ಶಹಾಬಾದ: ಹೋಬಳಿ ವಲಯದಲ್ಲಿ ಹೊಲ ಹದಮಾಡಿಕೊಂಡು ಬಿತ್ತನೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವ ರೈತರಿಗೆ ಮುಂಗಾರು ಮಳೆ ಆಗಮನ ಸಂತಸ ಮೂಡಿಸಿದೆ. ನಗರದ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಹೆಸರು, ತೊಗರಿ, ಜೋಳ ಬೆಳೆಯಲು ಯೋಗ್ಯವಾದ ಭೂಮಿ ಇದೆ.
ಹೋಬಳಿ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಸರು ಹೆಚ್ಚಾಗಿ ಬೆಳೆಯುತ್ತಾರೆ. ಹವಾಮಾನ ಇಲಾಖೆ ವರದಿಯಂತೆ ಈ ಬಾರಿ ಉತ್ತಮ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ. ಅದೇ ರೀತಿ ಮಳೆಯಾದರೆ ಬಂಪರ್ ಬೆಳೆ ಕಾಣುವ ಸಾಧ್ಯತೆ ಇದೆ. ಕಳೆದ ವರ್ಷ ಅಗತ್ಯಕ್ಕಿಂತ ಹೆಚ್ಚಿನ ಮಳೆ ಆಗಿದ್ದರಿಂದ ನದಿ ತೀರದ ನೆರೆ ಹಾವಳಿಯಿಂದ ಇಲ್ಲಿನ ರೈತರು ತೀವ್ರ ಸಂಕಷ್ಟ ಎದುರಿಸಿದ್ದರು.
ಈ ಸಲ ಮುಂಗಾರು ಹಂಗಾಮಿನಲ್ಲಿ ಮಳೆರಾಯ ಮುನಿಸಿಕೊಳ್ಳದೆ ಇದ್ದರೆ ರೈತರ ಮೊಗದಲ್ಲಿ ಒಂದಿಷ್ಟು ಸಂತೋಷ ಕಾಣಬಹುದು. ಶಹಾಬಾದ ರೈತ ಸಂಪರ್ಕ ವಲಯದಲ್ಲಿ ಬಿತ್ತನೆಗೆ ಬೇಕಾದ ಬೀಜ, ರಸಗೊಬ್ಬರಗಳ ದಾಸ್ತಾನು ಮಾಡಲಾಗಿದೆ. ಮುಂಗಾರು ಮಳೆ ಪ್ರಾರಂಭವಾಗಿ ಭೂಮಿ ಹಸಿಯಾಗಿದೆ. ಸದ್ಯ ಬಿತ್ತನೆ ಮಾಡುವುದೊಂದೆ ಕೆಲಸ ಎಂದು ಹೇಳುತ್ತಾರೆ ಇಲ್ಲಿನ ರೈತ ಸದಾನಂದ ಕುಂಬಾರ ಹಾಗೂ ಮತ್ತಿತರರು.
ಬಿತ್ತನೆ ಬೀಜ ಲಭ್ಯ: ನಗರದ ರೈತ ಸಂಪರ್ಕ ಕೇಂದ್ರದಲ್ಲಿ ತೊಗರಿ, ಹೆಸರು, ಉದ್ದು ಬೀಜ ಹಾಗೂ ಪೋಷಕಾಂಶದ ರಸಗೊಬ್ಬರ ವಿತರಿಸಲಾಗುತ್ತಿದೆ. ಬಿತ್ತನೆ ಬೀಜ ಸೇರಿದಂತೆ ಹಲವು ಬೆಳೆಗಳ ಬೀಜದ ದಾಸ್ತಾನು ಮತ್ತು ಲಘು ಪೋಷಕಾಂಶ (ಪಿಎಸ್‌ಬಿ, ಜಿಂಕ್ ಸಲ ರ್, ಜಿಪ್ಸಂ, ಅಗ್ರಿ ಗೋಲ್ಡ್ ಹಾಗೂ ಎರೆಹುಳು ಗೊಬ್ಬರ) ವಿತರಣೆ ಮಾಡಲಾಗುತ್ತಿದೆ.
ಶಹಾಬಾದ ಕೃಷಿ ವಲಯದ ಹೊನಗುಂಟಾ, ತೊನಸನಹಳ್ಳಿ(ಎಸ್), ಮರತೂರ, ಭಂಕೂರ, ಮಾಲಗತ್ತಿ, ಇಂಗಳಗಿ, ಕಡಬೂರ ಗ್ರಾಪಂ ವ್ಯಾಪ್ತಿಯ ಸಣ್ಣ ಹಾಗೂ ಅತಿ ಸಣ್ಣ ರೈತರು ರಿಯಾಯ್ತಿ ದರದಲ್ಲಿ ನೀಡಲಾಗುತ್ತಿರುವ ಬೀಜ, ರಸಗೊಬ್ಬರ ಪಡೆದುಕೊಳ್ಳಬೇಕು ಎಂದು ಸಹಾಯಕ ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಹೋಬಳಿಯ ಭಂಕೂರ, ಶಂಕರವಾಡಿ, ಮಾಲಗತ್ತಿ, ಮುತ್ತಿಗಿ, ಕದ್ದರಗಿ, ಜಿವಣಗಿ, ತರಿತಾಂಡಾ, ಅಲ್ದಿಹಾಳ, ಪೇಠಸಿರೂರ, ಮುಗುಳನಾಗಾಂವ, ತೆಗೆನೂರ, ಮರತೂರ, ತೊನಸಿನಹಳ್ಳಿ, ಹೊನಗುಂಟಾ, ಗೋಳಾ ಅನೇಕ ಗ್ರಾಮಗಳಲ್ಲಿ ರೈತರು ಹೊಲವನ್ನು ಹಸನು ಮಾಡಿಕೊಂಡು ಬಿತ್ತನೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು.
ಸದ್ಯ ಮಳೆ ಆಗುತ್ತಿರುವುದರಿಂದ ಹರಗುತ್ತಿದ್ದಾರೆ. ಇನ್ನೂ ಕೆಲವು ಪ್ರದೇಶದಲ್ಲಿ ಹೊಲವನ್ನು ಹಸನು ಮಾಡುವಲ್ಲಿ ತೊಡಗಿದ್ದಾರೆ. ಮಳೆ ಆಗಮನ ವಿಳಂಬವಾದರೆ ಅಲ್ಪಾವಧಿ ಬೆಳೆಗಳ ಬೇಸಾಯಕ್ಕೆ ಸ್ವಲ್ಪ ಹಿನ್ನಡೆಯಾಗುತ್ತದೆ. ಬಿತ್ತನೆ ನಂತರವೂ ಉತ್ತಮ ಮಳೆಯಾಗುವ ಆಶಾಭಾವನೆಯೊಂದಿಗೆ ಒಟ್ಟಾರೆ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.