ಬೀದರ: ಮಳೆಯಾಧಾರಿತ ಕೃಷಿ ಪ್ರದೇಶ ಹೊಂದಿರುವ ಬೀದರ ಜಿಲ್ಲೆ ಕಳೆದೆರಡು ವರ್ಷ ಬರಗಾಲಕ್ಕೆ ತುತ್ತಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬವಣೆಯಿಂದ ತಪ್ಪಿಸಿಕೊಳ್ಳಲು ರೈತರು ನೀರಿನ ಸಂರಕ್ಷಣೆಗೆ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ, ಕೈಯಲ್ಲಿದ್ದ ಹಣ ಖರ್ಚು ಮಾಡಿ ನಿರ್ಮಿಸಿಕೊಂಡ ಹೊಂಡವೇ ಅವರನ್ನು ಫಜೀತಿಗೆ ಸಿಲುಕಿಸಿದೆ.
ಇದು ವಿಚಿತ್ರ ಏನಿಸಿದರೂ ಸತ್ಯ. ಸಂಕಷ್ಟದಲ್ಲಿರುವ ರೈತರು ಕೈಯಲ್ಲಿದ್ದ ಹಣ ಖರ್ಚು ಮಾಡಿ ಹೊಂಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದರೂ ಖರ್ಚಾದ ಹಣ ಕೈ ಸೇರದಿರುವುದು ಆತಂಕ ತಂದೊಡ್ಡಿದೆ. ಬೀದರ ಜಿಲ್ಲೆಯಲ್ಲಿ ಕೃಷಿ ಭಾಗ್ಯ ಯೋಜನೆಯಡಿ 2018-19ನೇ ಸಾಲಿನಲ್ಲಿ 2,634 ಕೃಷಿ ಹೊಂಡಗಳು ನಿರ್ಮಾಣವಾಗಿದ್ದು, ಈ ಪೈಕಿ 806 ಫಲಾನುಭವಿ ರೈತರು ನಿರ್ಮಿಸಿಕೊಂಡ ಹೊಂಡಗಳಿಗೆ 5.92 ಕೋಟಿ ರೂ. ಸಹಾಯಧನವೇ ಸಿಕ್ಕಿಲ್ಲ. ಈಗ ರೈತರು ಹಣಕ್ಕಾಗಿ ಕಚೇರಿಗೆ ಅಲೆಯುವಂತಾಗಿದೆ.
ನೀರಾವರಿ ಸೌಲಭ್ಯಗಳ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಮಳೆ ನೀರನ್ನು ಸದುಪಯೋಗ ಮಾಡಿಕೊಳ್ಳಬೇಕಾದ ಸ್ಥಿತಿ ಇದೆ. ಲಭ್ಯ, ಮಳೆಯ ನೀರನ್ನು ಇಂಗಿಸಿ ಭೂಮಿಯಲ್ಲಿರುವ ಅಂತರ್ಜಲ ಹೆಚ್ಚಿಸಬೇಕಿದೆ. ಹಾಗಾಗಿ ಗಡಿ ಜಿಲ್ಲೆಯ ರೈತರು ಕೃಷಿ ಹೊಂಡಗಳಿಂದ ಹಲವು ಸವಲತ್ತು ಪಡೆಯುತ್ತಿದ್ದಾರೆ. ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡಗಳನ್ನು ತೆರೆದು, ಮಳೆ ನೀರನ್ನು ಸಂಗ್ರಹಿಸುತ್ತಿದ್ದಾರೆ. ಮುಂಗಾರಿನಲ್ಲಿ ಸುರಿದ ಹೆಚ್ಚಿನ ಮಳೆ ನೀರನ್ನು ಅದರಲ್ಲಿ ಸಂಗ್ರಹಿಸಿಟ್ಟು ಲಾಭ ಪಡೆಯುತ್ತಿದ್ದಾರೆ. ಇದರಿಂದ ರೈತರಿಗೆ ಬೇಸಿಗೆಯಲ್ಲೂ ವ್ಯವಸಾಯಕ್ಕೆ ನೀರು ಸಹಕಾರಿಯಾಗುತ್ತಿದೆ.
