Advertisement

ಸಿಡಿಲಬ್ಬರದ ಮಳೆಗೆ ರೈತ ಬಲಿ

11:17 PM Apr 27, 2019 | Team Udayavani |

ಬೆಂಗಳೂರು: ಮಡಿಕೇರಿ, ಸುಳ್ಯ, ಹಳಿಯಾಳ, ಬೆಳಗಾವಿ, ಗುಂಡ್ಲುಪೇಟೆ, ತಿಪಟೂರು ಸೇರಿ ರಾಜ್ಯದ ಕೆಲವೆಡೆ ಶನಿವಾರ ಮಳೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ನಿರಲಗಾ ಗ್ರಾಮದಲ್ಲಿ ನರಸಪ್ಪ ಜೈವಂತ ಕದಂ (55) ಎಂಬುವರು ಸಿಡಿಲಿಗೆ ಬಲಿಯಾಗಿದ್ದಾರೆ.

Advertisement

ಶನಿವಾರ ಸಂಜೆ ಹೊಲದಲ್ಲಿ ಕೆಲಸ ಮುಗಿಸಿಕೊಂಡು, ಸೈಕಲ್‌ ಮೇಲೆ ಮನೆಗೆ ವಾಪಸ್‌ ಆಗುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಸಿಡಿಲು ಬಡಿಯಿತು. ಇದೇ ವೇಳೆ, ಚಾಮರಾಜನಗರ ಜಿಲ್ಲೆಯ ಹಲವೆಡೆ ಮಳೆಯಾಗಿದ್ದು, ಗುಂಡ್ಲುಪೇಟೆ ತಾಲೂಕಿನ ಹಲವು ಗ್ರಾಮಗಳಲ್ಲಿ ಶನಿವಾರ ಸುರಿದ ಭಾರೀ ಬಿರುಗಾಳಿ ಮಳೆಗೆ ಹಲವು ಮನೆಗಳು, ಅಂಗಡಿಗಳು ನೆಲಕಚ್ಚಿವೆ.

ತುಮಕೂರು ಜಿಲ್ಲೆ ತಿಪಟೂರಿನ ತಿಮ್ಲಾಪುರದ ಬಳಿ ಮಳೆಗಾಳಿಗೆ ಶನಿವಾರ ಸಂಜೆ 4 ವಿದ್ಯುತ್‌ ಕಂಬಗಳು ರಸ್ತೆಗೆ ಬಿದ್ದಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಂಗಳೂರು ನಗರ, ಬೆಳ್ತಂಗಡಿ, ಗುರುವಾಯನಕೆರೆ, ವೇಣೂರು, ಸುಬ್ರಹ್ಮಣ್ಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಸಂಜೆಯ ವೇಳೆಗೆ ಗುಡುಗು ಸಹಿತ ಮಳೆಯಾದ ವರದಿಯಾಗಿದೆ.

ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮೂರು ದಿನ ಬಿಸಿಗಾಳಿ ಸಾಧ್ಯತೆ: ಈ ಮಧ್ಯೆ, ನೆರೆ ರಾಜ್ಯಗಳಲ್ಲಿ ಬಿಸಿಲಿನ ತಾಪಮಾನ ವಾಡಿಕೆಗಿಂತ ಹೆಚ್ಚಾಗಿದ್ದು, ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಬಿಸಿಗಾಳಿ ಬೀಸುವ ಸಾಧ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಉತ್ತರ ಭಾರತದ ಹಲವು ರಾಜ್ಯಗಳು ಸೇರಿದಂತೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ಭಾಗಗಳಲ್ಲಿ ಬಿಸಿಲಿನ ತಾಪಮಾನ ಸಾಮಾನ್ಯ ದಿನಗಳಿಗಿಂತಲೂ ಹೆಚ್ಚಾಗಿದೆ. ಪರಿಣಾಮ ಒಳನಾಡು ಹಾಗೂ ಉತ್ತರ ಒಳನಾಡಿನ ಹೆಲವೆಡೆಗಳಲ್ಲಿ ಮುಂದಿನ ಮೂರು ದಿನ ಬಿಸಿಗಾಳಿ ಬೀಸುವ ಸಾಧ್ಯತೆಯಿದೆ.

Advertisement

ಉತ್ತರ ಒಳನಾಡಿನ ಜಿಲ್ಲೆಗಳಾದ ಕಲಬುರಗಿ, ಬೀದರ್‌, ರಾಯಚೂರು, ಯಾದಗಿರಿ ಸೇರಿ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಗರಿಷ್ಠ ಉಷ್ಣಾಂಶ ಸರಾಸರಿ 43 ರಿಂದ 44 ಡಿಗ್ರಿ ಸೆಲ್ಸಿಯಸ್‌ ತಲುಪಿದೆ. ಪರಿಣಾಮ ಏ.30 ವರೆಗೆ ಬಿಸಿಗಾಳಿ ಬೀಸಲಿದೆ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಸುನೀಲ್‌ ಗವಾಸ್ಕರ್‌ ಮಾಹಿತಿ ನೀಡಿದ್ದಾರೆ.

ಹಿಂದೂ ಮಹಾಸಾಗರ ಮತ್ತು ಆಗ್ನೇಯ ಬಂಗಾಳ ಕೊಲ್ಲಿ ಕಡಿಮೆ ಒತ್ತಡ ಪ್ರದೇಶದಲ್ಲಿ ಫ‌ನಿ ಚಂಡಮಾರುತ ಹೆಚ್ಚಿನ ಶಕ್ತಿ ಪಡೆದುಕೊಂಡಿದೆ. ಪರಿಣಾಮ ಏ.29 ಮತ್ತು 30 ರಂದು ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ಭಾಗದಲ್ಲಿ ಏ.30ರಿಂದ ಮೋಡ ಕವಿದ ವಾತಾವರಣವಿರಲಿದ್ದು, ಮಳೆ ಆಗುವ ಸಾಧ್ಯತೆಯಿದೆ. ಇದರ ಪರಿಣಾಮದಿಂದ ಬಿಸಿಗಾಳಿಯ ಪ್ರಮಾಣ ಕಡಿಮೆಯಾಗಲಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next