ಚಿಕ್ಕನಾಯಕನಹಳ್ಳಿ: ಹೊಲದಲ್ಲಿ ರಾಗಿ ಬಿತ್ತಿ ಸುಮಾರು 4 ರಿಂದ 5 ತಿಂಗಳಲ್ಲಿ ಬೆಳೆ ಬರುತ್ತದೆ. ಆದರೆ ರಾಗಿ ಕಣ ಮಾಡಿ ಮನೆಗೆ ರಾಗಿ ಸಾಗಿಸಲು ಕನಿಷ್ಠ ಒಂದು ತಿಂಗಳಾಗುತ್ತದೆ. ಕೂಲಿಗೂ ಜನರ ಕೊರತೆ ಹಾಗಾಗಿ ರೈತರು ಯಂತ್ರದ ಮೊರೆ ಹೋಗಿದ್ದಾರೆ.
ರಾಗಿ ಬಿತ್ತನೆ ಹಾಗೂ ಕಟಾವು ಸಮಯದಲ್ಲಿ ರೈತರು ಎದುರಿಸುವ ಸಮಸ್ಯೆ ನೂರಾರು. ಮಳೆ, ಗೊಬ್ಬರ ಕೊರತೆ, ಸಮಯಕ್ಕೆ ಆಳುಗಳೂ ಸಿಗುವುದಿಲ್ಲ. ಸಿಕ್ಕರು ದುಬಾರಿ ಕೂಲಿ. ರಾಗಿ ಕಾಯಲು ರಾತ್ರಿ ಕಣದಲ್ಲಿ ಮಲಗಬೇಕು ಹೀಗೆ ಹತ್ತಾರು ತೊಂದರೆ ಸಹಿಸಿಕೊಂಡು ರಾಗಿ ಕಣ ಮಾಡಿ ಮನೆಗೆ ತೆಗೆದುಕೊಂಡು ಹೋಗುವಷ್ಟರಲ್ಲಿ ಸಾಕು ಸಾಕಾಗುತ್ತದೆ. ಈಗ ಯಂತ್ರದ ಸಹಾಯದಿಂದ ಕೆಲವೇ ಗಂಟೆಗಳಲ್ಲಿ ರಾಗಿ ಕಣ ಮಾಡಿ ಮನೆಗೆ ಸಾಗಿಸಬಹುದು.
ಯಂತ್ರ ವಿಶೇಷತೆ: ಎರಡು ರಾಗಿ ಕಟಾವು ಯಂತ್ರ ತಮಿಳುನಾಡಿನಿಂದ ತಾಲೂಕಿಗೆ ಬಂದಿದ್ದು, ಎಕರೆ ಲೆಕ್ಕದಲ್ಲಿ ರಾಗಿ ಬೆಳೆ ಕಟಾವು ಮಾಡಲಾಗುತ್ತಿದೆ. ಒಂದು ಎಕರೆ ರಾಗಿ ಬೆಳೆ ಕಟಾವು ಮಾಡಲು ಸುಮಾರು 3600ರಿಂದ 5000 ರೂ. ನಿಗದಿಪಡಿಸಲಾಗಿದೆ. ಈ ಯಂತ್ರವು 10 ಕ್ವಿಂಟಲ್ ರಾಗಿ ಶೇಖರಿಸುವಷ್ಟು ಸಾಮರ್ಥ್ಯ ಹೊಂದಿದ್ದು, ಯಂತ್ರದ ಮೂಲಕವೇ ನೇರವಾಗಿ ಟ್ರ್ಯಾಕರ್ ಅಥವಾ ಚೀಲಗಳಿಗೆ ರಾಗಿ ಹಾಕಬಹುದಾಗಿದೆ. ರಾಗಿ ಪೈರು ಕತ್ತರಿಸಿ ತೆನೆಯಿಂದ ರಾಗಿ ಕಾಳು ಬೇರ್ಪಡಿಸಿ ಹುಲ್ಲು ಪ್ರತ್ಯೇಕಿಸುತ್ತದೆ. ಒಂದು ಬಾರಿಗೆ 10 ಕ್ವಿಂಟಲ್‌ವರೆಗೆ ಯಂತ್ರದಲ್ಲೆ ಶೇಖರಿಸಬಹುದು.
ಕಡಿಮೆ ಖರ್ಚಿನ ಮೂಲಕ ಕೆಲವೇ ಗಂಟೆಗಳಲ್ಲಿ ಮನೆಗೆ ರಾಗಿ ಸಾಗಿಸಬಹುದಾಗಿದೆ. ಒಂದು ಎಕರೆ ಪ್ರದೇಶದಲ್ಲಿ ರಾಗಿ ಕಟಾವು ಮಾಡಲು ಕನಿಷ್ಠ 10 ಕೂಲಿಗಳು ಬೆಳಗ್ಗೆಯಿಂದ ಸಂಜೆಯವರೆಗೂ ಕೆಲಸ ಮಾಡಬೇಕು. ರಾಗಿ ಗುಪ್ಪೆ ಕಟ್ಟಿ ನಂತರ ಬವಣೆ ಮಾಡಿ ಕಣ ಸಾರಿಸಿ ರೋಣುಗಲ್ಲು ಅಥವಾ ಟ್ರ್ಯಾಕ್ಟರ್‌ನಿಂದ ತುಳಿಸಿ, ಊಟ, ತಿಂಡಿ ಖರ್ಚು ಸಮಯ ಉಳಿತಾಯವಾಗುತ್ತದೆ ಎಂಬುದು ರೈತರ ಅಭಿಪ್ರಾಯವಾಗಿದೆ.
ಯಂತ್ರದಿಂದ ಸ್ವಲ್ಪ ಮಟ್ಟಿನ ರಾಗಿ ನಷ್ಟವಾಗುತ್ತದೆ. ಅಕಾಲಿಕ ಮಳೆಯಿಂದ ರಾಗಿ ಉಳಿಸಿಕೊಳ್ಳುವುದು ದೊಡ್ಡ ಕೆಲಸವಾಗಿದೆ. ಕೂಲಿಗಳಿಂದ ಮಾಡಿಸುವ ಕೆಲಸಕ್ಕೆ ಹೋಲಿಸಿದರೆ ಯಂತ್ರ ಬಳಕೆ ಅನುಕೂಲಕರ.
-ಶಂಕರಪ್ಪ, ರೈತ
ಯಂತ್ರಗಳ ಜೊತೆ ಹೊಂದಿಕೊಳ್ಳುವುದು ಅನಿವಾರ್ಯ. ರೈತರಿಗೆ ಕಡಿಮೆ ಖರ್ಚಿನಲ್ಲಿ ಲಾಭ ಸಿಗಬೇಕು. ಸರ್ಕಾರ ರಾಗಿಗೆ ಬೆಂಬಲ ಬೆಲೆ ನಿಗದಿಪಡಿಸಲು ಕ್ರಮ ಕೈಗೊಳ್ಳಬೇಕು.
-ಪವನ್, ರೈತ
* ಚೇತನ್