ಕೃಷಿ ಹೊಂಡಕ್ಕೆ ಸುತ್ತಳತೆ ಆಧಾರದ ಮೇಲೆ 18,000 ರಿಂದ 53,000 ರೂ. ಮತ್ತು ಅದರಲ್ಲಿ ಪಾಲಿಥಿನ್ ಹೊದಿಕೆ ಅಳವಡಿಕೆಗೆ 15,000 ರಿಂದ 50,000 ವರೆಗೆ ವೆಚ್ಚ ತಗುಲಲಿದ್ದು, ಇದಕ್ಕೆ ಶೇ. 80ರಿಂದ 90ರಷ್ಟು ಸಬ್ಸಿಡಿ ಇದೆ. 5 ಎಚ್‌ಪಿ ಡಿಸೇಲ್ ಇಂಜಿನ್‌ಗೆ 39,000 ರೂ. ಇದ್ದು ಶೇ. 50ರಿಂದ 90ರಷ್ಟು ಸಬ್ಸಿಡಿ ಸೌಲಭ್ಯ ಇದೆ. ನಾಲ್ವರು ರೈತರು ಗುಂಪಾಗಿ ಬಳಸುವುರಿದ್ದರೆ ಉಚಿತ ಇಂಜಿನ್ ವಿತರಣೆ ಮಾಡಲಾಗುತ್ತಿದೆ. ಸ್ಪಿಂಕ್ಲರ್ ಅಥವಾ ಡ್ರಿಪ್‌ಗೆ 21,640 ರೂ. ವೆಚ್ಚ ಇದ್ದು, ಶೇ. 90ರಷ್ಟು ಸಬ್ಸಿಡಿ ಇದೆ. ಇನ್ನೂ ಪಾಲಿ ಹೌಸ್‌ಗಾಗಿ ಅರ್ಧ ಎಕರೆಗೆ 23.70 ಲಕ್ಷ ರೂ. ವೆಚ್ಚ ಇದ್ದು, ಶೇ. 50ರಿಂದ 90ರಷ್ಟು ಸಬ್ಸಿಡಿ ಸೌಲಭ್ಯ ಇದೆ. ಸ್ವಂತ ಖರ್ಚಿನಲ್ಲಿ ಹೊಂಡ ನಿರ್ಮಿಸಿಕೊಂಡ ಬಳಿಕ ಸರ್ಕಾರ ನೇರವಾಗಿ ಫಲಾಭವಿ ರೈತರ ಖಾತೆಗೆ ಅನುದಾನ ಜಮೆ ಮಾಡುತ್ತದೆ.
ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ರೈತರು 2700 ಕೃಷಿ ಹೊಂಡ ನಿರ್ಮಿಸಿಕೊಂಡು ನೀರು ಸಂರಕ್ಷಣೆಗೆ ಮುಂದಾಗಿದ್ದಾರೆ. ಇದರಲ್ಲಿ 1,828 ಹೊಂಡಗಳಿಗೆ 14.81 ಕೋಟಿ ರೂ. ಅನುದಾನ ಮಾತ್ರ ಬಿಡುಗಡೆಯಾಗಿದ್ದು, ಇನ್ನೂ 806 ಹೊಂಡಗಳ 5.92 ಕೋಟಿ ರೂ. ಅನುದಾನ ಬಾಕಿ ಉಳಿದಿದೆ. ಮಳೆ ಅಭಾವ, ಬೆಳೆಗೆ ಸೂಕ್ತ ಬೆಲೆ ಇಲ್ಲದೇ ಈಗಾಗಲೇ ಕಂಗೆಟ್ಟಿರುವ ರೈತರಿಗೆ ಹೊಂಡಗಳಿಗಾಗಿ ವ್ಯಯಿಸಿದ ಹಣ ಬಾರದಿರುವುದು ಗಾಯದ ಮೇಲೆ ಬರೆ ಹಾಕಿದಂತಾಗಿದೆ.
-ಶಶಿಕಾಂತ ಬಂಬುಳಗೆ