂಧ ಇರಬೇಕಿತ್ತುಆದರೆ ವಾಸ್ತವದಲ್ಲಿ ಹಾಗಾಗಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭಾನುವಾರ ಹೇಳಿಕೆ ನೀಡಿದ್ದಾರೆ.
ರೈತ ಸಮಾವೇಶದಲ್ಲಿ ಮಾತನಾಡಿದ ಅವರು, ಆಹಾರ ಕೊಂಡುಕೊಂಡವನ ಜೇಬು ಭರ್ತಿಯಾಗಿದೆ.ಆಹಾರ ಉತ್ಪಾದನೆ ಮಾಡಿದ ರೈತನ ಜೇಬು ಖಾಲಿಯಾಗಿದೆ. ಉತ್ಪಾದನೆ ಕಡಿಮೆ ಆದರೂ ಸಮಸ್ಯೆ, ಹೆಚ್ಚಾದರೂ ಸಮಸ್ಯೆಯಾಗಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ಆಹಾರ ಉತ್ಪಾದನೆ ಜಾಸ್ತಿಯಾಗಿದೆ ಎಂದರು.
ಕೃಷಿ ಮತ್ತು ರೈತನ ಮೇಲೆ ನಮ್ಮ ಲಕ್ಷ್ಯ ಇರಬೇಕು. ರೈತರ ಆದಾಯ ಹೆಚ್ಚಾದರೆ ರೈತಾಪಿ ವರ್ಗದ ಸ್ಥಿತಿ ಸುಧಾರಿಸಲಿದೆ. ಕೇವಲ ಕೃಷಿಯ ಆದಾಯದಿಂದ ರೈತನ ಬದುಕು ಹಸನಾಗುತ್ತಿಲ್ಲಹಾಗಾಗಿ ಇತರ ಮೂಲಗಳಿಂದ ರೈತರ ಆದಾಯ ಹೆಚ್ಚಿಸುವ ಚಿಂತನೆಯನ್ನು ಸರ್ಕಾರ ಮಾಡುತ್ತಿದೆ ಎಂದರು.
ಬೆಳೆ ನಿಯಂತ್ರಣ, ಬೆಲೆ ನಿಗಧಿ ಬಹು ದೊಡ್ಡ ಸಮಸ್ಯೆಯಾಗಿದೆ. ಡಬ್ಯ್ಲುಟಿಒ ಒಪ್ಪಂದಕ್ಕೆ ಸಹಿ ಹಾಕಿದ ಪರಿಣಾಮ ನಮ್ಮ ಹಣೆ ಬರಹ ಬದಲಾಯಿತು.ಈ ರೀತಿಯ ಒಪ್ಪಂದಗಳಿಗೆ ಸಹಿ ಹಾಕಿದಾಗ ದೂರಗಾಮಿ ಪರಿಣಾಮಗಳು ಬೀರುತ್ತವೆ. ಇದೆಲ್ಲದರ ಪರಿಣಾಮ ಸಾಲದ ಸಂಕೋಲೆಯಲ್ಲಿ ರೈತ ಸಿಲುಕಿದ್ದಾನೆ. ಅಂತರರಾಷ್ಟ್ರೀಯ ಮಾರುಕಟ್ಟೆ ನಿಯಂತ್ರಣ ವ್ಯವಸ್ಥೆಯಿಂದ ಹೊರ ಬಂದರೆ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು.
ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ. ಮೈಷುಗರ್ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಶ್ರೀರಾಮ ಸಕ್ಕರೆ ಕಾರ್ಖಾನೆಯ ಪುನರಾರಂಭಕ್ಕೆ ಎದುರಾಗಿರುವ ತಾಂತ್ರಿಕ ಸಮಸ್ಯೆ ಬಗೆಹರಿಸಲು ಸಹ ಕ್ರಮ ಕೈಗೊಳ್ಳಲಾಗುವುದು ಎಂದರು.
ರೈತರ ಪರ ರಾಜ್ಯ ಸರ್ಕಾರ ಗಟ್ಟಿಯಾಗಿ ನಿಲ್ಲಲಿದೆ. ರೈತರ ಧ್ವನಿಗೆ ನಾವು ಧ್ವನಿಯಾಗಲಿದ್ದೇವೆ ಎಂದರು.