ಬೆಂಗಳೂರು: ಹುಟ್ಟಹಬ್ಬ ಆಚರಿಸಿಕೊಳ್ಳದ್ದಕ್ಕೆ ಬೇಸರಗೊಂಡ ಅಭಿಮಾನಿಯೊಬ್ಬ ಹೊಸಕೆರೆಹಳ್ಳಿಯಲ್ಲಿರುವ ನಟ ಯಶ್ ಮನೆ ಎದುರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ. ಲಗ್ಗೆರೆಯ ನಿವಾಸಿ ರವಿ (28) ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ. ರವಿ ಶೇ.80ರಷ್ಟು ಸುಟ್ಟ ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ಹೇಳಿದರು.
ಹಿರಿಯ ನಟ ಅಂಬರೀಷ್ ನಿಧನ ಹಿನ್ನೆಲೆಯಲ್ಲಿ ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ನಟ ಯಶ್ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದರು. ಆದರೂ ಮಂಗಳವಾರ ಬೆಳಗ್ಗೆ ಹೊಸಕೆರೆಹಳ್ಳಿಯಲ್ಲಿರುವ ಯಶ್ ಮನೆ ಎದುರು ಬಂದ ರವಿ, ತಾನು ಯಶ್ರನ್ನು ನೋಡಬೇಕೆಂದು ಹಠ ಮಾಡಿದ್ದಾನೆ. ಭದ್ರತಾ ಸಿಬ್ಬಂದಿ ಒಳಗಡೆ ಬಿಟ್ಟಿಲ್ಲ.
ಇದರೊಂದಿಗೆ ನೆಚ್ಚಿನ ನಟ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಬೇಸರಗೊಂಡ ರವಿ, ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಘಟನೆ ನಡೆಯುತ್ತಿದ್ದಂತೆ ಯಶ್ ಮನೆಯ ಭದ್ರತಾ ಸಿಬ್ಬಂದಿ ಆತನನ್ನು ರಕ್ಷಿಸಿ, ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮನೆ ಮುಂದೆ ನೆರೆದಿದ್ದ ಇತರೆ ಅಭಿಮಾನಿಗಳು ಮತ್ತು ಸ್ಥಳೀಯರು, ರವಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಯಶ್ ಹಾಗೂ ಕುಟುಂಬದವರು ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ಹೇಳಿದರು.
ಆಸ್ಪತ್ರೆಗೆ ಭೇಟಿ ನೀಡಿದ ಯಶ್: ವಿಷಯ ತಿಳಿಯುತ್ತಿದ್ದಂತೆ ನಟ ಯಶ್ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ರವಿ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅಭಿಮಾನಿಯ ಈ ವರ್ತನೆ ಬಹಳ ಬೇಸರವಾಗಿದೆ. ಇದನ್ನು ಅಭಿಮಾನ ಅಂತಾ ಹೇಳಲ್ಲ. ಪ್ರತಿ ವರ್ಷ ಅಂಬಿ ಅಣ್ಣನ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೆ. ಈ ವರ್ಷ ಅಂಬಿ ಅಣ್ಣ ನಮ್ಮೊಡನೆ ಇಲ್ಲ ಎಂದು ಹುಟ್ಟುಹಬ್ಬ ಬೇಡ ಎಂದು ಹೇಳಿದ್ದೆ. ಇದೇ ಕೊನೆ ಯಾರೇ ಅಭಿಮಾನಿಗಳು ಈ ರೀತಿ ಮಾಡಿಕೊಂಡರೆ ಮತ್ತೂಮ್ಮೆ ನಾನು ಎಲ್ಲಿಗೂ ಬರುವುದಿಲ್ಲ ಎಂದು ಯಶ್ ಖಡಕ್ ಆಗೇ ಹೇಳಿದ್ದಾರೆ.